Advertisement

ಈ ಬಾರಿಯೂ ತುಂಗಾ ಸ್ನಾನವಿಲ್ಲದೆ ರಾಯರ ಆರಾಧನೆ?

06:00 AM Aug 05, 2018 | Team Udayavani |

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಹಿಂದಿನ ಆರಾಧನೆಗೆ ತುಂಗಭದ್ರಾ ನದಿಯಲ್ಲಿ ನೀರಿಲ್ಲದೇ ಭಕ್ತರು ಪೇಚಾಡಿದ್ದರು. ಆದರೆ, ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರೂ ನದಿಗೆ ನೀರು ಹರಿಯುವುದೇ ಎಂಬ ಆತಂಕ ಭಕ್ತರನ್ನು ಕಾಡುತ್ತಿದೆ.

Advertisement

ಈ ಬಾರಿ ಉತ್ತಮ ಮಳೆಯಾಗಿ ಟಿಬಿ ಜಲಾಶಯ ತುಂಬಿ 100 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಹೀಗಾಗಿ ಕೆಲ ದಿನಗಳ ಮಟ್ಟಿಗೆ ತುಂಗಭದ್ರಾ ಜಲಾಶಯ ಮಂಡಳಿ ನದಿಗೆ ನೀರು ಹರಿಸಿತ್ತು. ಆದರೆ, ಈಗ ಕೃಷಿ ಮತ್ತು ಕುಡಿಯಲು ನೀರು ಹರಿಸುತ್ತಿರುವ ಕಾರಣ ನದಿಗೆ ಹರಿಸುತ್ತಿದ್ದ ನೀರನ್ನು ಪುನಃ ಸ್ಥಗಿತಗೊಳಿಸಿದೆ. ಇದರಿಂದ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಆರಾಧನೆ ಹೊತ್ತಿಗೆ ನದಿಯಲ್ಲಿ ಮತ್ತೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಆಷಾಢದ ವೇಳೆ ನದಿಯಲ್ಲಿ ಭಾಗೀರಥಿ ನೆಲೆಸಿರುತ್ತಾಳೆ. ತುಂಗೆಯಲ್ಲಿ ಮಿಂದರೆ ಪುಣ್ಯ, ಜತೆಗೆ ರಾಯರ ದರ್ಶನವೂ ಆಗಲಿದೆ ಎಂಬ ಕಾರಣಕ್ಕೆ ಭಕ್ತರು ಮಂತ್ರಾಲಯಕ್ಕೆ ಬರುತ್ತಿದ್ದಾರೆ ಎನ್ನುತ್ತಾರೆ ಮಠದ ವ್ಯವಸ್ಥಾಪಕರು. ಆದರೆ, ಕಳೆದ 3 ದಿನಗಳಿಂದ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ. ಆರಾಧನೆಗೆ ಇನ್ನೂ 20 ದಿನ ಬಾಕಿಯಿದೆ.  ಜಲಾಶಯದಲ್ಲಿ ನೀರಿಗೆ ಬೇಡಿಕೆ ಹೆಚ್ಚಿದ್ದು, ಬಲದಂಡೆಯ ಎರಡು ಕಾಲುವೆ ಹಾಗೂ ಎಡದಂಡೆ ಒಂದು ಕಾಲುವೆ ಮೂಲಕ ಈಗಾಗಲೇ ನಿತ್ಯ 10 ಸಾವಿರ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಅಷ್ಟಾದರೂ ಮಾನ್ವಿ ಭಾಗದ 95ರಿಂದ 104 ಮೈಲಿವರೆಗೆ ನೀರು ತಲುಪುತ್ತಿಲ್ಲ. ಹೀಗಾಗಿ ಬೆಳೆಗೆ ನೀರು ಹರಿಸುವ ಒತ್ತಡ ಟಿಬಿ ಬೋರ್ಡ್‌ ಮೇಲೆ ಹೆಚ್ಚುತ್ತಿದೆ.

