Advertisement
“ಟೆಸ್ಟ್ ಕ್ರಿಕೆಟ್ ನಲ್ಲಿ ನನ್ನ ಬೌಲರ್ ಗಳು 20 ವಿಕೆಟ್ ತೆಗೆಯಬೇಕು. ಆಗ ಮಾತ್ರ ಪಂದ್ಯ ಗೆಲ್ಲಲು ಸಾಧ್ಯ’’ ಎಂದು ಅಂದು ನಾಯಕನಾಗಿದ್ದ ವಿರಾಟ್ ಕೆೊಹ್ಲಿ ಹೇಳಿದ್ದಾಗ ಹಲರಿಗೆ ಅರ್ಥವಾಗಿರಲಿಲ್ಲ. ಬ್ಯಾಟರ್ ಗಳ ಆಟ ಎಂದೇ ಖ್ಯಾತಿ ಪಡೆದ ಕ್ರಿಕೆಟ್ ನಲ್ಲಿ ಬೌಲರ್ ಗಳು ನಿಜವಾದ ಮ್ಯಾಚ್ ವಿನ್ನರ್ಸ್ ಎಂದು ವಿರಾಟ್ ಸ್ಪಷ್ಟವಾಗಿ ನಂಬಿದ್ದರು ಮತ್ತು ಆ ನಂಬಿಕೆಯಲ್ಲೇ ಪಂದ್ಯಗಳನ್ನು ಗೆಲ್ಲಿಸಿದ್ದರು ಕೂಡಾ. ಆದರೆ ಇದೀಗ ತಂಡ ಮತ್ತೆ ಹಳೆಯ ಹಳಿ ಏರುತ್ತಿರುವುದಕ್ಕೆ ಬೌಲರ್ ಗಳು ಉದಾರಿಗಳಾಗುತ್ತಿರುವುದೇ ಸಾಕ್ಷಿ.
Related Articles
Advertisement
ಸದ್ಯ ಭಾರತ ತಂಡದಲ್ಲಿ ಬುಮ್ರಾ ಸ್ಥಾನವನ್ನು ತುಂಬುವವರು ಯಾರೂ ಇಲ್ಲ ಎನ್ನುವಂತಾಗಿದೆ. ಅನುಭವಿ ಭುವನೇಶ್ವರ್ ಕುಮಾರ್ ತಾನು ಕೇವಲ ಪವರ್ ಪ್ಲೇ ಬೌಲರ್ ಎಂದು ಏಷ್ಯಾಕಪ್ ನಲ್ಲಿ ಮತ್ತೆ ಸಾಬೀತು ಪಡಿಸಿದ್ದಾರೆ. ಉಳಿದವರು ಮೊದಲ ಬಾರಿಗೆ ದೊಡ್ಡ ಕೂಟ ಆಡುತ್ತಿರುವವರು. ಹೀಗಾಗಿ ಭಾರತ ಈ ವಿಶ್ವಕಪ್ ನಲ್ಲಿ ಯಾರನ್ನಾದರೂ ಹೆಚ್ಚು ಮಿಸ್ ಮಾಡಿಕೊಂಡರೆ ಅದು ಬುಮ್ರಾ ಮಾತ್ರ.
ಡೆತ್ ಬೌಲಿಂಗ್ ಸ್ಪೆಷಲಿಸ್ಟ್ ಯಾರು?
ಬುಮ್ರಾ ಮತ್ತು ಹರ್ಷಲ್ ಪಟೇಲ್ ಅನುಪಸ್ಥಿತಿಯಲ್ಲಿ ಏಷ್ಯಾ ಕಪ್ ಆಡಿದ್ದ ಭಾರತ ತಂಡದ ಡೆತ್ ಬೌಲಿಂಗ್ ಸಾಮರ್ಥ್ಯ ವಿಶ್ವದೆದುರು ಜಗಜ್ಜಾಹೀರಾಗಿತ್ತು. ಅದರಲ್ಲೂ ಇತ್ತೀಚಿನ ಪಂದ್ಯಗಳಲ್ಲಿ 19ನೇ ಒವರ್ ಎನ್ನುವುದು ಭಾರೀ ಚಿಂತೆಯಾಗಿ ಮಾರ್ಪಟ್ಟಿದೆ. ಯಾರೇ 19ನೇ ಓವರ್ ಬಾಲ್ ಹಾಕಿದರೂ ದುಬಾರಿಯಾಗುತ್ತಿದ್ದಾರೆ. ಬುಮ್ರಾ ಬದಲಿಗೆ ಬಂದ ಶಮಿ ಎಷ್ಟು ಪರಿಣಾಮಕಾರಿಯಾಗುತ್ತಾರೆ ಎಂದು ಕಾದು ನೋಡಬೇಕಿದೆ.
