ಬೆಂಗಳೂರು: ಲಾಕ್‌ಡೌನ್ ಮತ್ತೂಂದು ಬಾರಿಗೆ ವಿಸ್ತರಣೆಯಾಗಿರುವುದರಿಂದ ಎಸೆಸೆಲ್ಸಿ ಮತ್ತು ಬಾಕಿಯಾಗಿರುವ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಈಗಾಗಲೇ 3ನೇ ಹಂತದ ಲಾಕ್‌ಡೌನನ್ನು ಇನ್ನೂ 2 ವಾರಗಳ ಕಾಲ ವಿಸ್ತರಿಸಲಾಗಿದೆ. ಜತೆಗೆ ಕೆಲವು ಜಿಲ್ಲೆಗಳಲ್ಲಿ ಕೋವಿಡ್-19 ಪೀಡಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದು ನೇರವಾಗಿ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ಮತ್ತು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮೇಲೆ ಪ್ರಭಾವ ಬೀರಲಿದೆ. ಹಲವು ಕ್ಷೇತ್ರಗಳಲ್ಲಿ ಚಟುವಟಿಕೆಗಳ ಪುನರಾರಂಭಕ್ಕೆ ಸರಕಾರ ಹಸುರು ನಿಶಾನೆ ತೋರಿದ್ದರೂ ಪರೀಕ್ಷೆಗಳನ್ನು ಸದ್ಯ ಆಯೋಜಿ ಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
ಮೇ 3ರ ಬಳಿಕ ಎಸೆಸೆಲ್ಸಿ ಪರೀಕ್ಷೆಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ವಿದ್ಯಾರ್ಥಿಗಳಿಗೆ ದೂರದರ್ಶನದ ಮೂಲಕ ಪುನರ್‌ಮನನ ತರಗತಿಗಳನ್ನು ಆರಂಭಿಸಲಾಗಿತ್ತು. ಪರಿಸ್ಥಿತಿ ಸುಧಾರಿಸಿದಲ್ಲಿ ಮೇ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಪರೀಕ್ಷೆಗೆ ಚಿಂತನೆ ನಡೆಸಲಾಗಿತ್ತು. ಆದರೆ ಈಗ ಲಾಕ್‌ಡೌನ್ ಮತ್ತೆರಡು ವಾರ ಮುಂದೆ ಹೋಗಿರುವುದರಿಂದ ಪರೀಕ್ಷೆ ಯಾವಾಗ ನಿಗದಿ ಮಾಡಬೇಕು ಎಂಬುದು ಸರಕಾರ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಗ್ಗಂಟಾಗಿದೆ.
ಕೋವಿಡ್-19 ಭೀತಿ ದಿನೇದಿನೇ ಹೆಚ್ಚು ತ್ತಲೇ ಇರುವುದರಿಂದ ಇಂಗ್ಲಿಷ್ ಹೊರತು ಪಡಿಸಿ ಉಳಿದೆಲ್ಲ ಪರೀಕ್ಷೆ ಪೂರೈಸಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಲ್ಲೂ ಆತಂಕ ಮನೆ ಮಾಡಿದೆ. ಆಗಿರುವ ಪರೀಕ್ಷೆಗಳ ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯವೂ ಆರಂಭವಾಗಿಲ್ಲ.
ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಎಸೆಸೆಲ್ಸಿ ಪರೀಕ್ಷೆ ನಡೆಸಲು ರೂಪುರೇಷೆ ಸಿದ್ಧಗೊಂಡಿದೆ. ಪರೀಕ್ಷೆ ನಡೆಸಿದ ಕೆಲವೇ ದಿನಗಳಲ್ಲಿ ಮೌಲ್ಯಮಾಪನ ಮಾಡಿ, ಫಲಿತಾಂಶ ನೀಡಲಿದ್ದೇವೆ.
-ಉಮಾಶಂಕರ್,
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರ. ಕಾರ್ಯದರ್ಶಿ
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ನಡೆಸುತ್ತೇವೆ. ಲಾಕ್‌ಡೌನ್ ಮುಗಿದ ಅನಂತರ ದಿನಾಂಕ ಘೋಷಣೆಯಾಗಲಿದೆ. ಈ ಬಗ್ಗೆ ಎಲ್ಲ ರೀತಿಯ ಚರ್ಚೆ ನಡೆಸುತ್ತಿದ್ದೇವೆ. ಲಾಕ್‌ಡೌನ್ ವಿಸ್ತರಣೆಯಾಗಿರುವುದರಿಂದ ಸ್ವಲ್ಪ ವಿಳಂಬ ಆಗಬಹುದು
-ಕನಗವಲ್ಲಿ, ನಿರ್ದೇಶಕಿ, ಪದವಿಪೂರ್ವ ಶಿಕ್ಷಣ ಇಲಾಖೆ
- ರಾಜು ಖಾರ್ವಿ ಕೊಡೇರಿ