Advertisement

Israel ಸೇನೆ ನಿರಂತರ ದಾಳಿ; ಒಂದು ವಾರದಲ್ಲಿ 20 ಹೆಜ್ಬುಲ್ಲಾ ಉಗ್ರರ ಹತ್ಯೆ!

01:43 AM Sep 30, 2024 | Team Udayavani |

ಬೈರುತ್‌/ಜೆರುಸಲೇಂ: ಕಳೆದ 1 ವಾರದಲ್ಲಿ 20 ಮಂದಿ ಹೆಜ್ಬುಲ್ಲಾ ನಾಯಕರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆ ರವಿವಾರ ಹೇಳಿದೆ. ಪ್ರಮುಖ ನಾಯಕ ನ‌ಸ್ರಲ್ಲಾನ ಹತ್ಯೆಯ ಬಳಿಕ ಮತ್ತೆ ಮೂವರು ಪ್ರಮುಖ ನಾಯಕರಾದ ನಬೀಲ್‌ ಕೌಕ್‌, ಇಬ್ರಾಹಿಂ ಹುಸೇನ್‌ ಮತ್ತು ಸಮೀರ್‌ ತಫೀಕ್‌ ಸಹ ಹತ್ಯೆ ಮಾಡಲಾಗಿದೆ ಎಂದು ಹೇಳಿದೆ.

Advertisement

ಲೆಬನಾನ್‌ ಮತ್ತು ಗಾಜಾ ಪಟ್ಟಿಯ ಮೇಲೆ ನಿರಂತರವಾಗಿ ದಾಳಿ ಕೈಗೊಳ್ಳುವ ಮೂಲಕ ಮನೆಗಳಲ್ಲಿ ಹಾಗೂ ಬಂಕರ್‌ಗಳಲ್ಲಿ ಅಡಗಿಕೊಂಡಿದ್ದ ಹೆಜ್ಬುಲ್ಲಾ ನಾಯಕರನ್ನು ಹತ್ಯೆ ಮಾಡಲಾಗಿದೆ ಎಂದಿದೆ. ಈ ನಡುವೆ, ಶನಿವಾರ ನಡೆಸಲಾಗಿದ್ದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾದ ಪ್ರಮುಖ ನಾಯಕ ನಬೀಲ್‌ ಕೌಕ್‌ ಎಂಬಾತನ್ನು ಕೊಲ್ಲಲಾಗಿದೆ.

ಇದೇ ವೇಳೆ, ರವಿವಾರ ಲೆಬನಾನ್‌ನ ಬೇಕಾ ವ್ಯಾಲಿಯ ಮನೆಯೊಂದರ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 11 ಮಂದಿ ಸಾವಿಗೀಡಾಗಿದ್ದಾರೆ. ಇದಲ್ಲದೇ ಗಾಜಾ ಮೇಲೆ ನಡೆಸಿದ ದಾಳಿಯಲ್ಲಿ 3 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ.

ಗಡಿಯಲ್ಲಿ ಟ್ಯಾಂಕರ್‌ಗಳ ನಿಯೋಜನೆ: ಲೆಬನಾನ್‌ ವಿರುದ್ಧ ದೊಡ್ಡ ಮಟ್ಟದ ಯುದ್ಧಕ್ಕೆ ಇಸ್ರೇಲ್‌ ಸನ್ನದ್ಧವಾಗಿದೆ. ಲೆಬನಾನ್‌ ಗಡಿಯಲ್ಲಿ ಇಸ್ರೇಲ್‌ ಸೇನೆಯ ಚಲನವಲನ ಹೆಚ್ಚಿರುವುದು ಮತ್ತು ಟ್ಯಾಂಕರ್‌ಗಳ ನಿಯೋಜನೆಯು ಇದಕ್ಕೆ ಪುಷ್ಟಿ ನೀಡಿದೆ.

ಯಾರು ನಬೀಲ್‌ ಕೌಕ್‌?
ಉಗ್ರ ನಬೀಲ್‌ ಕೌಕ್‌ ಹೆಜ್ಬುಲ್ಲಾದ ಸೆಂಟ್ರಲ್‌ ಕೌನ್ಸಿಲ್‌ನ ಉಪ ಮುಖ್ಯಸ್ಥನಾಗಿದ್ದ. 1995ರಿಂದ 2010ರ ವರೆಗೆ ಈತ ದಕ್ಷಿಣ ಲೆಬನಾನ್‌ನಲ್ಲಿ ಮಿಲಿಟರಿ ಕಮಾಂಡರ್‌ ಆಗಿ ಕಾರ್ಯನಿರ್ವಹಿಸಿದ್ದ. 2020ರಲ್ಲಿ ಈತನ ವಿರುದ್ಧ ಅಮೆರಿಕ ಸರಕಾರ ನಿರ್ಬಂಧ ಹೇರಿತ್ತು.

