ಬೆಂಗಳೂರು: ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯೋ, ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಎಲ್ಲಾ ಪಕ್ಷದವರಿಗೂ ಸ್ಪರ್ಧೆ ಮಾಡುವ, ಕಾನೂನು ಬದ್ದವಾಗಿ ಪ್ರಚಾರ ಮಾಡುವ ಹಕ್ಕಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ಮಾಜಿ ಕಾರ್ಪೋರೇಟರ್ ಒಬ್ಬರು, ಸಿದ್ದರಾಮಯ್ಯ ಕಾರಿಗೆ ಅಡ್ಡ ಹಾಕುತ್ತಾರೆ ಅಂದರೇ ಏನರ್ಥ? ಪೋಲಿಸರು ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎಂಬುದು ತಿಳಿಯುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಮಲಿಂಗಾ ರೆಡ್ಡಿ ಹಾಗೂ ಬಿ ಕೆ ಹರಿಪ್ರಸಾದ್ ಜಂಟಿ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.
ಖಾಸಗಿ ಹೊಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಕಾಂಗ್ರೆಸ್ ಕಾರ್ಯಕ್ರಮದಲ್ಲಿ ‘ಮೋದಿ ಮೋದಿ’ ಎಂದು ಕೂಗುವ ಅವಶ್ಯಕತೆ ಏನಿದೆ? ಬಿಜೆಪಿ ಕಾರ್ಯಕ್ರಮದಲ್ಲಿ ಬೇಕಾದರೇ ಕೂಗಲಿ. ನಾವು ಬಿಜೆಪಿ ಕಾರ್ಯಕ್ರಮದಲ್ಲಿ ಹೋಗಿ ‘ರಾಹುಲ್ ರಾಹುಲ್’ ಎಂದು ಕೂಗಬಹುದಾ? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಸಿಎಂ ಕಾರಿಗೆ ಒಬ್ಬರು ಅಡ್ಡ ಹಾಕುತ್ತಾರೆ ಎಂದರೇ ಪೋಲಿಸರು ಇದ್ದಾರೋ, ಇಲ್ಲವೋ ಎಂಬುದು ತಿಳಿಯುತ್ತಿಲ್ಲ. ಅವರು ಬದಲಾಗಬೇಕು ಇಲ್ಲವಾದಲ್ಲಿ ನಾವು ಅದೇ ಮಾರ್ಗ ಅನುಸರಿಸಬೇಕಾಗುತ್ತದೆ. ಪೋಲಿಸ್ ಕಮಿಷನರ್ ಏನು ಮಾಡುತ್ತಿದ್ದಾರೆಂದು ತಿಳಿಯುತ್ತಿಲ್ಲ. ಶಿರಾದಲ್ಲಿ ಪ್ರೀತಂ ಗೌಡ ಹಣ ಹಂಚುತ್ತಿದ್ದಾರೆ. ಈ ಕುರಿತ ವಿಡಿಯೋ ಕೂಡ ಇದೆ. ಆದರೆ ಇಲ್ಲಿಯವರೆಗೂ ಯಾರ ಮೇಲೆ ಕೂಡ ಕ್ರಮ ಕೈಗೊಂಡಿಲ್ಲ. ಚುನಾವಣಾ ಆಯೋಗ ಇದೆಯೋ ಇಲ್ಲವೋ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮಾರುತಿ, ಹ್ಯುಂಡೈ ಮಾರುಕಟ್ಟೆಯ ಚೇತರಿಕೆ; ಟಾಟಾ ಕಾರು ಭರ್ಜರಿ ಬುಕ್ಕಿಂಗ್
ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲವೇ? ಅವರ ಕಾರ್ಯಕ್ರಮದಲ್ಲಿ ಹೇಗಾದರೂ ನಡೆದುಕೊಳ್ಳಲಿ. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೂ ಬಿಜೆಪಿಯವರು ಹೀಗೆ ‘ಮೋದಿ ಮೋದಿ’ ಅಂತಾ ಕೂಗಿ ತೊಂದರೆ ಮಾಡುತ್ತಿದ್ದರು. ಅಶೋಕ್, ಅಶ್ವಥ್ ನಾರಾಯಣ್ ಮುಂತಾದವರೂ ತಮ್ಮವರಿಗೆ ಬುದ್ದಿ ಹೇಳಬೇಕು. ನಾಳೆ ಯಡಿಯೂರಪ್ಪ ಬಂದಾಗ, ನಾವು ಕೂಡ ಅಡ್ಡಹಾಕಬಹುದೇ ಎಂದು ಪ್ರಶ್ನಿಸಿದರು.
ನಾವು ಕೀಳು ಮಟ್ಟದ ರಾಜಕೀಯ ಮಾಡುತ್ತಿಲ್ಲ. ಅಶೋಕ್ ಅವರು ಮಠಗಳಿಗೆ ಹೋಗಲ್ವಾ? ಬಿಜೆಪಿ ಧರ್ಮ, ಜಾತಿ, ಭಾಷೆ, ಒಡೆದು ಗೆಲ್ಲುವುದು. ಸ್ವಾತಂತ್ರ ಹೋರಾಟದಲ್ಲಿ ಇವರ ಕೊಡುಗೆ ಇರಲಿಲ್ಲ. ಇವರ ಪೂರ್ವಜರೆಲ್ಲ ಬ್ರಿಟಿಷರ ಜೊತೆ ಸೇರಿಕೊಂಡಿದ್ದರು. ನಾವು ದೇಶಭಕ್ತರು, ಬಿಜೆಪಿಯವರು ನಕಲಿ ದೇಶಭಕ್ತರು ಎಂದರು.
ಇದನ್ನೂ ಓದಿ: ಬಿಹಾರ ಪ್ರಥಮ ಹಂತದ ಚುನಾವಣೆ: “ಕೈ” ಕೊಟ್ಟ ಇವಿಎಂ ಯಂತ್ರಗಳು, ಮತದಾರರ ಆಕ್ರೋಶ