Advertisement
33ರ ಹರೆಯದ, ಕೂಟದ ಅಗ್ರ ಶ್ರೇಯಾಂಕದ ಜಾನ್ ಇಸ್ನರ್ ಶನಿವಾರ ರಾತ್ರಿಯ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯದ ಮ್ಯಾಥ್ಯೂ ಎಬೆxನ್ ಅವರನ್ನು ಭಾರೀ ಹೋರಾಟದ ಬಳಿಕ 6-4, 6-7 (6-8), 6-1 ಅಂತರದಿಂದ ಮಣಿಸಿದರು. ಇದು ಎಬೆxನ್ ವಿರುದ್ಧ ಆಡಿದ 5 ಎಟಿಪಿ ಪಂದ್ಯಗಳಲ್ಲಿ ಇಸ್ನರ್ ಸಾಧಿಸಿದ 4ನೇ ಜಯ. ಏಕೈಕ ಸೋಲು ಇದೇ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಎದುರಾಗಿತ್ತು. ಇದಕ್ಕೀಗ ಇಸ್ನರ್ ಸೇಡು ತೀರಿಸಿಕೊಂಡರು.ದಿನದ ಇನ್ನೊಂದು ಸೆಮಿಫೈನಲ್‌ನಲ್ಲಿ ರಿಯಾನ್ ಹ್ಯಾರಿಸನ್ ಬ್ರಿಟನ್ನಿನ ಕ್ಯಾಮರಾನ್ ನೋರಿ ವಿರುದ್ಧ 2-6, 6-3, 6-2 ಅಂತರದ ಗೆಲುವು ಸಾಧಿಸಿದರು.
ಇದು ಜಾನ್ ಇಸ್ನರ್ ಕಾಣುತ್ತಿರುವ 8ನೇ ಅಟ್ಲಾಂಟಾ ಓಪನ್ ಫೈನಲ್. ಹಾಗೆಯೇ 9 ಸೆಮಿಫೈನಲ್‌ಗಳಲ್ಲಿ ಸಾಧಿಸಿದ 8ನೇ ಗೆಲುವು. “ಇದು ಅತ್ಯಂತ ಕಠಿನ ಪಂದ್ಯವಾಗಿತ್ತು. 3ನೇ ಸೆಟ್‌ನಲ್ಲಿ ಆರಂಭಿಕ ಮೇಲುಗೈ ಸಾಧಿಸಿದ್ದರಿಂದ ಸ್ವಲ್ಪ ಮಟ್ಟಿನ ಒತ್ತಡ ಕಡಿಮೆಯಾಯಿತು. ಮತ್ತೆ ಫೈನಲ್ ತಲುಪಿದ್ದಕ್ಕೆ ಬಹಳ ಖುಷಿಯಾಗುತ್ತಿದೆ’ ಎಂದು ಇಸ್ನರ್ ಪ್ರತಿಕ್ರಿಯಿಸಿದ್ದಾರೆ. “ರಿಯಾನ್ ಹ್ಯಾರಿಸನ್ ಬಗ್ಗೆ ನನಗೆ ಬಹಳಷ್ಟು ಗೊತ್ತು. ನಾವಿಬ್ಬರೂ ಉತ್ತಮ ಗೆಳೆಯರು. ನಮ್ಮ ನಡುವೆ ಯಾವುದೇ ರಹಸ್ಯವಿಲ್ಲ. ಇದು ಕಳೆದ ಫೈನಲ್‌ನ ಪುನರಾವರ್ತನೆ’ ಎಂದು ಇಸ್ನರ್ ಹೇಳಿದರು. 2017ರ ಫೈನಲ್‌ನಲ್ಲಿ ಇಸ್ನರ್ 7-6 (8-6), 7-6 (9-7) ಅಂತರದಿಂದ ಹ್ಯಾರಿಸನ್‌ಗೆ ಸೋಲುಣಿಸಿದ್ದರು.