ಬೆಂಗಳೂರು: ಸುದೀರ್ಘ ಅವಧಿಯ ಲಾಕ್‌ಡೌನ್ ಪರಿಣಾಮ ಎಲ್ಲ ಪ್ರಗತಿ ಕಾಮಗಾರಿಗಳಿಗೂ ಹಿನ್ನಡೆ ಉಂಟಾಗಿದ್ದು, ಈ ಹಿಂದೆ ಇಟ್ಟುಕೊಂಡಿದ್ದ ಪೂರ್ಣಗೊಳಿಸುವ ಗುರಿಯು ಅನಿವಾರ್ಯವಾಗಿ ಮುಂದೂಡಲ್ಪಡುತ್ತಿದೆ. ಆದರೆ, “ನಮ್ಮ ಮೆಟ್ರೋ’ ಎರಡನೇ ಹಂತದ ಕನಕಪುರ ರಸ್ತೆಯಲ್ಲಿನ ಮಾರ್ಗ (ಹಸಿರು ಮಾರ್ಗ) ಮಾತ್ರ ಹೆಚ್ಚು-ಕಡಿಮೆ “ಡೆಡ್‌ಲೈನ್’ನಲ್ಲೇ ಪೂರ್ಣಗೊಳ್ಳಲಿದೆ! ಹೌದು, ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿವೆ.
ಈಗಾಗಲೇ ನಿಲ್ದಾಣ ನಿರ್ಮಾಣ, ಹಳಿ ಜೋಡಣೆ, ವಿದ್ಯುತ್ ಪೂರೈಕೆ ಸೇರಿದಂತೆ ಕಾರ್ಮಿಕರ ಅವಲಂಬಿತ ಪ್ರಮುಖ ಕಾಮಗಾರಿಗಳು ಪೂರ್ಣಗೊಂಡಿವೆ. ಮಾರ್ಗದಲ್ಲಿ ಬರುವ ನಿಲ್ದಾಣಗಳಿಗೆ ಭದ್ರತಾ ಸಿಬ್ಬಂದಿ ಮತ್ತು ಹೌಸ್‌ಕೀಪಿಂಗ್‌ಗಾಗಿ ಏಜೆನ್ಸಿಗಳಿಂದ ಟೆಂಡರ್ ಆಹ್ವಾನಿಸಲಾಗಿದೆ. ಸದ್ಯ ಸಿಗ್ನಲಿಂಗ್ ಜೋಡಣೆ ಹಾಗೂ ಪರೀಕ್ಷೆ ಕಾರ್ಯ ನಡೆದಿದ್ದು, ಸೆಪ್ಟೆಂಬರ್ ಹೊತ್ತಿಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಆದರೆ, ಸಾರ್ವಜನಿಕ ಸೇವೆಗಾಗಿ ನವೆಂಬರ್ ವರೆಗೆ ಕಾಯುವುದು ಅನಿವಾರ್ಯ ಆಗಲಿದೆ. ಸುಮಾರು 6.29 ಕಿ.ಮೀ. ಉದ್ದದ ಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್ ಮಾರ್ಗವನ್ನು 2020ರ ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು ಗಡುವು ವಿಧಿಸಿಕೊಂಡಿದೆ. ಈ ಮಧ್ಯೆ ಕೋವಿಡ್-19 ಪೂರ್ವದಲ್ಲಿ ಎರಡು ತಿಂಗಳು ಮುಂಚಿತವಾಗಿಯೇ ಅಂದರೆ ಜುಲೈ ಅಂತ್ಯದೊಳಗೆ ಸೇವೆಗೆ ಮುಕ್ತಗೊಳಿಸುವ ಗುರಿ ಇತ್ತು. ಆದರೆ, ಎರಡೂವರೆ ತಿಂಗಳು ಲಾಕ್ ಡೌನ್ ಹಾಗೂ ಈ ಮಧ್ಯೆ ಕಾರ್ಮಿಕರ ವಲಸೆಯಿಂದ ಕಾಮಗಾರಿ ಮುಂದೂಡಲ್ಪಟ್ಟಿತು ಎಂದು ಮೂಲಗಳು ತಿಳಿಸಿವೆ.
