50 ವರ್ಷಗಳ ಹಿಂದೆ ಕೆಲವು ಸಭೆಗಳನ್ನು ಬಿಟ್ಟರೆ, ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದುದು ದೇವಾಲಯಗಳಲ್ಲಿ, ಗಣೇಶನ ಪೆಂಡಾಲ್‌ಗಳು, ನವ ರಾತ್ರಿ, ರಾಮನವಮಿ, ತ್ಯಾಗರಾಜ-ಪುರಂದರ ದಾಸರ ಆರಾಧನೆಗಳಲ್ಲಿ. ಆಗ ಸಭೆಗಳು ಕನಿಷ್ಠ 3 ಗಂಟೆಗಳ ಕಾಲ ನಡೆದರೆ ಇನ್ನಿತರೆಡೆಗಳಲ್ಲಿ ಸಮಯದ ಮಿತಿಯು ಗಣಿಸ ಬಹುದಾದ ಒಂದು ಅಂಶವೇ ಅಲ್ಲ. ಹತ್ತಾರು ಕೃತಿಗಳು, ಮನೋ ಧರ್ಮದ ರಾಗಾಲಾಪನೆ – ನೆರವಲ್, ಸ್ವರ ಪ್ರಸ್ತಾರ, ರಾಗ- ತಾನ- ಪಲ್ಲವಿಗಳು, ಎರಡೆರಡು ತನಿ ಅವರ್ತನಗಳು ತದನಂತರ ದೇವರ ನಾಮ, ಜಾವಳಿ, ಪದ, ಶ್ಲೋಕ, ತರಂಗ, ಅಷ್ಟ ಪದಿಗಳೆಲ್ಲ ವಿಜೃಂಭಿಸುತಿತ್ತು. ಹಾಡು ವರಿಗಲ್ಲ, ಕೇಳುಗರಿಗೂ ಇಂದು ಗಡಿಬಿಡಿಯ ಸ್ಥಿತಿ. ಕಾಲದ ಮಿತಿಯಲ್ಲಿ ಹಾಡಬೇಕಾದ ಅನಿವಾರ್ಯತೆಯು ಗ್ರಾಮೋಫೋನ್ ರೆಕಾರ್ಡ್‌ಗಳಿಂದಲೇ ಪ್ರಾರಂಭವಾದರೂ ರೇಡಿಯೋ ಸಂಗೀತವು ಈ ಮಿತಿಯ ಅಭ್ಯಾಸವನ್ನು ಚೆನ್ನಾಗಿಯೇ ಮೂಡಿಸಿತು.
ಧ್ವನಿವರ್ಧಕ ಇಲ್ಲದ ಕಾಲವು ಬದಲಾಗಿ, ಒಂದೇ ಮೈಕ್ ಇಟ್ಟು, ಇಡೀ ತಂಡದ ಸಂಗೀತ ಕೇಳುತ್ತಿದ್ದ ಕಾಲಕ್ಕೆ ಬಂತು. ಮೃದಂಗಕ್ಕೆ ಮೈಕೇ ಇಲ್ಲದಿದ್ದ ಕಾಲದಿಂದ ಈಗ ಎರಡೆರಡು ಮೈಕಿನ ಹಾವಳಿ ಬೇರೆ. ನಿರಾಳತೆಯಿಂದ ಶಬ್ದ ಮಾಲಿನ್ಯದ ಈಗ ಸಂಗೀತದ ಪಯಣ. ಡ್ರಮ್ಸ, ರಿದಮ್ ಪ್ಯಾಡ್ ಮುಂತಾದ ವಾದ್ಯಗಳು ಸಹಾ ಶಾಸ್ತ್ರೀಯತೆಯ ಪರಿಧಿಗೆ ಬರುತ್ತಿರುವುದು ಮತ್ತೂಂದು ಬದಲಾ ವಣೆ. ರಾಜಾಶ್ರಯದಿಂದ ಪ್ರಜಾಶ್ರಯಕ್ಕೆ ಬಂದ ಮೇಲೆ ಸಭೆಗಳು ಕಲಾವಿದರನ್ನು ಕೈ ಹಿಡಿದರೂ ಹೊರಗಿನ ರಾಜ್ಯದ ಕಲಾವಿದರಿಗೇ ಮಣೆ ಹಾಕುವ, ಸರಕಾರದ ದೊಡ್ಡ ಮೊತ್ತದ ಪ್ರಶಸ್ತಿಗಳಿಗೆ ದೊಡ್ಡ ಹೆಸರೆಂದು ಅವರಿಗೇ ಕೊಡುವ ಸಂಭಾವನೆಯಲ್ಲಿ ಸಭೆ- ಸರಕಾರಗಳ ತಾರತಮ್ಯ ವಿಪರೀತವಾಗಿ ಬದ ಲಾವಣೆಯಾಗಿದೆ. ಜಾಗತೀಕರಣದ ಅನಂತರ ಗೂಗಲ್ ಗುರುವಿನ ಬಳಿ ಕೇಳಿದ್ದೆಲ್ಲ ಕೈಗೆಟಕುವ, ಗುರುಸೇವೆ, ಗುರು ಕುಲ ಗಳಿಲ್ಲದಿದ್ದರೂ ಎಲ್ಲ ಕಲಿಯ ಬಹು ದಾದ ಅನುಕೂಲ ಇದ್ದರೂ ಎಲ್ಲರ ಶೈಲಿ ಗಳು ಬೆರೆತು, ವಿವಿಕ್ತತೆಯನ್ನು ಮರೆತು, ಗುರು ಪರಂಪರೆಯ ಶೈಲಿ (ಬಾಣಿ) ಎನ್ನುವ ಅಸ್ಮಿ ತೆಯೇ ಇಲ್ಲದೆ ಎಲ್ಲರದ್ದೂ ಕೇಳಿದರೂ ಒಂದೇ ರೀತಿ ಎನಿಸುವ ಅದೇತನ ಇಂದು ಯುವ ಸಂಗೀತಗಳಲ್ಲಿದೆ.