ಹಾರ್ದಿಕ್ ಪಾಂಡ್ಯ ಬಿಟ್ಟರೆ ಯಾರು?
ಭಾರತ ಸದ್ಯ ಒಬ್ಬ ಪ್ರಮುಖ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನೇ ನೆಚ್ಚಿಕೊಂಡಿದೆ. ಮತ್ತೋರ್ವ ಸ್ಪಿನ್ನರ್ ರವೀಂದ್ರ ಜಡೇಜಾ ಗಾಯಮಾಡಿ ಕೊಂಡ ಕಾರಣ ಕೂಟದಿಂದಲೇ ಹೊರಬಿದ್ದಿದ್ದಾರೆ. ಅವರ ಬದಲಿಗೆ ಅಕ್ಷರ್ ಪಟೇಲ್ ಇದ್ದಾರೆ. ಆದರೆ ಆಸ್ಟೇಲಿಯಾದಂತಹ ಪಿಚ್ ನಲ್ಲಿ ವೇಗದ ಬೌಲರ್ ಒಬ್ಬ ಸ್ಪಿನ್ ಆಲ್ ರೌಂಡರ್ ಗಿಂತ ವೇಗದ ಬೌಲಿಂಗ್ ಮಾಡುವ ಆಲ್ ರೌಂಡರ್ ಹೆಚ್ಚು ಸೂಕ್ತ. 2021ರ ಐಪಿಎಲ್ ನಲ್ಲಿ ಮಿಂಚು ಟೀಂ ಇಂಡಿಯಾಗೆ ಬಂದ ವೆಂಕಟೇಶ್ ಅಯ್ಯರ್ ನಂತರ ಫಾರ್ಮ್ ಕಳೆದುಕೊಂಡಿದ್ದಾರೆ. ಸದ್ಯ ವೇಗದ ಬೌಲಿಂಗ್ ಮಾಡುವ ಆಲ್ ರೌಂಡರ್ ಹುಡುಕಿದರೂ ಸಿಗುತ್ತಿಲ್ಲ. ಹೀಗಾಗಿ ಪೂರ್ಣ ಕೂಟ, ಹಾರ್ದಿಕ್ ಪಾಂಡ್ಯ ಫಿಟ್ ಇರಲಿ ಎಂದು ಆಶಿಸೋಣ.
ರಿಷಭ್ ಪಂತ್ ಕೆಲಸವೇನು?
ವಿಶ್ವಕಪ್ ಗೆ ಆಯ್ಕೆಯಾಗಿರುವ ತಂಡದಲ್ಲಿ ಸದ್ಯ ಮೂವರು ಕೀಪರ್ ಗಳಿದ್ದಾರೆ. ದಿನೇಶ್ ಕಾರ್ತಿಕ್, ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್. ಸದ್ಯ ದಿನೇಶ್ ಕಾರ್ತಿಕ್ ಅವರೇ ಮುಖ್ಯ ಕೀಪರ್ ಆಗಿದ್ದಾರೆ. ಹೀಗಾಗಿ ಕಳೆದ ಎರಡು ಮೂರು ಸರಣಿಗಳಲ್ಲಿ ರಿಷಭ್ ಪಂತ್ ಬೆಂಚ್ ಕಾಯ್ದಿದ್ದೆ ಬಂತು. ಅವರಿಗೆ ಮ್ಯಾಚ್ ಟೈಮ್ ನೀಡುವ ಅಂದಾಜು ಕೂಡಾ ರೋಹಿತ್ ಶರ್ಮಾ ಮತ್ತು ದ್ರಾವಿಡ್ ಮಾಡಿಲ್ಲ. ಬ್ಯಾಕಪ್ ಕೀಪರ್ ರಾಹುಲ್ ಕೂಡಾ ಇದ್ದಾರೆ. ಪಂತ್ ಗೆ ಅವಕಾಶ ನೀಡುವುದೇ ಇಲ್ಲವೆಂದಾದರೆ ಅವರ ಬದಲಿಗೆ ಮತ್ತೋರ್ವ ಸ್ಪೆಷಲಿಸ್ಟ್ ಬ್ಯಾಟರ್ ಗೂ ಅಥವಾ ಆಲ್ ರೌಂಡರ್ ಗೆ ಅವಕಾಶ ನೀಡಬಹುದಿತ್ತು.
