Advertisement

Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌

09:41 AM Oct 24, 2024 | Team Udayavani |

ಉಡುಪಿ: ಯೋಗ ಎನ್ನುವುದು ಮಾಹಿತಿ ಅಲ್ಲ, ಅದನ್ನು ಜಗತ್ತಿನ ಎಲ್ಲರೂ ಜೀವನದಲ್ಲಿ ಅಳವಡಿಕೊಳ್ಳಬೇಕೆಂಬ ಆಕಾಂಕ್ಷೆ ಇದೆ ಎಂದು ಪತಂಜಲಿ ಯೋಗ ಪೀಠ ಹರಿದ್ವಾರದ ಸಂಸ್ಥಾಪಕ ಬಾಬಾ ರಾಮ್‌ದೇವ್‌ ಹೇಳಿದರು.

Advertisement

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ(ಅ24) ಬೆಳಗ್ಗೆ  51ನೇ ಅಖಿಲ ಭಾರತ ಪ್ರಾಚ್ಯವಿದ್ಯಾಸಮ್ಮೇಳನದಲ್ಲಿ ನಡೆದ ಪತಂಜಲಿ ಯೋಗ ಶಿಬಿರವನ್ನು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಗಳೊಂದಿಗೆ ಉದ್ಘಾಟಿಸಿ ರಾಮ್ ದೇವ್ ಅವರು ಯೋಗದ ಮಹತ್ವದ ಕುರಿತು ಅನೇಕ ಮಾಹಿತಿ ನೀಡಿದರು.

”ಸನಾತನ ಧರ್ಮದ ಶಾಶ್ವತ ಸಿದ್ದಾಂತದ ಪ್ರಮುಖ ಭಾಗ ಯೋಗ,ಅದು ನಮ್ಮ ಪೂರ್ವಜರ ವಿರಾಸತ್. ಋಷಿ ಮುನಿಗಳು ನಮಗೆ ನೀಡಿದ ಅಮೂಲ್ಯ ಸಂಪತ್ತು. ಜಗತ್ತಿಗೆ ಯೋಗದ ಮಹತ್ವಿಕೆಯ ಅರಿವಾಗಿದ್ದು, ಕೆಲವೇ ದಿನಗಳಲ್ಲಿ 80% ಜನರು ಯೋಗ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಯೋಗ ಮಾಡದೇ ಹೋದರೆ ಆಗಂತುಕರ ಆಗಮನ ದೇಹದಲ್ಲಿ ಆಗುತ್ತದೆ. ಜೀವನದಲ್ಲಿ ಸಂತುಲನ ಕಾಪಾಡಲು ಯೋಗಾಸನಗಳನ್ನು ಮಾಡುವುದು ಅತೀ ಅಗತ್ಯ. ಇಡೀ ಜಗತ್ತಿನಲ್ಲಿ ಯೋಗ ಪ್ರಸರಣವಾಗಿ ರೋಗ ಮುಕ್ತವಾಗಬೇಕು” ಎಂದರು.

Advertisement

”ಸ್ವಸ್ಥ ಸಮಾಜ ಸಮೃದ್ಧ ಸಮಾಜ ನಿರ್ಮಾಣವಾಗಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ಯೋಗ ಮತ್ತು ಭಗವದ್ ಗೀತೆಯ ಪ್ರಸರಣವಾಗಬೇಕು. ಬದಲಾವಣೆ ತರಲು ಆ ಮಹತ್ವಿಕೆಗಳ ಅರಿವು ಜಗತ್ತಿಗೆ ಆಗಬೇಕಾಗಿದೆ” ಎಂದರು.

”ಕೋಟಿ ಗೀತಾ ಲೇಖನ ಯಜ್ಞದ ಮೂಲಕ ಪುತ್ತಿಗೆ ಶ್ರೀಗಳು ಜಗತ್ತಿಗೆ ಗೀತೆಯ ಸಾರ ಹೇಳಿಕೊಟ್ಟು ಮಹೋನ್ನತ ಕಾರ್ಯ ಮಾಡುತ್ತಿದ್ದಾರೆ. ವಿಶ್ವಕ್ಕೆ ಆದರ್ಶಪ್ರಾಯವಾದ ಕಾರ್ಯ ಇದು. ಅವರ ಈ ಪರ್ಯಾಯದ ಅವಧಿಯಲ್ಲಿ ಶ್ರೀ ಮಧ್ವಾಚಾರ್ಯರ ಪುಣ್ಯ ಭೂಮಿ ಉಡುಪಿಯಲ್ಲಿ  ಶ್ರೀಕೃಷ್ಣನ ದರ್ಶನ ಪಡೆದು, ಪುತ್ತಿಗೆ ಶ್ರೀಪಾದರ ಆಶೀರ್ವಾದ ಪಡೆದು ಯೋಗ ತರಬೇತಿ ನೀಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ” ಎಂದು ಬಾಬಾ ರಾಮ್ ದೇವ್ ಹೇಳಿದರು.

