Advertisement
ಬೆಳಗ್ಗಿನ ಸಮಯ. ಮನೆಯಲ್ಲಿ ಒಂದೇ ಸಮನೇ ಗಲಾಟೆ. ನನ್ನ ಮಗಳು ಪ್ಲೇ ಹೋಮ್‌ಗೆ ಹೋಗೋದಿಲ್ಲ ಅಂತ ಹಠ ಮಾಡಿ ಕೂತಿದ್ದಳು. ನಾನು ಅವಳನ್ನು ಸಮಾಧಾನ ಮಾಡಿದ್ದೇ ಮಾಡಿದ್ದು. ಏನೂ ಪ್ರಯೋಜನ ಆಗಲಿಲ್ಲ. ಅವಳಿಷ್ಟದ ಚಾಕೋಲೆಟ್, ಕೇಕ್ ತಂದು ಕೊಡುತ್ತೇನೆ, ಮುದ್ದಾದ ಬಾರ್ಬಿ ಗೊಂಬೆ ತಗೆದುಕೊಡುತ್ತೇನೆ ಎಂದು ಪ್ರೀತಿಯ ಆಮಿಷವೊಡ್ಡಿದರೂ ಒಪ್ಪಲಿಲ್ಲ. ಇವತ್ತು ಅಂತೂ ಹೋಗೋದೇ ಇಲ್ಲ ಅಂತ ಕೂತೇ ಬಿಟ್ಟಳು. ನಾಳೆ ಕೂಡ ಹೋಗದಿದ್ದರೆ ಏನ್ ಮಾಡೋದಪ್ಪಾ ಅಂತ ಚಿಂತಿಸುತ್ತಾ ಕೂತೆ. ಮಾರನೇ ದಿನ ಅವಳಿಗೆ ಪೂಸಿ ಹೊಡೆದೆ. “ಸ್ಕೂಲ್‌ನಲ್ಲಿ ನಿನಗೆ ತುಂಬಾ ಫ್ರೆಂಡ್ಸ್ ಸಿಗ್ತಾರೆ. ಅಲ್ಲಿ ಟೀಚರ್ ನಿಂಗೆ ಡ್ಯಾನ್ಸ್, ಸಾಂಗ್ಸ್, ರೈಮ್ಸ್, ಗೇಮ್ಸ್ ಎಲ್ಲಾನೂ ಹೇಳಿಕೊಡ್ತಾರೆ’ ಎಂದೆಲ್ಲಾ ಹೇಳಿದ ನಂತರ ಕಡೆಗೂ ಮಗಳು ಪ್ಲೇಹೋಮ್‌ಗೆ ಹೋಗಲು ಒಪ್ಪಿದಳು.ಮೂರು ವರ್ಷದ ಮಗು ಮನೆಯಲ್ಲೇ ತನಗೆ ಬೇಕಾದ ಹಾಗೆ ಆಡಿಕೊಂಡು, ಬೋರ್ ಆದಾಗ ತನಗೆ ಬೇಕಾದ ಕಾಟೂìನ್ ನೋಡಿಕೊಂಡು, ಹಸಿವಾದಾಗ ತಿಂದುಕೊಂಡು, ಅಮ್ಮನ ಮಡಿಲಲ್ಲಿ ಮಲಗಿಕೊಂಡು ಸಮಯ ಕಳೆಯುತ್ತದೆ. ಆದರೆ, ಸಡನ್ ಆಗಿ ಅವರನ್ನು ಪ್ಲೇಹೋಮ್ ಕಳಿಸಬೇಕು ಅಂದಾಗ ಅವರ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಇನ್ನು ಆ ಮುದ್ದು ಮಗುವಿನ ಮನವೊಲಿಸಿ ಅವರನ್ನು ಪ್ಲೇಹೋಮ್‌ಗೆ ಕಳಿಸುವುದು ಕಷ್ಟದ ಕೆಲಸ. ಮಗು ತನ್ನ ಮನೆಯನ್ನು ಬಿಟ್ಟರೆ ಹೊರಗೆ ತುಂಬಾ ಹೊತ್ತು ಕಳೆಯುವ ಜಾಗ ಎಂದರೆ ಪ್ಲೇಸ್ಕೂಲ್. ಮೊದಲನೇ ಸಲ ಮಗು ಹೆತ್ತವರನ್ನು, ಹೆಚ್ಚಾಗಿ ಸದಾಕಾಲ ಜೊತೆಗಿರುವ ಅಮ್ಮನನ್ನು ಬಿಟ್ಟು ಹಗಲು ಪೂರ್ತಿ ಕಳೆಯುವ ಜಾಗ ಪ್ಲೇಹೋಮ್. ಆದುದರಿಂದ ಪ್ಲೇಹೋಮ್ ಆರಿಸಿಕೊಳ್ಳುವಾಗ ಜಾಗ್ರತೆ ವಹಿಸಬೇಕಾದುದು ಅಗತ್ಯ. ಮಗು ಮನೆಯಲ್ಲಿ ಗಲಾಟೆ ಮಾಡುತ್ತದೆ ಎಂಬ ಕಾರಣಕ್ಕೆ ಮಗುವನ್ನು ಪ್ಲೇಹೋಮ್‌ಗೆ ಸೇರಿಸುವುದು ಔಚಿತ್ಯವಲ್ಲ. ಅಳು, ಕಿರುಚಾಟ, ಹಠ ಇವೆಲ್ಲಾ ಮಗುವಿನ ಸ್ವಭಾವ. ಅದನ್ನು ನಿರ್ವಹಿಸಲು ಕಲಿಯಬೇಕೇ ಹೊರತು, ಪಲಾಯನ ಮಾಡುವುದನ್ನಲ್ಲ.
