ಢಾಕಾ: ಅಹ್ಮದೀಯ ಸಂಘಟನೆಯ ಕಾರ್ಯಕ್ರಮದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮನೆಗಳು, ಅಂಗಡಿಗಳನ್ನು ಧ್ವಂಸ ಮಾಡಿದ ಘಟನೆ ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದೆ. ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಪ್ರತಿಭಟನೆ ನಡೆಸಿದ ಇಸ್ಲಾಮಿಸ್ಟ್ ಸಂಘಟನೆಗಳು ಢಾಕಾ-ಪಂಚಗಢ ಹೆದ್ದಾರಿಯನ್ನು ತಡೆದು ಅಹ್ಮದೀಯ ಜನರು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ದಾಳಿಯಲ್ಲಿ ಮೂವರು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಅಹ್ಮದೀಯ ಸಮುದಾಯವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಧಾರ್ಮಿಕ ಸಭೆಯಾದ ಮೂರು ದಿನಗಳ ‘ಜಲ್ಸಾ ಸಲಾನಾ’ವನ್ನು ಘೋಷಿಸಿದ ನಂತರ ಈ ಪ್ರತಿಭಟನೆ ನಡೆಯಿತು. ಪೊಲೀಸರು ಈ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ.
ಅಹ್ಮದೀಯ ಸಮುದಾಯದ ಜನರಿಗೆ ಸೇರಿದ ನೂರಕ್ಕೂ ಹೆಚ್ಚಿನ ಮನೆಗಳು ಮತ್ತು ಅಂಗಡಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಲಾಗಿದೆ.
ಪೊಲೀಸರ ಮೇಲೆ ಇಸ್ಲಾಮಿಸ್ಟ್ ಗಳು ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದ ನಂತರ ದಾಳಿ ಪ್ರಾರಂಭವಾಯಿತು. ಉದ್ವಿಗ್ನತೆ ಹೆಚ್ಚಾದಾಗ, ಅಂಗಡಿ ಮಾಲೀಕರು ಪಟ್ಟಣದಾದ್ಯಂತ ತಮ್ಮ ಶಟರ್‌ಗಳನ್ನು ಎಳೆದರು. ಪ್ರತಿಭಟನೆಕಾರರು ಕೆಲವು ರಸ್ತೆಗಳಲ್ಲಿ ಟೈರ್ ಗಳನ್ನು ಸುಟ್ಟಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ ಎಂದು ಉತ್ತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಂ.ಸಿರಾಜುಲ್ ಹುದಾ ತಿಳಿಸಿದ್ದಾರೆ.