ಕೈರೋ : ಇರಾಕ್ ಪಡೆಗಳು ಪಶ್ಚಿಮ ಮೊಸೂಲ್ ಅನ್ನು ಮರಳಿ ವಶಪಡಿಸಿಕೊಳ್ಳುವತ್ತ ಮುನ್ನಗ್ಗುತ್ತಿರುವಂತೆಯೇ ಐಸಿಸ್ ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಗ್ಧಾದಿ, ಇರಾಕ್‌ನಲ್ಲಿ ತನ್ನ ಸಂಘಟನೆಗೆ ಸೋಲಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.
ಈ ಹಿಂದೆ ತನ್ನನ್ನು ತಾನು ಖಲೀಫನೆಂದು ಘೋಷಿಸಿಕೊಂಡಿದ್ದ ಅಲ್ ಬಗ್ಧಾದಿ, ತನ್ನ ವಿದಾಯ ಭಾಷಣದಲ್ಲಿ ತನ್ನ ಸಂಘಟನೆಯ ಅರಬೇತರ ಹೋರಾಟಗಾರರಿಗೆ “ನಿಮ್ಮ ನಿಮ್ಮ ದೇಶಗಳಿಗೆ ನೀವು ಈ ಕೂಡಲೇ ಮರಳಿ, ಇಲ್ಲವೇ ನಿಮ್ಮನ್ನು ನೀವೇ ಸ್ಫೋಟಿಸಿಕೊಳ್ಳಿ’ ಎಂದು ಆದೇಶಿಸಿದ್ದಾನೆ.
ಅಲ್ ಬಗ್ಧಾದಿ ಹೇಳಿಕೆಯೊಂದನ್ನು ನೀಡಿದ್ದು ಅದಕ್ಕೆ “ವಿದಾಯ ಭಾಷಣ’ ಎಂದಾತ ಹೆಸರು ಕೊಟ್ಟಿದ್ದಾನೆ. ಇದನ್ನು ಐಸಿಸ್ ಉಗ್ರ ಸಂಘಟನೆಯ ಪ್ರಚಾರಕರಿಗೆ ಮತ್ತು ಮೌಲ್ವಿಗಳಿಗೆ ಮತ್ತು ಮತ ಪಂಡಿತರಿಗೆ ಹಂಚಲಾಗಿದೆ ಎಂದು ಇರಾಕ್ ಟಿವಿ ಜಾಲ ಅಲ್‌ಸುಮಾರಿಯಾ ವನ್ನು ಉಲ್ಲೇಖೀಸಿ ಅಲ್ ಅರೇಬಿಯಾ ವರದಿ ಮಾಡಿದೆ.
ಐಸಿಸ್ ಉಗ್ರರ ವಶದಲ್ಲಿರುವ ಕೊನೆಯ ತಾಣವಾಗಿರುವ ಮೊಸೂಲ್ ಅನ್ನು ವಶಪಡಿಸಿಕೊಳ್ಳುವತ್ತ ಮುನ್ನಗ್ಗುತ್ತಿರುವ ಇರಾಕೀ ಸೇನೆಯು ಐಸಿಸ್ ಉಗ್ರರ ಕುಣಿಕೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.
“ನಿಮ್ಮ ನಿಮ್ಮ ದೇಶಗಳಿಗೆ ಈ ಕೂಡಲೇ ಮರಳಿ; ಇಲ್ಲವೇ ನಿಮ್ಮನ್ನು ನೀವೇ ಸ್ಫೋಟಿಸಿಕೊಳ್ಳಿ; ಸ್ವರ್ಗದಲ್ಲಿ ನಿಮಗೆ ನಾನು 72 ಮಹಿಳೆಯರನ್ನು ಅನುಭೋಗಕ್ಕೆ ನೀಡುತ್ತೇನೆ’ ಎಂದು ಅಲ್ ಬಗ್ಧಾದಿ ತನ್ನ ಐಸಿಸ್ ಸಂಘಟನೆಯ ಅರಬೇತರ ಹೋರಾಟಗಾರರಿಗೆ ಹೇಳಿದ್ದಾನೆ.
ಈ ಹಿಂದೆ ಹಲವು ಬಾರಿಯ ಬಾಂಬ್ ದಾಳಿಗಳಲ್ಲಿ ಗಾಯಗೊಂಡಿದ್ದು ಸತ್ತೇ ಹೋಗಿದ್ದಾನೆಂದು ಭಾವಿಸಲಾಗಿದ್ದ ಅಲ್ ಬಗ್ಧಾದಿಯ ತಲೆಗೆ 1 ಕೋಟಿ ಡಾಲರ್ ಇನಾಮನ್ನು ಈ ಹಿಂದೆಯೇ ಘೋಷಿಸಲಾಗಿದೆ.