Related Articles
“ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?’ ಎಂಬ ಗಾದೆ ಇದೆ. ಗಿಡವಾಗಿದ್ದಾಗ ಬೇಕಾದ ಆಕಾರಕ್ಕೆ ಬದಲಿಸಬಹುದು, ಒಮ್ಮೆ ಮರವಾದ ನಂತರ ಏನೇ ಮಾಡಿದರೂ ಅಲುಗಾಡಿಸಲು ಸಾಧ್ಯವಿಲ್ಲ ಎನ್ನುವುದು ಅದರರ್ಥ. ಅಂತೆಯೇ ಚಿಕ್ಕಂದಿನಲ್ಲಾದ ಗಾಯ ದೊಡ್ಡವರಾದ ಮೇಲೂ ಮಕ್ಕಳನ್ನು ಕಾಡಬಲ್ಲುದು. ಹೀಗಾಗಿ ಮಗುವಿನ ಮನಸ್ಸಿಗೆ ಘಾಸಿಯಾಗದಂತೆ ನೋಡಿಕೊಳ್ಳುವುದು ಪಾಲಕರ ಕರ್ತವ್ಯ. ಪ್ಲೇಹೋಮ್‌ಗೆ ಸೇರಿಸುವಾಗಲೂ ಈ ವಿಚಾರ ಗಮನದಲ್ಲಿಟ್ಟುಕೊಳ್ಳಬೇಕು. ಒಂದು ವೇಳೆ ಪ್ಲೇಹೋಮ್ ಬಗ್ಗೆ ತಿರಸ್ಕಾರ ಭಾವನೆ ಒಂದು ಸಲ ಮೂಡಿದರೆ ಅದನ್ನು ಬೇಗ ಅಳಿಸಲು ಸಾಧ್ಯವಿಲ್ಲ. ಮುಂದೆ ಶಾಲೆಗೆ ಸೇರಿಸುವಾಗಲೂ ತೊಂದರೆ ಎದುರಾಗಬಹುದು. ಹೀಗಾಗಿ ಪ್ಲೇಹೋಮ್ ಎಂದರೆ ಸಜೆಯಲ್ಲ, ಅದೊಂದು ಮಜಭರಿತ ಜಾಗ ಎಂಬ ಭಾವನೆ ಅವರಲ್ಲಿ ಮೂಡಿಸಬೇಕು. ಅದು ಸಾಧ್ಯವಾದಾಗ ಮಕ್ಕಳ ಬಾಲ್ಯ ಸುಂದರವೂ ಸುಮಧುರವೂ ಆಗುವುದು.
Advertisement
ತಂಟೆ ತಪ್ಪಿಸಲು ಪ್ಲೇಹೋಂ ದಾರಿಯಲ್ಲ…ಮನೆಯಲ್ಲಿದ್ದರೆ ಯಾವ ಕೆಲಸವನ್ನೂ ಮಾಡಲು ಬಿಡುವುದಿಲ್ಲವೆಂದೋ, ತುಂಟಾಟ ಸಹಿಸಲಾಗದು ಎಂಬ ಕಾರಣಕ್ಕೋ ಮಗುವನ್ನು ಕಣ್ಮುಚ್ಚಿ ಪ್ಲೇ ಹೋಂಗೆ ಸೇರಿಸುವುದು ಸರಿಯಲ್ಲ. ಪ್ಲೇಹೋಮ್ ಸೇರಿಸುವ ಮೊದಲು
– ಪ್ಲೇಹೋಮ್‌ನಲ್ಲಿ ಮಕ್ಕಳಿಗೆ ಭದ್ರತೆ, ಸುರಕ್ಷತೆ ಇದೆಯಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು
– ಅಲ್ಲಿನ ಚಟುವಟಿಕೆಗಳು ಮಗುವಿನ ಬೆಳವಣಿಗೆಗೆ ಪೂರಕವಾಗಿದೆಯೇ ಎಂದು ಗಮನಿಸಬೇಕು.
– ಶಿಕ್ಷಕರು ಮಗುವಿಗೆ ಕಲಿಸುವ ರೀತಿ ತಿಳಿಯಬೇಕು.
– ಮಗು ಇತರೆ ಮಕ್ಕಳೊಡನೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ತಿಳಿದಿರಬೇಕು. – ಸುಲಭಾ ಆರ್. ಭಟ್