ವಾಷಿಂಗ್ಟನ್: ಕೋವಿಡ್ 19 ವೈರಸ್ ಗೆ ಜಗತ್ತು ಬೆಚ್ಚಿಬಿದ್ದಿದ್ದು, ಮಾರಣಾಂತಿಕ ವೈರಸ್ ಗೆ ಲಸಿಕೆ ಕಂಡುಹಿಡಿಯಲು ವಿಜ್ಞಾನಿಗಳು ಕಾರ್ಯನಿರತರಾಗಿದ್ದು, ಏತನ್ಮಧ್ಯೆ ಕೋವಿಡ್ 19 ಸೋಂಕು ಪೀಡಿತರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಇಸ್ರೇಲ್ ತುರ್ತು ಕಾನೂನನ್ನು ದೇಶದಲ್ಲಿ ಜಾರಿಗೊಳಿಸಿದೆ.
ರಾತ್ರೋರಾತ್ರಿ ಕಾನೂನು ಜಾರಿ:
ಇಸ್ರೇಲ್ ಕೋವಿಡ್ 19 ವೈರಸ್ ಪೀಡಿತರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಜನರು ಬಳಸುವ ಮೊಬೈಲ್ ಫೋನ್ ಡಾಟಾವನ್ನು ಟ್ರ್ಯಾಕ್ ಮಾಡುವ ಕಾನೂನನ್ನು ಜಾರಿಗೆ ತಂದಿದೆ. ಬಿಬಿಸಿ ವರದಿ ಪ್ರಕಾರ, ಇಸ್ರೇಲ್ ಕ್ಯಾಬಿನೆಟ್ ಸದಸ್ಯರು ಇಡೀ ರಾತ್ರಿ ಚರ್ಚಿಸಿ ತುರ್ತು ಕಾನೂನನ್ನು ಪಾರ್ಲಿಮೆಂಟ್ ನ ಅನುಮತಿ ಪಡೆದು ಜಾರಿಗೊಳಿಸಿರುವುದಾಗಿ ತಿಳಿಸಿದೆ.
ಕೋವಿಡ್ 19 ವೈರಸ್ ಸೋಂಕು ಮಾರಿಯನ್ನು ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಮುಂದಾಗಿರುವುದಾಗಿ ಇಸ್ರೇಲ್ ತಿಳಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಫೇಸ್ ಬುಕ್ ಪೋಸ್ಟ್ ನಲ್ಲಿ, ನಾವು ಕೋವಿಡ್-19 ಸೋಂಕು ಪೀಡಿತರನ್ನು ಪತ್ತೆಹಚ್ಚುವ ಸಂಖ್ಯೆ ದಿಢೀರ್ ಹೆಚ್ಚಳಗೊಂಡಿದೆ. ಯಾರು ಸೋಂಕು ಪೀಡಿತರಾಗಿದ್ದಾರೋ ಅವರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ನಾವು ಇಂದು ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದೇವೆ. ಕೋವಿಡ್ 19 ಸೋಂಕು ಪೀಡಿತ ವ್ಯಕ್ತಿ ಎಲ್ಲಿದ್ದಾರೆ ಎಂಬುದನ್ನು ಮೊಬೈಲ್ ಡಾಟಾದ ಮೂಲಕ ಪತ್ತೆ ಹಚ್ಚುತ್ತಿದ್ದೇವೆ. ಈ ರೀತಿ ಪತ್ತೆ ಹಚ್ಚಲ್ಪಟ್ಟ ವ್ಯಕ್ತಿಗಳು 14 ದಿನ ಕ್ವಾರಂಟೈನ್ (ಪ್ರತ್ಯೇಕವಾಗಿ) ನಲ್ಲಿ ಇರಬೇಕು.
ಕೋವಿಡ್ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ. ಅದು ಎಷ್ಟು ಎಂಬುದು ನಾವು ಘೋಷಿಸಲಿದ್ದೇವೆ. ಕ್ವಾರಂಟೈನ್ ಎಂಬುದು ಶಿಫಾರಸ್ಸು ಅಲ್ಲ, ಆದರೆ ನಾವು ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಸೋಂಕು ತಡೆಗಟ್ಟಲು ಇದು ತುರ್ತು ಅಗತ್ಯ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.
ನಾನು ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದ್ದೇನೆ, ಪ್ರತಿದಿನ 3000 ಸಾವಿರ ಮಂದಿಯನ್ನು ಪರೀಕ್ಷಿಸಬೇಕು ಎಂದು. ಇದು ಮುಂಬರುವ ದಿನಗಳಲ್ಲಿ 5 ಸಾವಿರಕ್ಕೆ ಏರಿಸುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಇದು ದಕ್ಷಿಣ ಕೊರಿಯಾಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ನಡೆಸಿದಂತಾಗಲಿದೆ ಎಂದು ಬೆಂಜಮಿನ್ ವಿಶ್ವಾಸವ್ಯಕ್ತಪಡಿಸಿದ್ದಾರೆ.
ಇಸ್ರೇಲ್ ನಲ್ಲಿ 200 ಮಂದಿಗೆ ಕೋವಿಡ್ -19 ವೈರಸ್ ಪೀಡಿತರಾಗಿರುವುದು ದೃಢವಾಗಿದೆ, 427 ಮಂದಿ ಸೋಂಕು ಪೀಡಿತರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.