ಈ ಐವತ್ತು ವರ್ಷಗಳ ಹಿಂದೆ ರೇಡಿಯೋ, ಟಿ.ವಿ.ಗಳು ಇಲ್ಲದಿದ್ದ ಕಾಲದಲ್ಲಿ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಿದ್ದ ರಸಿಕರು ಹೆಚ್ಚು. ಕಾರ್ಯಕ್ರಮದ ಪ್ರಾರಂಭಕ್ಕೆ ಮುಂಚೆಯೇ ಕಾಲಿಡಲು ಜಾಗ ವಿಲ್ಲದಷ್ಟು ಕಿಕ್ಕಿರಿದು ಸೇರುತ್ತಿದ್ದ ಜನ ಸಾಗರ. ಈಗ ದುರ್ಲಭವಾಗಿದೆ. ಅಂದು ಕಲಾವಿದರು ಕಡಿಮೆ; ರಸಿಕರು ಹೆಚ್ಚು. ಈಗ ಕಲಾವಿದರ, ಕಲಿಯುವವರ ಸಂಖ್ಯೆ ಹೆಚ್ಚು, ರಸಿಕರ ಸಂಖ್ಯೆ ಕಡಿಮೆ! ಅದರಲ್ಲೂ ಸುಮ್ಮನೆ ತಿಳಿಯದೇ ಸಂಗೀತ ಕೇಳುವರಿಗಿಂತ ತಿಳಿದು ಕೇಳುವ ರಸಿಕರ ಸಂಖ್ಯೆ ಮತ್ತಷ್ಟು ಕಡಿಮೆ ಯಾಗಿದೆ. ಕೇಳಬೇಕೆಂದು ಆಸೆಯಿದ್ದರೂ ಒಂದು ಕಡೆಯಿಂದ ಮತ್ತೂಂದು ಕಡೆ ಹೋಗಿ ಕೇಳುವ ಸಂಜೆಗಳು ಈಗ ಟ್ರಾಫಿಕ್‌ನ ಘೋರ ಅಡಚಣೆ ಗಳಿಂದ ಆ ಆಸೆಗೆ ಮಣ್ಣೆರಚಿವೆ.
ಈಗಂತು ಫೇಸ್‌ಬುಕ್, ಯೂಟ್ಯೂ ಬ್‌ಗಳಲ್ಲಿ ಲೈವ್ ಮಾಡುವ, ತನ್ಮೂಲಕ ಪರೋಕ್ಷ ರಸಿಕರನ್ನು ಹಿಡಿಯಬೇಕೆಂದು ಹೊರಟಿರುವ ಪ್ರಯತ್ನಕ್ಕೆ ತಕ್ಕ ಮಟ್ಟಿಗೆ ಫಲಸಿಕ್ಕಿದೆ. ಭೇಷ್, ಭಲೇ ಎಂದು ಮೆಚ್ಚು ವ ಚಪ್ಪಾಳೆ ತಟ್ಟುವ ಸುಖವು ಯಾಕೋ ಮರೀ ಚಿಕೆಯಾಗುತ್ತಿದೆಯೆನಿಸಿದರೆ ಅಚ್ಚರಿ ಇಲ್ಲ.
ಡಾ| ಶ್ರೀಕಾಂತಂ ನಾಗೇಂದ್ರ ಶಾಸ್ತ್ರೀ, ಸಂಗೀತ ಗಾಯಕರು ಮತ್ತು ಉಪ- ಕುಲ ಸಚಿವರು, ಮಹಾರಾಣಿ ಕ್ಲಸ್ಟರ್ ವಿವಿ