Advertisement

ಬಾಗಿಲಿಗೆ ಬಂತು ಇಸ್ಲಾಮಿಕ್‌ ಸ್ಟೇಟ್‌

11:52 PM Apr 23, 2019 | Team Udayavani |

ಕರ್ನಾಟಕದ 7 ಮಂದಿ ಸೇರಿದಂತೆ 321 ಮಂದಿಯನ್ನು ಬಲಿತೆಗೆದುಕೊಂಡ ಶ್ರೀಲಂಕಾ ಸ್ಫೋಟಕ್ಕೆ ಜಾಗತಿಕ ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ ಹೊಣೆ ಹೊತ್ತುಕೊಂಡಿದೆ. ನ್ಯೂಜಿಲ್ಯಾಂಡ್‌ನ‌ ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಮಂಗಳವಾರ ಘೋಷಣೆ ಮಾಡಿದೆ. ಶ್ರೀಲಂಕಾದ ರಕ್ಷಣಾ ಸಚಿವ ರುವಾನ್‌ ವಿಜಯವರ್ಧನೆ ಸಂಸತ್‌ನಲ್ಲಿ ಮಾತನಾಡಿ ಈಸ್ಟರ್‌ ದಿನದಂದು ನಡೆದ ಘಟನೆ ಪ್ರತೀಕಾರದ ದಾಳಿ ಎಂದು ಖಚಿತಪಡಿಸುತ್ತಿದ್ದಂತೆಯೇ ಈ ಉಗ್ರ ಸಂಘಟನೆ ವತಿಯಿಂದ ಹೇಳಿಕೆ ಹೊರಬಿದ್ದಿದೆ. ಇದರಿಂದಾಗಿ ನಮ್ಮ ದೇಶದಲ್ಲಿಯೂ ಎಚ್ಚರಿಕೆ ಅಗತ್ಯ. ಹೀಗಾಗಿ, ಮನೆಯ ಬಾಗಿಲಿಗೇ ದುಷ್ಟ ಸಂಘಟನೆ ಕಾಲಿಟ್ಟಂತಾಗಿದೆ.

Advertisement

ಸ್ಥಳೀಯವಾಗಿ ಇರುವ ನ್ಯಾಷನಲ್‌ ತೌಹೀತ್‌ ಜಮಾನ್‌ (ಎನ್‌ಟಿಜೆ) ವಿರುದ್ಧ ಸಂಶಯದ ಬೆರಳುಗಳು ಇದ್ದರೂ, ಅದನ್ನು ಪುಷ್ಟೀಕರಿಸುವಂಥ ಅಂಶಗಳು ಇರಲಿಲ್ಲ. ದ್ವೀಪ ರಾಷ್ಟ್ರದ ತನಿಖಾ ಸಂಸ್ಥೆಗಳು ಕಂಡುಕೊಂಡ ಪ್ರಕಾರ ಸ್ಥಳೀಯ ಜೆಹಾದಿ ಸಂಘಟನೆಗಳು ಸ್ಫೋಟ, ಆತ್ಮಹತ್ಯಾ ದಾಳಿಗೆ ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆಗಳ ನೆರವು ಇಲ್ಲದೆ, ಕರಾರುವಾಕ್ಕಾಗಿ ಭಾನುವಾರದ ದುರಂತ ನಡೆಯಲು ಸಾಧ್ಯವೇ ಇಲ್ಲ ಎನ್ನುವುದು ಖಚಿತವಾಗಿತ್ತು.

ಅಲ್‌-ಖೈದಾ ನಂತರ ಪ್ರಬಲವಾಗಿ ಬೆಳೆಯುತ್ತಿರುವ ಉಗ್ರ ಸಂಘಟನೆ ಎಂದರೆ ಇಸ್ಲಾಮಿಕ್‌ ಸ್ಟೇಟ್‌. ಅದು ಪ್ರಧಾನವಾಗಿ ಕಾರ್ಯಾಚರಣೆ ನಡೆಸುವ ಸಿರಿಯಾದಲ್ಲಿ ಅದನ್ನು ಸಂಪೂರ್ಣವಾಗಿ ಸೋಲಿಸಲಾಗಿದೆ ಎಂದು ಅಮೆರಿಕ ಹೇಳಿಕೊಂಡಿದ್ದರೂ, ವಿಶ್ವದ ಇತರ ಭಾಗಗಳಲ್ಲಿ ಅದರ ಪ್ರಭಾವ ಈಗಾಗಲೇ ವ್ಯಾಪಿಸಿಯಾಗಿದೆ. ಹೀಗಾಗಿ, ಆಯಾ ದೇಶಗಳಲ್ಲಿ ಸ್ಥಳೀಯವಾಗಿ ಕಾರ್ಯಾಚರಣೆ ನಡೆಸುವ ಜೆಹಾದಿ ಗುಂಪುಗಳು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆಯನ್ನೇ ಮಾದರಿಯಾಗಿಟ್ಟುಕೊಂಡು ಅಥವಾ ಅವರಿಂದಲೇ ನೇರವಾಗಿ ತರಬೇತಿ ಪಡೆದು ಭಾನುವಾರದಂಥ ಕುಕೃತ್ಯಗಳನ್ನು ನಡೆಸುತ್ತವೆ.

