ಧಾರವಾಡ: ಧಮ್ ಬಗ್ಗೆ ಸದಾ ಮಾತನಾಡುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ನಿಜವಾಗಲೂ ಆ ಧಮ್, ತಾಕತ್ತು ಇದ್ದರೆ ನಾನೇ ಮುಂದಿನ ಸಿಎಂ ಎನ್ನುತ್ತಿರುವ ಸಿದ್ದರಾಮಯ್ಯ ಅವರ ಮೇಲೆ ಕ್ರಮ ಕೈಗೊಳ್ಳಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಈ ಸರ್ವಾಧಿಕಾರಿ ಧೋರಣೆಯನ್ನು ಯಾರೂ ಖಂಡಿಸುತ್ತಿಲ್ಲ. ಮುಖ್ಯಮಂತ್ರಿ ಎಂದು ಘೋಷಣೆ ಮಾಡಿಕೊಳ್ಳುವ ಅಧಿಕಾರ ನಿಮಗಿಲ್ಲ ಎಂಬ ಎಚ್ಚರಿಕೆಯನ್ನೂ ಕೆಪಿಸಿಸಿ ಅಧ್ಯಕ್ಷರು ನೀಡುತ್ತಿಲ್ಲ ಎಂದರು. ಕಾಂಗ್ರೆಸ್ ಪಕ್ಷ ದೇಶ-ರಾಜ್ಯದಲ್ಲಿ ನಿರ್ನಾಮವಾಗುತ್ತಿರುವಾಗ ಅಲ್ಲಿನ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ತಮಗೆ ಇಷ್ಟವಾದ ಪಕ್ಷಗಳಿಗೆ ಹೋಗುತ್ತಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನಡುವೆ ಮುಖ್ಯಮಂತ್ರಿ ಆಗುವ ಸ್ಪರ್ಧೆಯೂ ನಡೆದಿದೆ. ಜನರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಅಧಿಕಾರ ನೀಡಲ್ಲ.
ಹಗಲುಗನಸು ಕಾಣುವುದೇ ಇವರ ಕೆಲಸ. ಸದ್ಯಕ್ಕೆ ಕಾಂಗ್ರೆಸ್ ಮುಳುಗುವ ಹಡಗು ಎಂದರು. ರಾಜ್ಯದ ಜನರು ನಮಗೆ ಆಡಳಿತ ನಡೆಸಲು ಅಧಿಕಾರ ನೀಡಿದ್ದು, ಆದರೆ ಸಂಪೂರ್ಣ ಬಹುಮತ ನೀಡದ ಕಾರಣ ಕೆಲ ಗೊಂದಲ ಎದುರಾಗಿದ್ದವು. ಇದೀಗ ಪೂರ್ಣ ಪ್ರಮಾಣದ ಸಂಪುಟ ರಚಿಸಿ ಎಲ್ಲರಿಗೂ ಖಾತೆ ಹಂಚಲಾಗಿದೆ. ಯಾವುದೇ ಸಮಸ್ಯೆ ಇಲ್ಲದೆ ಎಲ್ಲ ಗೊಂದಲಗಳನ್ನು ನಿವಾರಿಸಲಾಗಿದೆ ಎಂದರು.
ಇದನ್ನೂ ಓದಿ:ಪಾಲಿಕೆ ಅಧಿಕಾರಿಗಳಿಂದ ಟಿನ್ ಫ್ಯಾಕ್ಟರಿ ಮಾರ್ಗದಲ್ಲಿ ಒತ್ತುವರಿ ತೆರವು
ಶಿವಮೊಗ್ಗದಂತಹ ಪ್ರಕರಣ ಈವರೆಗೆ ರಾಜ್ಯದಲ್ಲಿ ಎಲ್ಲೂ ನಡೆದಿಲ್ಲ. ಕಲ್ಲು ಕ್ವಾರಿಯಲ್ಲಿ ಏನೆಲ್ಲ ವಸ್ತುಗಳು ಇದ್ದವು ಎಂಬುದನ್ನು ಪರಿಶೀಲಿಸಲು ಬೆಂಗಳೂರಿನಿಂದ ತಜ್ಞರು ಆಗಮಿಸಿದ್ದಾರೆ. ತಜ್ಞರು ವರದಿ ನೀಡಿದ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಸಿಗಲಿದ್ದು, ಈ ವರದಿ ನೀಡಿದ ಬಳಿಕವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
ಕೆ.ಎಸ್.ಈಶ್ವರಪ್ಪ, ಸಚಿವ