ಕೊಯಮತ್ತೂರು: ಕೊಯಮತ್ತೂರಿನ ಇಶಾ ಫಂಡೇಶನ್‌ನ ಪ್ರಸಿದ್ಧ ಆದಿಯೋಗಿ ಪ್ರತಿಮೆ ಸ್ಥಳದಲ್ಲಿ ಪ್ರತಿ ವರ್ಷವೂ ನಡೆಯುವ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಈ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದ್ದಾರೆ.
ತಮ್ಮ ಮೊದಲ ತಮಿಳುನಾಡು ಭೇಟಿಯಲ್ಲಿರುವ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮ ಉದ್ಘಾಟನೆಗೂ ಮೊದಲು, ಇಶಾ ಫೌಂಡೇಶನ್‌ನಲ್ಲಿರುವ ಧ್ಯಾನಲಿಂಗಕ್ಕೆ ಭೇಟಿ ನೀಟಿ ಧ್ಯಾನ ಜ್ಯೋತಿ ಬೆಳಗಿದರು.
ಮಹಾಶಿವರಾತ್ರಿಯಂದು ಸಂಜೆ 6 ಗಂಟೆಯಿಂದ ಪ್ರಾರಂಭವಾಗುವ ಕಾರ್ಯಕ್ರಮ ಮರುದಿನ ಬೆಳಗ್ಗೆ 6 ಗಂಟೆಯ ತನಕ ನಿರಂತರವಾಗಿ ನಡೆಯುತ್ತದೆ.
ಈ ಬಾರಿಯ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ರಾಜಸ್ಥಾನಿ ಜಾನಪದ ಕಲಾವಿದ ಮಾಮೆ ಖಾನ್, ಪ್ರಸಿದ್ಧ ಸಿತಾರ್ ವಾದಕ ನಿಲಾಂದ್ರಿ ಕುಮಾರ್, ಟಾಲಿವುಡ್ ಗಾಯಕ ರಾಮ್ ಮಿರಿಯಾಲ, ತಮಿಳ್ ಹಿನ್ನಲೆ ಗಾಯಕ ವೇಲ್‌ಮುರುಗನ್, ಮಂಗ್ಲಿ, ಕುತ್ಲೆ ಖಾನ್, ಬೆಂಗಾಲಿ ಜಾನಪದ ಗಾಯಕಿ ಅನನ್ಯ ಚಕ್ರವರ್ತಿ ಭಾಗಿಯಾಗಲಿದ್ದಾರೆ.
ಅಲ್ಲದೇ ಕರ್ನಾಟದ ಜಾನಪದ ನೃತ್ಯ, ಮತ್ತು ಕೇರಳದ ತೆಯ್ಯಂ ನೃತ್ಯವೂ ಪ್ರದರ್ಶನಗೊಳ್ಳಲಿದೆ. ಇಶಾದ ತಂಡದಿಂದಲೂ ಸಾಂಸೃತಿಕ ಕಾರ್ಯಕ್ರಮ ನಡೆಯಲಿದೆ.
ಇಶಾ ಮಹಾಶಿವರಾತ್ರಿ ದೇಶ ಇಂಗ್ಲಿಷ್,ತಮಿಳು, ಕನ್ನಡ, ಹಿಂದಿ,ತೆಲುಗು, ಮಲಯಾಳಂ, ಮರಾಠಿ ಮುಂತಾದ ದೇಶದ 16 ಪ್ರಾದೇಶಿಕ ಭಾಷೆಗಳ ಚಾನಲ್‌ಗಳಲ್ಲಿ ಪ್ರಸಾರವಾಗಲಿದೆ ಎಂದು ಇಶಾ ಫೌಂಡೇಶನ್ ತಿಳಿಸಿದೆ.