Advertisement

Syria ವೆಸ್ಟ್‌ಬ್ಯಾಂಕ್‌ನಲ್ಲೂ ಇಸ್ರೇಲ್‌ ಮಾರಕ ಪ್ರಹಾರ

12:08 AM Oct 23, 2023 | Team Udayavani |

ರಾಫಾ/ಹೊಸದಿಲ್ಲಿ: ಗಾಜಾ ಪಟ್ಟಿಗೆ ಪರಿಹಾರ ಸಾಮಗ್ರಿಗಳು ಪ್ರವೇಶಿಸಿರುವಂತೆಯೇ ಹಮಾಸ್‌ ಉಗ್ರರನ್ನು ನಿರ್ದಯೆಯಿಂದ ದಮನ ಗೊಳಿಸುವ ಕಾರ್ಯಾಚರಣೆಯನ್ನು ಇಸ್ರೇಲ್‌ ಮುಂದುವರಿಸಿದೆ.

Advertisement

ಗಾಜಾ ಪಟ್ಟಿಯ ರಾಫಾ ಮತ್ತು ಖಾನ್‌ ಯೂನಿಸ್‌ ನಗರಗಳ ಮೇಲೆ ನಿರಂತರ ವಾಗಿ ದಾಳಿ ನಡೆಸಲಾಗಿದೆ. ಸಿರಿಯಾ ಮತ್ತು ಲೆಬನಾನ್‌ನ ವಿಮಾನ ನಿಲ್ದಾಣಗಳ ಮೇಲೂ ಇಸ್ರೇಲ್‌ ವಾಯುದಾಳಿ ನಡೆಸಿದ್ದು, ಡಮಾಸ್ಕಸ್‌ ಮತ್ತು ಅಲೆಪ್ಪೋ ವಿಮಾನ ನಿಲ್ದಾಣಗಳಿಂದ ವಿಮಾನ ಸಂಚಾರ ಸ್ಥಗಿತಗೊಂಡಿದೆ ಎನ್ನಲಾಗಿದೆ.

ಸಿರಿಯಾದ ಡಮಾಸ್ಕಸ್‌, ಅಲೆಪ್ಪೋ ವಿಮಾನ ನಿಲ್ದಾಣಗಳ ಮೇಲೆಯೂ ಇಸ್ರೇಲ್‌ನ ಕ್ಷಿಪಣಿಗಳು ಎರಗಿವೆ. ಹೀಗಾಗಿ ವಿಮಾನ ಯಾನಗಳಲ್ಲಿ ವ್ಯತ್ಯಯ ಉಂಟಾಗಿದೆ. ವೆಸ್ಟ್‌ಬ್ಯಾಂಕ್‌ನ ಜೆನಿನ್‌ ನಗರದ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ರಭಸಕ್ಕೆ ಹಲವಾರು ಕಟ್ಟಡಗಳು ಧರಾಶಾಯಿಯಾಗಿವೆ.

ಶನಿವಾರ ರಾತ್ರಿ ಗಾಜಾ ಪಟ್ಟಿಯ ಮೇಲೆ ನಡೆಸಲಾಗಿದ್ದ ದಾಳಿಯಲ್ಲಿ ಹಲವಾರು ಹಮಾಸ್‌ ಉಗ್ರರು ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ ಸಂಘಟನೆಯ ಡೆಪ್ಯುಟಿ ಕಮಾಂಡರ್‌ ಸೇರಿದ್ದಾನೆ.

ದಕ್ಷಿಣಕ್ಕೆ ತೆರಳುವಂತೆ ಎಚ್ಚರಿಕೆ
ಗಾಜಾ ಪಟ್ಟಿಯಲ್ಲಿ ದಾಳಿ ನಡೆಸುವುದಕ್ಕೆ ಮುನ್ನ ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ನೀಡಿದ ಇಸ್ರೇಲ್‌ ಸೇನಾಪಡೆ, ದಕ್ಷಿಣಕ್ಕೆ ಕಡ್ಡಾಯವಾಗಿ ತೆರಳಲೇಬೇಕು. ಇಲ್ಲದಿದ್ದರೆ ಸ್ಥಳೀಯರನ್ನೂ ಉಗ್ರರೆಂದು ಪರಿಗಣಿಸಬೇಕಾಗುತ್ತದೆ ಎಂದು ತಾಕೀತು ಮಾಡಿದೆ.

Advertisement

ಪರಿಣಾಮ ಗಂಭೀರ
ಲೆಬನಾನ್‌ನ ಹೆಜ್ಬುಲ್ಲಾ ಉಗ್ರ ಸಂಘಟನೆ ಯುದ್ಧಕ್ಕೆ ಇಳಿದರೆ ಪರಿಣಾಮ ಭೀಕರವಾಗಬಹುದು ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ.

ಒತ್ತೆಯಾಳುಗಳ ಸಂಖ್ಯೆ ಹೆಚ್ಚಳ
ಉಗ್ರರ ಜತೆಗೆ ಕಾಳಗ ಮುಂದುವರಿದಿರುವಂತೆಯೇ ಹಮಾಸ್‌ ಉಗ್ರರ ಬಳಿ ಇರುವ ಒತ್ತೆಯಾಳುಗಳ ಸಂಖ್ಯೆ 212ನ್ನು ಮೀರಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ. ಅ. 7ರಿಂದ ಈಚೆಗೆ ಇಸ್ರೇಲ್‌ನಲ್ಲಿ 5,400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 7,400ಕ್ಕೂ ಅಧಿಕ ರಾಕೆಟ್‌ಗಳನ್ನು ಉಡಾಯಿಸಲಾಗಿದೆ.

ಮುಂದುವರಿದ ನೆರವು
ಕಾಳಗ ಮುಂದುವರಿದಿರುವಂತೆಯೇ ರಾಫಾ ಗಡಿ ಮೂಲಕ ಅಗತ್ಯವಾಗಿರುವ ನೆರವಿನ ವಸ್ತುಗಳನ್ನು ಹೊತ್ತಿರುವ ಬೃಹತ್‌ ಟ್ರಕ್‌ಗಳು ಗಾಜಾ ಪಟ್ಟಿಯನ್ನು ಪ್ರವೇಶಿಸಿವೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ರವಾನೆ
ಪ್ಯಾಲೆಸ್ತೀನ್‌ಗೆ ಭಾರತದಿಂದ ಕಳುಹಿಸಲಾಗಿರುವ ಮಾನವೀಯ ನೆರವು ಈಜಿಪ್ಟ್ ತಲುಪಿದೆ. 6.5 ಟನ್‌ ವೈದ್ಯಕೀಯ ಪರಿಹಾರ ಸಾಮಗ್ರಿಗಳು, 32 ಟನ್‌ ವಿಪತ್ತು ನಿರ್ವಹಣ ಸಾಮಗ್ರಿಗಳನ್ನು ಭಾರತೀಯ ವಾಯುಪಡೆಯ ಸಿ-17 ಸರಕು ಸಾಗಣೆ ವಿಮಾನದಲ್ಲಿ ಈಜಿಪ್ಟ್ನ ಅಲ್‌-ಏರಿಷ್‌ ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಗಚಿ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಪ್ಯಾಲೆಸ್ತೀನ್‌ ಅಧ್ಯಕ್ಷ ಮೆಹಮೂದ್‌ ಅಬ್ಟಾಸ್‌ ಜತೆ ಮಾತನಾಡಿದ್ದ ವೇಳೆ ನೆರವು ನೀಡುವ ಬಗ್ಗೆ ವಾಗ್ಧಾನ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next