ಸ್ಪಿನ್ನರ್ ಯಾರು?
ಟೀಂ ಇಂಡಿಯಾದ ಕಳೆದೊಂದು ವರ್ಷದ ಚಾರ್ಟ್ ನೀಡಿದರೆ ಸ್ಪಿನ್ನರ್ ಯಾರು ಎಂದರೆ ಪಕ್ಕನೆ ಉತ್ತರಿಸುವುದು ಕಷ್ಟ. ಕಳೆದ ವಿಶ್ವಕಪ್ ವರೆಗೂ ಪ್ರಮುಖ ಸ್ಪಿನ್ನರ್ ಆಗಿದ್ದ ಯುಜುವೇಂದ್ರ ಚಾಹಲ್ ಬಳಿಕ ನಿರ್ಲಕ್ಷ್ಯಕ್ಕೆ ಒಳಗಾದರು, ಆ ವಿಶ್ವಕಪ್ ಆಡಿದ್ದ ರಾಹುಲ್ ಚಾಹರ್ ಮತ್ತು ವರುಣ್ ಚಕ್ರವರ್ತಿ ಮತ್ತೆ ತಂಡಕ್ಕೆ ಆಯ್ಕೆಯಾಗಲೇ ಇಲ್ಲ. ಕೆಲವು ವರ್ಷಗಳಿಂದ ಚುಟುಕು ಮಾದರಿ ಆಡದ ಅಶ್ವಿನ್ ಸದ್ಯ ನಿರಂತರ ಆಡುತ್ತಿದ್ದಾರೆ. ಬೆಂಗಳೂರಿನಂತಹ ಸಣ್ಣ ಮೈದಾನದಲ್ಲೇ ಆರ್ ಸಿಬಿ ಪರ ಮಿಂಚಿದ್ದ ಚಾಹಲ್ ಸತತ ಅವಕಾಶದ ಕೊರತೆ ಎದುರಿಸುತ್ತಿದ್ದಾರೆ. ಟಿ20ಯಂತಹ ಬ್ಯಾಟರ್ ಫ್ರೆಂಡ್ಲಿ ಆಟದಲ್ಲಿ ನಾಯಕನ ಬೆಂಬಲವಿಲ್ಲದೆ ಸ್ಪಿನ್ನರ್ ಉಳಿಯುವುದು ತುಂಬಾ ಕಷ್ಟ.
ಕಳೆದ ವರ್ಷದ ಟಿ20 ವಿಶ್ವಕಪ್, ಇತ್ತೀಚಿನ ಏಷ್ಯಾ ಕಪ್ ಕೂಟಗಳಲ್ಲಿನ ಟೀಂ ಇಂಡಿಯಾದ ಪ್ರದರ್ಶನ ತಂಡದೊಳಗಿನ ಹಲವು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತೆ ಮಾಡಿದೆ. ಎಲ್ಲಾ ಸವಾಲನ್ನು ಮೀರಿಸಿ ರೋಹಿತ್ ಶರ್ಮಾ ಬಳಗ ಟಿ20 ವಿಶ್ವಕಪ್ ಗೆದ್ದು ಬರಲಿ ಎಂಬ ಹಾರೈಕೆ ನಮ್ಮದು.
ಕೀರ್ತನ್ ಶೆಟ್ಟಿ ಬೋಳ