ಮೊಹಾಲಿ: ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರು ಕೆಲವು ದಿನಗಳಿಂದ ಭಾರೀ ಚರ್ಚೆಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಟೀಂ ಇಂಡಿಯಾದ ಭಾಗವಾಗಿದ್ದ ಇಶಾನ್ ಬಳಿಕ ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರ ನಡೆದಿದ್ದರು. ನಂತರ ಅವರನ್ನು ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಗೂ ಆಯ್ಕೆ ಮಾಡಲಾಗಿಲ್ಲ. ಅಶಿಸ್ತಿನ ಕಾರಣದಿಂದಾಗಿ ಅವರನ್ನು ತಂಡದಲ್ಲಿ ನಿರ್ಲಕ್ಷಿಸಲಾಗಿದೆ ಎಂದು ವರದಿಯಾಗಿತ್ತು. ಆದರೆ, ಭಾರತೀಯ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಈ ವರದಿಗಳನ್ನು ನಿರಾಕರಿಸಿದ್ದಾರೆ.
ಆದರೆ ಇಶಾನ್ ಕಿಶನ್ ಟೀಂ ಇಂಡಿಯಾದಲ್ಲಿ ಮತ್ತೆ ಆಡಬೇಕಾದರೆ ಮೊದಲು ದೇಶೀಯ ಕ್ರಿಕೆಟ್ ನಲ್ಲಿ ಆಡಬೇಕಾಗುತ್ತದೆ ಎಂದು ದ್ರಾವಿಡ್ ಸಲಹೆ ನೀಡಿದ್ದಾರೆ.
“ಇಶಾನ್ ಆಯ್ಕೆಗೆ ಲಭ್ಯರಿರಲಿಲ್ಲ. ದ.ಆಫ್ರಿಕಾದಲ್ಲಿ ಅವರು ವಿರಾಮಕ್ಕೆ ಮನವಿ ಮಾಡಿದ್ದರು. ಅದನ್ನು ನಾವು ಪುರಸ್ಕರಿಸಿದ್ದೆವು. ಅವರು ಇನ್ನೂ ಆಯ್ಕೆಗೆ ಲಭ್ಯವಾಗಿಲ್ಲ. ಅವರು ದೇಶಿಯ ಕ್ರಿಕೆಟ್ ನಲ್ಲಿ ಆಡಿ ಆಯ್ಕೆಗೆ ಲಭ್ಯವಾಗಬೇಕಾಗುತ್ತದೆ” ಎಂಧು ದ್ರಾವಿಡ್ ಹೇಳಿದ್ದಾರೆ.
ಇದನ್ನೂ ಓದಿ:Magadi: ಶಿಕ್ಷಕ ಚಡಿ ಏಟು ಬಾರಿಸಿದ ಪರಿಣಾಮ ವಿದ್ಯಾರ್ಥಿಯ ಭುಜದ ಮೂಳೆ ಮುರಿತ
ಇದರರ್ಥ ಏಳು ವಾರಗಳ ಕಾಲ ಯಾವುದೇ ಕ್ರಿಕೆಟ್ ಆಡದ ಕಾರಣ, ಇಶಾನ್ ಕಿಶನ್ ಅವರನ್ನು ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಇಂಗ್ಲೆಂಡ್ ಟೆಸ್ಟ್ ಗೆ ಆಯ್ಕೆ ಮಾಡಲಾಗುವುದಿಲ್ಲ.
ಇಶಾನ್ ಕಿಶನ್ ಪ್ರತಿನಿಧಿಸುವ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯನ್ನು ಪಿಟಿಐ ಸಂಪರ್ಕಿಸಿದ್ದು, ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಆಡುವ ಬಗ್ಗೆ ಇಶಾನ್ ಕಿಶನ್ ಯಾವುದೇ ಮಾಹಿತಿ ನೀಡಿಲ್ಲ ಎಂದಿದ್ದಾರೆ.
“ಇಲ್ಲ, ಇಶಾನ್ ನಮ್ಮನ್ನು ಸಂಪರ್ಕಿಸಿಲ್ಲ ಅಥವಾ ಅವರ ಲಭ್ಯತೆಯ ಬಗ್ಗೆ ನಮಗೆ ಏನನ್ನೂ ಹೇಳಿಲ್ಲ. ಅವರು ನಮಗೆ ಮಾಹಿತಿ ನಿಡಿದರೆ ಅವರು ಆಡುವ ಬಳಗಕ್ಕೆ ಸೇರುತ್ತಾರೆ” ಎಂದು ಕಾರ್ಯದರ್ಶಿ ದೇವಶಿಶ್ ಚಕ್ರವರ್ತಿ ಪಿಟಿಐಗೆ ತಿಳಿಸಿದರು.