ಶ್ರೀಮಠದಿಂದ ಮನವಿ ಸಾಧ್ಯತೆ
ಕಳೆದ ಬಾರಿ ಜಲಾಶಯದಲ್ಲಿ ನೀರು ಕಡಿಮೆಯಿದ್ದ ಕಾರಣ ಆರಾಧನೆಗೆ ನೀರು ಹರಿಸುವಂತೆ ಶ್ರೀಮಠದಿಂದ ಮಾಡಿದ್ದ ಮನವಿಗೆ ಬೋರ್ಡ್‌ ಸ್ಪಂದಿಸಿರಲಿಲ್ಲ. ಆದರೆ, ಈ ಬಾರಿ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ನೀರು ಹರಿಸುವ ವಿಶ್ವಾಸವಿದೆ. ಆ.25ರಿಂದ ರಾಯರ ಆರಾಧನೆ ಜರುಗಲಿದೆ. ಸಪ್ತರಾತ್ರೋತ್ಸವದಲ್ಲಿ ಬರುವ ಭಕ್ತರ ಸಂಖ್ಯೆ ಹೆಚ್ಚು. ಇದನ್ನರಿತ ಶ್ರೀಮಠ ಈ ಬಾರಿಯೂ ಟಿಬಿ ಬೋರ್ಡ್‌ಗೆ ಪತ್ರ ಬರೆಯಲು ನಿರ್ಧರಿಸಿದೆ.

ಆರಾಧನೆಗೆ ಬರುವ ಭಕ್ತರು ನದಿ ಸ್ನಾನಕ್ಕೆ ಹಾತೊರೆಯುವುದು ಸಹಜ. ಈಗಾಗಲೇ ನದಿಯಲ್ಲಿ ನೀರು ಹರಿಯುತ್ತಿದೆ. ಆರಾಧನೆಗೆ ಹೆಚ್ಚುವರಿ ನೀರು ಹರಿಸುವಂತೆ ಟಿಬಿ ಬೋರ್ಡ್‌ಗೆ ಮನವಿ ಮಾಡಲು ನಿರ್ಧರಿಸಲಾಗಿದೆ. ಒಂದು ವೇಳೆ ನೀರು ಬರದಿದ್ದರೆ ಸ್ನಾನಘಟ್ಟದಲ್ಲಿ ಹೆಚ್ಚುವರಿ ನಳಗಳ ವ್ಯವಸ್ಥೆ ಮಾಡಲಾಗುವುದು.
– ಶ್ರೀನಿವಾಸರಾವ್‌, ಮಂತ್ರಾಲಯ ಮಠದ ವ್ಯವಸ್ಥಾಪಕ

Advertisement

ಈಗ ಜಲಾಶಯ ಭರ್ತಿಯಾಗಿದ್ದು 100 ಟಿಎಂಸಿ ಅಡಿ ನೀರು ಲಭ್ಯವಿದೆ. ಆದರೆ, ನಿತ್ಯ 10 ಸಾವಿರ ಕ್ಯುಸೆಕ್‌ ಹೊರ ಹರಿವಿದೆ. ಒಳ ಹರಿವು ಗಣನೀಯವಾಗಿ ಕುಗ್ಗಿದೆ. ಆರಾಧನೆ ವೇಳೆ ನೀರು ಹರಿಸುವ ಬಗ್ಗೆ ಈಗಲೇ ಹೇಳಲಾಗದು. ನೀರಿಗೆ ತುಂಬಾ ಬೇಡಿಕೆಯಿದ್ದು, ರೈತರಿಂದ ಒತ್ತಡ ಹೆಚ್ಚುತ್ತಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದಲ್ಲಿ ಮಾತ್ರ ನದಿಗೆ ನೀರು ಹರಿಸಲು ಸಾಧ್ಯ.
– ಶಂಕರೇಗೌಡ, ಮುಖ್ಯ ಅಭಿಯಂತರ, ಮುನಿರಾಬಾದ್‌ ನೀರಾವರಿ ನಿಗಮ

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next