”ನನಗೆ ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಪಡೆದು ಹೊಸ ರೀತಿಯ ಅನುಭೂತಿಯಾಯಿತು, ಪತಂಜಲಿ ಯೋಗಪೀಠದ ವತಿಯಿಂದ ಶ್ರೀಪಾದರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ನಾನು 50 ವರ್ಷಗಳಿಂದ ಯೋಗದ ‘ಪರ್ಯಾಯ ಮಾಡುತ್ತಿದ್ದೇನೆ” ಎಂದು ಬಾಬಾ ರಾಮ್ ದೇವ್ ಹೇಳಿದರು.

‘ವಿಶ್ವದ ಎಲ್ಲ ಜನರ ಆಚರಣೆಗಳನ್ನು ನಾವು ಗೌರವಿಸುತ್ತೇವೆ, ರಷ್ಯಾ, ಚೀನಾ ಮಾತ್ರವಲ್ಲದೆ ಕಿಮ್ ಜಾಂಗ್ ಅವರ ಉತ್ತರಕೊರಿಯಾವೂ ಯೋಗಕ್ಕೆ ತಲೆಬಾಗಲಿದೆ’ ಎಂದು ರಾಮ್ ದೇವ್ ಹೇಳಿದರು.

ಯೋಗ ಸಮರ್ಪಣೆ
ಪರ್ಯಾಯ ಪುತ್ತಿಗೆ ಶ್ರೀಗಳು ಸಂಸ್ಕೃತದಲ್ಲೇ ಮಾತನಾಡಿ ” ಯೋಗೀಶ್ವರನಾದ ಕೃಷ್ಣನ ಸನ್ನಿಧಿಯಲ್ಲಿ ಯೋಗ ಸಮರ್ಪಣೆ ಮಾಡಲು ಬಾಬಾ ರಾಮ್ ದೇವ್ ಅವರು ಆಗಮಿಸಿದ್ದಾರೆ. ಸಮಸ್ತ ಲೋಕಕ್ಕೆ ತ್ರಿಲೋಕ ವಿಜಯಿಯಾದ ಅರ್ಜುನನಂತೆ ಯೋಗ ಪ್ರಚಾರ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಸಮಗ್ರ ಜಗತ್ತಿಗೆ ಶಾಶ್ವತವಾದ ಯೋಗ ಸಂಪತ್ತು ಹಂಚುತ್ತಿದ್ದಾರೆ. ಯೋಗ ಮತ್ತು ಗೀತೆಯ ಸಾರ ಜಗತ್ತಿಗೆ ತಿಳಿಸಬೇಕು” ಎಂದರು.

ಪತಂಜಲಿ ಯೋಗ ಪೀಠದ ಅನೇಕ ಯೋಗ ಪಟುಗಳು ಕಠಿನ ಯೋಗಾಸನಗಳನ್ನು ಪ್ರದರ್ಶಿಸಿದರು.

ನಿತ್ಯ ಬೆಳಗ್ಗೆ ಪತಂಜಲಿ ಯೋಗ

ಅ.24ರಿಂದ 26ರವರೆಗೆ ಪ್ರತಿದಿನ ಬೆಳಗ್ಗೆ 5.30ರಿಂದ 7.30ರವರೆಗೆ ಶ್ರೀ ಕೃಷ್ಣಮಠ ಶ್ರೀ ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಭಾರತೀಯ ವಿದ್ವತ್‌ ಪರಿಷತ್‌ ಆಶ್ರಯದಲ್ಲಿ ನಡೆಯಲಿರುವ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾಸಮ್ಮೇಳನದಲ್ಲಿ ನಿತ್ಯ ಬೆಳಗ್ಗೆ ಪತಂಜಲಿ ಯೋಗ ಇರಲಿದೆ.

ಈ ಶಿಬಿರದಲ್ಲಿ ಬಾಬಾ ರಾಮ್‌ದೇವ್‌ ಅವರು ಯೋಗ, ಆಸನ, ಪ್ರಾಣಾಯಾಮ ಸಹಿತ ಸುದೃಢ ಆರೋಗ್ಯಕ್ಕೆ ಪೂರಕವಾದ ಹಲವು ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ.

ಉಚಿತ ಪ್ರವೇಶ
ಯೋಗಕ್ಕೆ ಬರುವವರು ಯೋಗ ಮಾಡಲು ಪೂರಕವಾದ ಮ್ಯಾಟ್ರಸ್‌(ಹಾಸಿಗೆ) ತರಬೇಕು. ಯೋಗ ಶಿಬಿರವನ್ನು ಬಾಬಾ ರಾಮ್‌ದೇವ್‌ ನಡೆಸಿಕೊಡಲಿದ್ದಾರೆ. ಹೀಗಾಗಿ ಸರಿಯಾಗಿ ಬೆಳಗ್ಗೆ 5.30ರಿಂದ ಬೆಳಗ್ಗೆ 7.30ರವರೆಗೆ 2 ಗಂಟೆಗಳ ಕಾಲ ನಡೆಯಲಿದೆ. ಯಾರು ಬೇಕಾದರೂ ಪಾಲ್ಗೊಳ್ಳಬಹುದು ಮತ್ತು ಯಾವುದೇ ಶುಲ್ಕ ಇರುವುದಿಲ್ಲ.

ವರದಿ ಮತ್ತು ಚಿತ್ರಗಳು: ವಿಷ್ಣುದಾಸ್ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next