ಅಬುಜಾ : ವಿಶ್ವದ ಅತೀ ಹೆಚ್ಚು ಹೆಂಡಿರು,ಮಕ್ಕಳನ್ನು ಹೊಂದಿದ ದಾಖಲೆಗೆ ಪಾತ್ರವಾಗಿದ್ದ ನೈಜಿರೀಯಾದ ಮುಸ್ಲಿಂ ಬೋಧಕ ಅಲ್ ಹಾಜಿ ಮೊಹಮ್ಮದ್ ಅಬುಬಕರ್ ಬೆಲ್ಲೋ ಮಸಾಬಾ ನಿಧನ ಹೊಂದಿರುವುದಾಗಿ ವರದಿಯಾಗಿದೆ. ಮಸಾಬಾಗೆ 93 ವರ್ಷ ಪ್ರಾಯವಾಗಿತ್ತು.
130 ಕ್ಕೂ ಹೆಚ್ಚು ಹೆಂಡಿರ ಗಂಡ, 203 ಮಕ್ಕಳ ತಂದೆ ಎಂಬ ದಾಖಲೆಗೆ ಪಾತ್ರವಾಗಿ ವಿಶ್ವಾದ್ಯಂತ ಸುದ್ದಿಯಾಗಿದ್ದ ಬಾಬಾ ಮಸಾಬಾ ವಯೋಸಹಜ ಅನಾರೋಗ್ಯದಿಂದ ಬಿಡಾ ಎಂಬಲ್ಲಿನ ತನ್ನ ಸ್ವಗೃಹದಲ್ಲಿ ಮೃತಪಟ್ಟಿರುವುದಾಗಿ ನೈಜಿರೀಯಾದ ಪತ್ರಿಕೆಗಳು ವರದಿ ಮಾಡಿವೆ.
2008 ರಲ್ಲಿ ಮಸಾಬಾ ಬಹುಪತ್ನಿತ್ವದ ವಿವರಗಳನ್ನು ಡೈಲಿ ಟ್ರಸ್ಟ್ ಸುದ್ದಿ ಪತ್ರಿಕೆ ವರದಿ ಮಾಡಿದ ಬಳಿಕ ಆ ವಿಚಾರ ವಿಶ್ವಾದ್ಯಂತ ಭಾರೀ ಸುದ್ದಿಯಾಗಿತ್ತು.
ವಯಸ್ಸಾದರೂ ತನ್ನ ಮೊಮ್ಮಕ್ಕಳ ಪ್ರಾಯದವರನ್ನು ಕೈ ಹಿಡಿದು ಮಸಾಬಾ ದಾಖಲೆ ನಿರ್ಮಿಸಿದ್ದು, ಅಚ್ಚರಿಯಂದರೆ ಇದೀಗಲೂ ಕೆಲ ಪತ್ನಿಯರೂ ಗರ್ಭಿಣಿ ಇದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.
2008 ರಲ್ಲಿ ಬಿಬಿಸಿ ವಾಹಿನಿಯೊಂದಿಗೆ ಮಾತನಾಡಿದ್ದ ಮಸಾಬಾ ‘ನಾನು ಯಾರನ್ನೂ ಕರೆದಿಲ್ಲ,ಯಾರನ್ನೂ ಹುಡುಕಿಕೊಂಡು ಹೋಗಿಲ್ಲ. ಅವರೇ ಬಂದು ನನ್ನೊಡನೆ ಬಾಳಲು ಮುಂದಾಗಿದ್ದಾರೆ. ನನಗೆ ದೇವರು ಇದನ್ನು ಮಾಡಲು ಹೇಳಿದ್ದು ನಾನು ಅವರನ್ನು ಮದುವೆಯಾಗಿದ್ದೇನೆ ಅಷ್ಟೆ.10 ಮಂದಿ ಹೆಂಡತಿಯರಿದ್ದರೆ ವ್ಯಕ್ತಿ ಸಾಯುತ್ತಾನೆ… ನನಗೆ ಇಷ್ಟು ಹೆಂಡತಿಯರನ್ನು ಸಂಭಾಳಿಸಲು ಅಲ್ಲಾಹು ಶಕ್ತಿ ನೀಡಿದ್ದಾನೆ’ ಎಂದಿದ್ದನ್ನು ನೆನಪಿಸಿಕೊಳ್ಳಬಹುದು.
ಪತ್ನಿಯರು, ಮಕ್ಕಳ ಸಮ್ಮುಖದಲ್ಲಿ ಅಪಾರ ಜನಸಾಗರದ ನಡುವೆ ಮಸಾಬಾ ಅಂತಿಮ ಸಂಸ್ಕಾರ ನಡೆದಿದೆ ಎಂದು ವರದಿಯಾಗಿದೆ.
ಮಸಾಬಾ ನಿವಾಸ