Advertisement

ನಸ್ರಲ್ಲಾ ಹತ್ಯೆಗೆ ನೆರವಾದ ಇರಾನ್‌ನ ಬೇಹುಗಾರ!
ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಹತ್ಯೆಗೆ ಮುನ್ನ ಆತ ಅದೇ ಕಟ್ಟಡದ ಬಂಕರ್‌ನಲ್ಲಿದ್ದಾನೆ ಎಂಬ ಮಾಹಿತಿ ಇಸ್ರೇಲ್‌ ಸೇನೆಗೆ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಲಭ್ಯವಾಗಿದೆ. ಹೆಜ್ಬುಲ್ಲಾ ವಿರುದ್ಧ ದಾಳಿ ಆರಂಭಿಸಿದಾಗಿನಿಂದಲೂ ಇಸ್ರೇಲ್‌ ಲೆಬನಾನ್‌ನಲ್ಲಿ ಹಲವು ಬೇಹುಗಾರರನ್ನು ನಿಯೋಜಿಸಿದೆ. ಆ ಪೈಕಿ ಒಬ್ಬ ಬೇಹುಗಾರ, ದಕ್ಷಿಣ ಲೆಬನಾನ್‌ನಲ್ಲಿರುವ ಹೆಜ್ಬುಲ್ಲಾದ ಭೂಗತ ಪ್ರಧಾನ ಕಚೇರಿಯಲ್ಲಿ ಮುಖ್ಯಸ್ಥ ನಸ್ರಲ್ಲಾ ಇರುವ ಬಗ್ಗೆ ಖಚಿತಪಡಿಸಿದ್ದ. ಜತೆಗೆ ಅದೇ ದಿನ ಬಂಕರ್‌ನಲ್ಲಿ ಪ್ರಮುಖ ಉಗ್ರ ಮುಖಂಡರ ಸಭೆ ಇರುವುದಾಗಿಯೂ ತಿಳಿಸಿದ್ದ. ಇದು ದಾಳಿಗೆ ಸೂಕ್ತ ಸಮಯ ಎಂದು ನಿರ್ಧರಿಸಿದ ಇಸ್ರೇಲ್‌ ಸೇನೆ, “ಒಂದೇ ಕಲ್ಲಿಗೆ ಎರಡು ಹಕ್ಕಿ’ ಎಂಬಂತೆ ನಿಖರ ದಾಳಿ ನಡೆಸಿ ನಸ್ರಲ್ಲಾ ಸಹಿತ ಹಲವು ಉಗ್ರರನ್ನು ಹೊಡೆದುರುಳಿಸಿತು.

ಹೆಜ್ಬುಲ್ಲಾ ಬಳಿಕ ಹೌತಿ ಉಗ್ರರ ಮೇಲೆ ಇಸ್ರೇಲ್‌ ಸೇನೆ ದಾಳಿ!
ಜೆರುಸಲೇಮ್‌: ಹೆಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾ ಸೇರಿ 20ಕ್ಕೂ ಹೆಚ್ಚು ಹೆಜ್ಬುಲ್ಲಾ ಸದಸ್ಯರನ್ನು ಕೊಂದ ಇಸ್ರೇಲ್‌ ಸೇನೆ ಈಗ ಯೆಮನ್‌ನಲ್ಲಿರುವ ಹೌತಿ ಬಂಡುಕೋರರನ್ನು ಗುರಿಯಾಗಿಸಿ ಕಾರ್ಯಾಚರಣೆ ಆರಂಭಿಸಿರುವುದಾಗಿ ಹೇಳಿದೆ. ಯೆಮನ್‌ನಿಂದ 1800 ಕಿ.ಮೀ. ದೂರದಲ್ಲಿರುವ ರಾಸ್‌ ಇಸಾ ಹಾಗೂ ಹುದೈದಾ ಪ್ರದೇಶಗಳಲ್ಲಿರುವ ಹೌತಿ ನೆಲೆಗಳ ಮೇಲೆ ಡಜನ್‌ಗಟ್ಟಲೆ ಯುದ್ದ ವಿಮಾನಗಳೊಂದಿಗೆ ಇಸ್ರೇಲ್‌ ವಾಯು ಸೇನೆ ದಾಳಿ ನಡೆಸಿದೆ. ಇತ್ತೀಚೆಗೆ ಇಸ್ರೇಲ್‌ ಮೇಲೆ ಹೌತಿ ಬಂಡುಕೋರರು ನಡೆಸಿದ ದಾಳಿಗೆ ಇದು ಪ್ರತಿಕ್ರಿಯೆ ಎಂದು ಇಸ್ರೇಲ್‌ ಸೇನೆ ಹೇಳಿದೆ.

ನಮ್ಮ ಬಾಹುಗಳಿಗೆ ಸಿಗದ ಪ್ರದೇಶವೇ ಇಲ್ಲ: ನೆತನ್ಯಾಹು
ನಸ್ರಲ್ಲಾ ಹತ್ಯೆಯು ಇರಾನ್‌ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ಪಾಠ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. “ಮಧ್ಯಪ್ರಾಚ್ಯದಲ್ಲಾಗಲೀ, ಇರಾನ್‌ನಲ್ಲಾಗಲೀ ಇಸ್ರೇಲ್‌ನ ದೀರ್ಘ‌ ಬಾಹುಗಳಿಗೆ ನಿಲುಕದ ಪ್ರದೇಶವೇ ಇಲ್ಲ. ಇದು ಎಷ್ಟು ಸತ್ಯ ಎಂಬುದು ಇಂದು ನಿಮಗೆ ಗೊತ್ತಾಗಿರಬಹುದು. ನಮ್ಮ ತಂಟೆಗೆ ಯಾರು ಬಂದರೂ ನಾವು ಸುಮ್ಮನಿರಲ್ಲ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next