ಹೈದರಾಬಾದ್: ಕಳೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಸರ್ವಾಧಿಕ ರನ್ ಜತೆಗೆ ಕೂಟದಲ್ಲೇ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಇಶಾನ್ ಕಿಶನ್ ಈಗ ಟೀಮ್ ಇಂಡಿಯಾದ ಕೀಪಿಂಗ್ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದು ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಎಂ. ಎಸ್.ಕೆ. ಪ್ರಸಾದ್ ಹೇಳಿದ್ದಾರೆ.
“ಬಿಹಾರ್ ಮೂಲದ ಇಶಾನ್ ಕಿಶನ್ ಪಾಕೆಟ್ ಗಾತ್ರದ ಡೈನಮೈಟ್ ನಂತಿದ್ದಾರೆ. ಈ ಐಪಿಎಲ್ ಅವರ ಪಾಲಿಗೆ ಸ್ಮರಣೀಯವಾಗಿತ್ತು. ಮೊದಲು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಇಶಾನ್, ಬಳಿಕ ಆರಂಭಿಕನಾಗಿಯೂ ಇಳಿದು ತಮ್ಮ ಸಾಮರ್ಥ್ಯ ತೋರಿದರು. ತಂಡಕ್ಕೆ ಅನುಗುಣವಾಗಿ ಬ್ಯಾಟಿಂಗ್ ಗೇರ್ ಬದಲಿಸುವ ಕಲೆಗಾರಿಕೆ ಅವರಿಗೆ ಸಿದ್ಧಿಸಿದೆ. ಟೀಮ್ ಇಂಡಿಯಾದ ಏಕದಿನ ಹಾಗೂ ಟಿ20 ತಂಡಗಳ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಾಗಕ್ಕೆ ಅವರೀಗ ಪ್ರಬಲ ಉಮೇದುವಾರನಾಗಿದ್ದಾರೆ’ ಎಂದು ಪ್ರಸಾದ್ ಸಂದರ್ಶನವೊಂದರಲ್ಲಿ ಹೇಳಿದರು.
ಪಂತ್‌ಗಿಂತ ಮೇಲು
ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಕೂಡ ಇಶಾನ್ ಕಿಶನ್ ಪರ ಬ್ಯಾಟ್ ಬೀಸಿದ್ದಾರೆ. “ರಿಷಭ್ ಪಂತ್ ಮತ್ತು ಇಶಾನ್ ಕಿಶನ್ ನಡುವೆ ಈಗ ಪ್ರಬಲ ಸ್ಪರ್ಧೆ ಇದೆ. ಸ್ವಾರಸ್ಯವೆಂದರೆ, ಪಂತ್ 2016ರಲ್ಲೇ ಇಶಾನ್ ಕಿಶನ್ ನಾಯಕತ್ವದಲ್ಲಿ ಅಂಡರ್-19 ವಿಶ್ವಕಪ್ ಆಡಿದ್ದರು. ಕ್ವಾಲಿಟಿ ವೇಗಿಗಳನ್ನು ದಿಟ್ಟ ರೀತಿಯಲ್ಲಿ ಎದುರಿಸುವಲ್ಲಿ ಇಶಾನ್ ಒಂದು ಹೆಜ್ಜೆ ಮುಂದಿದ್ದಾರೆ’ ಎಂದು ಮಾಂಜ್ರೇಕರ್ ಹೇಳಿದರು.
ಕಳೆದ ಐಪಿಎಲ್‌ನಲ್ಲಿ ಇಶಾನ್ ಕಿಶನ್ 516 ರನ್ ಜತೆಗೆ 30 ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಪಂತ್ ಗಳಿಸಿದ್ದು 343 ರನ್ ಮಾತ್ರ. ಇಶಾನ್ ಅನೇಕ ಪಂದ್ಯಗಳಲ್ಲಿ ತಂಡವನ್ನು ಯಶಸ್ವಿಯಾಗಿ ದಡ ಸೇರಿಸಿದರೆ, ಇನ್ನೊಂದೆಡೆ ರಿಷಭ್ ಪಂತ್ ಒಂದೇ ಅರ್ಧ ಶತಕಕ್ಕೆ ತೃಪ್ತರಾಗಿದ್ದರು. ಅದೂ ಫೈನಲ್‌ನಲ್ಲಿ ಬಂದಿತ್ತು.