Advertisement

ಹಿಮಾಲಯದಲ್ಲಿ ಸಾಗರವಿತ್ತೇ?- ಬೆಂಗಳೂರು IISC, ಜಪಾನ್‌ ನಿಗಾಯಾ ವಿವಿ ಸಂಶೋಧಕರಿಂದ ಪತ್ತೆ

10:09 PM Jul 27, 2023 | Team Udayavani |

ನವದೆಹಲಿ: ಹಿಮಾಲಯ ಪರ್ವತದೊಳಗಿನ ರಹಸ್ಯವೊಂದನ್ನು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌(ಐಐಎಸ್‌ಸಿ) ಮತ್ತು ಜಪಾನ್‌ನ ನಿಗಾಟಾ ಯುನಿವರ್ಸಿಟಿಯ ವಿಜ್ಞಾನಿಗಳು ಭೇದಿಸಿದ್ದಾರೆ. ಅದೇನೆಂದರೆ, ಪ್ರಾಚೀನ ಕಾಲದಲ್ಲಿ ಹಿಮಾಲಯದಲ್ಲಿ ಸಾಗರವೊಂದಿತ್ತು ಎನ್ನುವುದು!

Advertisement

ಹೌದು, ಪ್ರೀಕ್ಯಾಂಬ್ರಿಯನ್‌ ರಿಸರ್ಚ್‌ ನಿಯತಕಾಲಿಕೆಯಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ. ವಿಜ್ಞಾನಿಗಳ ಈ ಸಂಶೋಧನೆಯು ಭೂಮಿಯಲ್ಲಿ ಈ ಹಿಂದೆ ನಡೆದಿರಬಹುದಾದ ಆಮ್ಲಜನಕೀಕರಣ ಪ್ರಕ್ರಿಯೆಯ ಕುರಿತು ಬೆಳಕು ಚೆಲ್ಲಲಿದೆ ಎಂದು ವಿಶ್ಲೇಷಿಸಲಾಗಿದೆ.

ಹಿಮಾಲಯದ ಅಡಿಯಲ್ಲಿ ಪ್ರಾಚೀನ ಸಾಗರವೊಂದರ ಕುರುಹನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಬರೋಬ್ಬರಿ 600 ದಶಲಕ್ಷ ವರ್ಷಗಳ ಹಿಂದಿನದ್ದು ಎನ್ನಲಾದ ಖನಿಜಾಂಶಗಳೊಳಗೆ ನೀರಿನ ಹನಿಗಳಿರುವುದನ್ನು ಕಂಡುಕೊಂಡಿದ್ದಾರೆ. ಈ ಖನಿಜಗಳಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಗ್ನೇಷಿಯಂಗಳು ಸಮೃದ್ಧವಾಗಿವೆ. 700ರಿಂದ 500 ದಶಲಕ್ಷ ವರ್ಷಗಳ ನಡುವೆ ಭೂಮಿಯು ದೀರ್ಘಾವಧಿಯ ಹಿಮಶಿಲಾರಚನೆಗೆ ಒಳಗಾಯಿತು. ಇದರಿಂದಾಗಿ ಎರಡನೇ ಅತಿದೊಡ್ಡ ಆಮ್ಲಜನಕೀಕರಣ ಪ್ರಕ್ರಿಯೆ ನಡೆಯಿತು.

ಪರಿಣಾಮವೆಂಬಂತೆ, ವಾತಾವರಣದಲ್ಲಿನ ಆಮ್ಲಜನಕದ ಮಟ್ಟ ಹೆಚ್ಚಳವಾಗಿ, ಸಂಕೀರ್ಣ ಜೀವಿಗಳ ವಿಕಸನ ಸಾಧ್ಯವಾಗಿರಬಹುದು. ಆದರೆ, ಇದನ್ನು ನಿಖರವೆಂದು ಹೇಳಬಹುದಾದ ಸಂರಕ್ಷಿತ ಪಳೆಯುಳಿಕೆಗಳ ಸಾಕ್ಷ್ಯಗಳು ಇಲ್ಲ. ಹಿಮಾಲಯದಲ್ಲಿ ಹೊಸದಾಗಿ ಆವಿಷ್ಕರಿಸಲಾಗಿರುವ ಮರೈನ್‌ ಶಿಲೆಗಳು ಇದಕ್ಕೆ ಉತ್ತರವನ್ನು ಕೊಡಬಹುದು ಎಂದು ಈ ಅಧ್ಯಯನದ ನೇತೃತ್ವ ವಹಿಸಿರುವ ಐಐಎಸ್‌ಸಿ ಭೂವಿಜ್ಞಾನಿ ಕೇಂದ್ರದ ಪಿಎಚ್‌ಡಿ ವಿದ್ಯಾರ್ಥಿ ಪ್ರಕಾಶ್‌ಚಂದ್ರ ಆರ್ಯ ಹೇಳಿದ್ದಾರೆ.

ಇದಕ್ಕಾಗಿ ಸಂಶೋಧಕರು ಅಮೃತಪುರದಿಂದ ಮಿಲಾಮ್‌ ನೀರ್ಗಲ್ಲುವರೆಗೆ, ಡೆಹ್ರಾಡೂನ್‌ನಿಂದ ಗಂಗೋತ್ರಿ ನೀರ್ಗಲ್ಲುವರೆಗೆ ಅಧ್ಯಯನ ಕೈಗೊಂಡಿದ್ದಾರೆ. ಇದರಿಂದಾಗಿ ಸಾಗರಗಳ ವಿಸಕನ ಮತ್ತು ಭೂಮಿಯಲ್ಲಿ ಜೀವಿಗಳ ವಿಕಸನಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿವೆ ಎಂದು ಅಂದಾಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next