ಮೂರು ಹೋಟೆಲ್‌ಗ‌ಳ ಪೈಕಿ ಎರಡರ ಮೇಲೆ ನಡೆದ ಸ್ಫೋಟ ಕೃತ್ಯದಲ್ಲಿ ಇಬ್ಬರು ಸಹೋದರರು ಪಾಲ್ಗೊಂಡಿದ್ದಾರೆ ಎನ್ನುವ ಅಂಶ ಕೂಡ ಈಗ ಗೊತ್ತಾಗಿದೆ. ಕಳವಳಕಾರಿಯಾದ ಅಂಶವೇನೆಂದರೆ ಒಂದು ದೇಶದಲ್ಲಿ ನಿಗದಿತ ಸಮುದಾಯದ ಶ್ರದ್ಧಾ ಕೇಂದ್ರಗಳ ಮೇಲೆ ದಾಳಿ ಆಯಿತು ಎಂದ ಮಾತ್ರಕ್ಕೆ ಮತ್ತೂಂದು ದೇಶದಲ್ಲಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಮುದಾಯದ ಭಕ್ತಿಯ ಕೇಂದ್ರಗಳ ಮೇಲೆ ದಾಳಿ ನಡೆಸುವ ಪರಿಪಾಠ ನಿಜಕ್ಕೂ ಆಘಾತಕಾರಿ. ನಮ್ಮ ದೇಶದಲ್ಲಿ ಇಂಥ ಘಟನೆಗಳು ಹೊಸತೇನಲ್ಲ. 1992ರ ಘಟನೆಗೆ ಪ್ರತೀಕಾರವಾಗಿ 1993ರಲ್ಲಿ ಮುಂಬೈನಲ್ಲಿ ಸರಣಿ ಸ್ಫೋಟಗಳು ನಡೆದದ್ದು ಈ ಮಾದರಿಯ ಘಟನೆಗೆ ಉದಾಹರಣೆಯಾಗಿದೆ.

ನ್ಯಾಷನಲ್‌ ತೌಹೀತ್‌ ಜಮಾನ್‌ (ಎನ್‌ಟಿಜೆ) ಸಂಘಟನೆ ವಿರುದ್ಧ ಆರಂಭಿಕ ಹಂತದಲ್ಲಿ ಸಂಶಯ ವ್ಯಕ್ತಪಡಿಸಲಾಗಿತ್ತು. ಆ ರಾಷ್ಟ್ರದಲ್ಲಿ ಬೌದ್ಧ ಧರ್ಮಕ್ಕೆ ಸೇರಿದ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಿದ ಆರೋಪವಿದೆ. ಇನ್ನೊಂದು ವಾದದ ಪ್ರಕಾರ ಎನ್‌ಟಿಜೆ ಸಂಘಟನೆ ಪ್ರತ್ಯೇಕಗೊಂಡು ಶ್ರೀಲಂಕಾ ತೌಹೀದ್‌ ಜಮಾತ್‌ (ಎಸ್‌ಎಲ್‌ಟಿಜೆ) ಎಂಬ ಗುಂಪು ರೂಪುಗೊಂಡಿದೆ.

Advertisement

ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ದಾಳಿಗೆ ತಾನೇ ಕಾರಣ ಎಂದು ಹೇಳಿಕೊಂಡರೂ, ಶ್ರೀಲಂಕಾದಲ್ಲಿನ ಯಾವ ಉಗ್ರ ಸಂಘಟನೆ ಅದರ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿತ್ತು ಎಂಬ ವಿಚಾರ ಇದುವರೆಗೆ ರಹಸ್ಯವಾಗಿಯೇ ಇದೆ. ಈ ಬಗ್ಗೆ ಹೆಚ್ಚಿನ ತನಿಖೆಯಿಂದಲೇ ಮಾಹಿತಿ ಬಹಿರಂಗವಾಗಬೇಕಿದೆ.

ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಪರ ಮೃದು ಧೋರಣೆ ಹೊಂದಿರುವ ವ್ಯಕ್ತಿಗಳು, ಸಂಘಟನೆಗಳ ವಿರುದ್ಧ ಆಯಾ ರಾಷ್ಟ್ರಗಳ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ದಾಳಿ, ಬಂಧನ ನಡೆಸಿದ್ದು ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಇಸ್ಲಾಮಿಕ್‌ ಸ್ಟೇಟ್‌ನ ಕುಕೃತ್ಯಗಳಿಗೆ ಮರುಳಾಗುವವರನ್ನು ತಪ್ಪಿಸಲು ಆದ್ಯ ಕ್ರಮ ಕೈಗೊಳ್ಳಬೇಕಾಗಿದೆ. ಜತೆಗೆ ಇಂಥ ಪ್ರಯತ್ನಗಳ ಹೊರತಾಗಿಯೂ ದಾರಿ ತಪ್ಪಿದವರಿಗೆ ದಂಡನೆಯೇ ಯೋಗ್ಯವಾದ ಔಷಧ. ಆ ನಿಟ್ಟಿನಲ್ಲಿ ರಾಜಿ ಮಾಡುವುದೂ ತಪ್ಪಾಗುತ್ತದೆ.

ನ್ಯೂಜಿಲೆಂಡ್‌ ಘಟನೆ, ಶ್ರೀಲಂಕಾದಲ್ಲಿನ ದುರಂತವೂ ಮನುಕುಲಕ್ಕೆ ಕಪ್ಪುಚುಕ್ಕೆಯೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next