Advertisement

ಮಾಡೆಲ್‌ ಬಲೆಗೆ ಬಿದ್ದ ವಾಯುಪಡೆ ಅಧಿಕಾರಿ

08:05 AM Feb 10, 2018 | Karthik A |

ಹೊಸದಿಲ್ಲಿ: ಭಾರತೀಯ ವಾಯುಪಡೆಗೆ (ಐಎಎಫ್) ಸಂಬಂಧಿಸಿದ ರಹಸ್ಯಗಳನ್ನು ತನ್ನ ಗುಪ್ತ ಪ್ರೇಯಸಿಗೆ ಗುಟ್ಟಾಗಿ ರವಾನಿಸುತ್ತಿದ್ದ ಆರೋಪದ ಮೇರೆಗೆ ಅರುಣ್‌ ಮರ್ವಾಹ (51) ಎಂಬ ಐಎಎಫ್ ಅಧಿಕಾರಿಯನ್ನು ದಿಲ್ಲಿ ಪೊಲೀಸರ ವಿಶೇಷ ದಳ ವಶಕ್ಕೆ ಪಡೆದಿದೆ. ಅವರು ತಮ್ಮ ಪ್ರೇಯಸಿ ಮೂಲಕ ದಾಖಲೆಗಳನ್ನು ಪಾಕ್‌ಗುಪ್ತಚರ ಇಲಾಖೆಗೆ (ಐಎಸ್‌ಐ) ರವಾನಿಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಅರುಣ್‌ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದುದು ಆಂತರಿಕ ತನಿಖೆಯಿಂದ ದೃಢಪಟ್ಟ ಅನಂತರ, ಇವರನ್ನು ಬಂಧಿಸಿದ್ದ ಐಎಎಫ್, 10 ದಿನಗಳ ವಿಚಾರಣೆಯ ಅನಂತರ, ದಿಲ್ಲಿ ಪೊಲೀಸರಿಗೆ ಒಪ್ಪಿಸಿದೆ. ಆದರೆ, ಈ ಬಗ್ಗೆ ಐಎಎಫ್ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ.

Advertisement

ಕಳೆದ ವರ್ಷ ಡಿಸೆಂಬರ್‌ನಲ್ಲಿ ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪರಿಚಯ ಮಾಡಿಕೊಂಡಿದ್ದ ಅರುಣ್‌, ಆಕೆಯ ಪ್ರೇಮದ ಬಲೆಯಲ್ಲಿ ಬಿದ್ದಿದ್ದರು. ಇಬ್ಬರ ನಡುವೆ ಅಶ್ಲೀಲ ಸಂದೇಶ, ಫೋಟೋಗಳು ವಿನಿಮಯವಾಗುತ್ತಿದ್ದವು. ಆಕೆ ಕಳುಹಿಸುತ್ತಿದ್ದ ಅಶ್ಲೀಲ ಫೋಟೋಗಳಿಗೆ ಪ್ರತಿಯಾಗಿ ಅರುಣ್‌ ಆಕೆಯ ವಾಟ್ಸ್‌ಆ್ಯಪ್‌ ಸಂಖ್ಯೆಗೆ ವಾಯುಪಡೆಯ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದರು ಎನ್ನಲಾಗಿದೆ. ಬಂಧಿತ ಅರುಣ್‌ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ (ಒಎಸ್‌ಎ) ದೂರು ದಾಖಲಿಸಲಾಗಿದೆ. ಆರೋಪ ಸಾಬೀತಾದಲ್ಲಿ ಅರುಣ್‌, 14 ವರ್ಷಗಳ ಸೆರೆವಾಸ ಅನುಭವಿಸಬೇಕಾಗುತ್ತದೆ. ಸ್ಥಳೀಯ ನ್ಯಾಯಾಲಯಕ್ಕೆ ಅವರನ್ನು ಗುರುವಾರ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ಯಾರಿವರು ಅರುಣ್‌?: ಪ್ಯಾರಾ ಜಂಪರ್‌ ತರಬೇತುದಾರರಾಗಿದ್ದ ಅರುಣ್‌ ಮರ್ವಾ ಅವರನ್ನು ಗರುಡ ಕಮಾಂಡೋ ಪಡೆಯ ತರಬೇತಿಗಾಗಿಯೂ ನಿಯೋಜಿಸಲಾಗಿತ್ತು. ದಿಲ್ಲಿಯಲ್ಲಿರುವ ಐಎಎಫ್ನ ಕೇಂದ್ರ ಕಚೇರಿಯಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದರು. ಮುಂದಿನ ವರ್ಷ ನಿವೃತ್ತಿಯಾಗಬೇಕಿತ್ತು.

ಪತ್ತೆಯಾಗಿದ್ದು ಹೇಗೆ?
ಅರುಣ್‌ ಕಾರ್ಯನಿರ್ವಹಿಸುತ್ತಿದ್ದ  ದಿಲ್ಲಿಯ ಕಚೇರಿಯಲ್ಲಿ ಮೊಬೈಲ್‌ಗ‌ಳ ಬಳಕೆಯನ್ನು ನಿಷೇಧಿಸಲಾಗಿತ್ತು. ಆದರೂ, ಇತ್ತೀಚಿನ ತಿಂಗಳುಗಳಲ್ಲಿ ಅರುಣ್‌, ತಮ್ಮೊಂದಿಗೆ ಅತ್ಯಾಧುನಿಕ, ದುಬಾರಿ ಬೆಲೆಯ ಸ್ಮಾರ್ಟ್‌ ಫೋನ್‌ ಕೊಂಡೊಯ್ಯುತ್ತಿದ್ದರು. ಇದನ್ನು ಗಮನಿಸಿದ್ದ ಐಎಎಫ್ನ ಹಿರಿಯ ಅಧಿಕಾರಿಯೊಬ್ಬರು ಇವರ ವಿರುದ್ಧ ಆಂತರಿಕ ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ, ಇವರು ವಾಟ್ಸ್‌ ಆ್ಯಪ್‌ ಮೂಲಕ ಐಎಎಫ್ನ ರಹಸ್ಯ ಮಾಹಿತಿಗಳನ್ನು ಕಳುಹಿಸುತ್ತಿದ್ದುದು ಪತ್ತೆಯಾಗಿದ್ದರಿಂದ ಇವರನ್ನು ಕೆಲವು ದಿನಗಳ ಹಿಂದೆ ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next