ದುಬೈ: ಐಪಿಎಲ್ ಕೂಟವೇನು ಮುಗಿಯುತ್ತಾ ಬಂತು. ಇನ್ನು ಉಳಿದಿರುವುದು ಪ್ಲೇ ಆಫ್ ಮತ್ತು ಫೈನಲ್ ಮಾತ್ರ. ಆದರೆ ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ಐಸಿಸಿ ಟಿ20 ವಿಶ್ವಕಪ್ ಆರಂಭವಾಗಲಿದೆ.
ಭಾರತ ತಂಡಕ್ಕೆ ಆಯ್ಕೆಯಾಗಿರುವ ಯುವ ವಿಕೆಟ್ ಕೀಪರ್ ಬ್ಯಾಟ್ಸಮನ್ ಇಶಾನ್ ಕಿಶಾನ್ ಅವರ ಐಪಿಎಲ್ ಪ್ರದರ್ಶನ ಹಲವರ ಚಿಂತೆಗೆ ಕಾರಣವಾಗಿತ್ತು. ಕಳಪೆ ಪ್ರದರ್ಶನದಿಂದ ಇಶಾನ್ ಅವರು ಕೆಲವು ಪಂದ್ಯಗಳಲ್ಲಿ ಮುಂಬೈ ತಂಡದಿಂದ ಹೊರಗುಳಿಯ ಬೇಕಾಗಿತ್ತು. ಆದರೆ ಕೊನೆಯ ಎರಡು ಪಂದ್ಯಗಳಲ್ಲಿ ಇಶಾನ್ ಕಿಶಾನ್ ಅಬ್ಬರಿಸಿದ್ದಾರೆ. ಅದರಲ್ಲೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 32 ಎಸೆತಗಳಲ್ಲಿ 84 ರನ್ ಚಚ್ಚಿದ್ದರು.
ಇಶಾನ್ ಕಿಶಾನ್ ಈ ಬದಲಾವಣೆಗೆ ಪ್ರಮುಖ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ. ಹೌದು, ಇತ್ತೀಚೆಗೆ ಆರ್ ಸಿಬಿ ವಿರುದ್ಧದ ಪಂದ್ಯದಲ್ಲೂ ಇಶಾನ್ ಕಿಶನ್ ವಿಫಲರಾಗಿದ್ದರು. ಆ ಪಂದ್ಯದ ಬಳಿಕ ಇಶಾನ್ ರನ್ನು ಭೇಟಿಯಾಗಿದ್ದ ಕೊಹ್ಲಿ ಧೈರ್ಯ ತುಂಬಿದ್ದರು.
ಇದನ್ನೂ ಓದಿ:ಈ ಭಾರತೀಯ ಆಟಗಾರ ಕೊಹ್ಲಿ ಮತ್ತು ರೋಹಿತ್ ಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾನೆ: ಗಂಭೀರ್
ಈ ಬಗ್ಗೆ ಮಾತನಾಡಿದ ಇಶಾನ್ ಕಿಶಾನ್, “ನಾನು ವಿರಾಟ್ ಭಾಯ್ ಜೊತೆ ಮಾತನಾಡಿದ್ದೇನೆ ಹಾಗೂ ಜಸ್ಪ್ರಿತ್ ಭಾಯ್ ಕೂಡ ನನಗೆ ಸಹಾಯ ಮಾಡಿದ್ದಾರೆ. ಇದು ನಿಮ್ಮ ಕಲಿಕೆಯ ಹಂತ, ಹಾಗಾಗಿ ಮಾಡಿದ ತಪ್ಪುಗಳನ್ನೇ ವಿಶ್ವಕಪ್ ಟೂರ್ನಿಯಲ್ಲಿಯೂ ಮುಂದುವರಿಸಬೇಡಿ ಎಂದು ಸಲಹೆ ನೀಡಿದ್ದಾರೆ. ಇದರಿಂದ ನಾನು ಕಲಿತಿದ್ದೇನೆ. ಇನಿಂಗ್ಸ್ ಆರಂಭಿಸುವುದನ್ನು ನಾನು ಇಷ್ಟಪಡುತ್ತೇನೆ. ‘ನೀವು ಓಪನರ್ ಆಗಿ ತಂಡಕ್ಕೆ ಆಯ್ಕೆಯಾಗಿದ್ದೀರಿ, ಇದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳಿ’ ಎಂದು ವಿರಾಟ್ ಭಾಯ್ ಹೇಳಿದ್ದಾರೆ. ಹಾಗಾಗಿ, ದೊಡ್ಡ ವೇದಿಕೆಗೆ ನೀವು ಎಲ್ಲಾ ಸನ್ನಿವೇಶಗಳಿಗೆ ತಕ್ಕಂತೆ ತಯಾರಿ ಮಾಡಿಕೊಳ್ಳುವುದು ತುಂಬಾ ಮುಖ್ಯ” ಎಂದು ಹೇಳಿದರು.