ಲಾಕ್‌ಡೌನ್ ಜಾರಿಯಾಗುವಷ್ಟರಲ್ಲಿ ಸಿವಿಲ್ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದವು. ಸದ್ಯ ಎಂಜಿನಿಯರಿಂಗ್ ಅವಲಂಬಿತ ತಾಂತ್ರಿಕ ಕಾರ್ಯಗಳು ಮಾತ್ರ ಬಾಕಿ ಇದ್ದು, ಅದನ್ನು ಮಾಡಿಮುಗಿಸುವುದು ಗುತ್ತಿಗೆ ಪಡೆದ ಆಯಾ ಕಂಪನಿಗಳ ಜವಾಬ್ದಾರಿ ಆಗಿದೆ. ನಿಗದಿತ ಅವಧಿಯಲ್ಲಿ ಅದು ಆಗಲಿದೆ. ಎಲ್ಲ ಅಗತ್ಯ ಪರೀಕ್ಷೆಗಳು ಮುಗಿಯುತ್ತಿದ್ದಂತೆ, ರೈಲ್ವೆ ಸುರಕ್ಷತಾ ಆಯುಕ್ತರಿಗೆ ಅನುಮತಿಗಾಗಿ ಕೋರಲಾಗುವುದು. ಹೆಚ್ಚು-ಕಡಿಮೆ ಒಂದೂವರೆ ತಿಂಗಳಲ್ಲಿ ಮುಖ್ಯಮಂತ್ರಿಯನ್ನು ಪರಿಶೀಲನೆಗೆ ಆಹ್ವಾನಿಸುವ ಗುರಿ ಕೂಡ ಇದೆ. ಶೀಘ್ರ ಈ ಸಂಬಂಧ ದಿನಾಂಕ ನಿಗದಿಪಡಿಸಿಕೊಳ್ಳಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಹಸಿರು ಮಾರ್ಗದ ಹಾದಿ ಸುಗಮ: ಹಸಿರು ಮಾರ್ಗದಲ್ಲಿ ಅಂಜನಾಪುರ ರೋಡ್ ಕ್ರಾಸ್, ಕೃಷ್ಣಲೀಲಾ ಪಾರ್ಕ್, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್‌ಶಿಪ್. ಇನ್ನು ಇದಕ್ಕೆ ಪೂರಕವಾಗಿ ಇದೇ ಹಸಿರು ಮಾರ್ಗದ ಮತ್ತೂಂದು ತುದಿಯಲ್ಲಿರುವ ನಾಗಸಂದ್ರ-ಬಿಐಇಸಿ (ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ) ನಡುವೆ ಭೂಸ್ವಾಧೀನ ಪ್ರಕ್ರಿಯೆ ಕಗ್ಗಂಟಾಗಿತ್ತು. ಇದರಿಂದ ಬಿಐಇಸಿ ನಿಲ್ದಾಣಕ್ಕೆ ಅಗತ್ಯವಿರುವ ಹೆಚ್ಚುವರಿ 1,813 ಚ. ಮೀ. ಭೂಸ್ವಾಧೀನಕ್ಕೆ ಸರ್ಕಾರ ಈಚೆಗೆ ಅಧಿಸೂಚನೆ ಹೊರಡಿಸಿದೆ.
ಈ ಮೂಲಕ ಉದ್ದೇಶಿತ ಮಾರ್ಗದ ಹಾದಿ ಸಂಪೂರ್ಣ ಸುಗಮವಾಗಿದೆ. ಅದೇ ರೀತಿ, ಸುಮಾರು 15 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ-ವೈಟ್μàಲ್ಡ್ ಮಾರ್ಗದಲ್ಲಿ ಯಾವುದೇ ತೊಡಕುಗಳು ಇಲ್ಲ. ತುಮಕೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ಮಾರ್ಗಗಳು ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಹಂತದಲ್ಲೇ ಇವೆ. ಈ ಹಂತದಲ್ಲಿ ಕಾರ್ಮಿಕರು ಶಿಬಿರಗಳಿಂದ ಬಿಟ್ಟುಹೋಗುತ್ತಿರುವುದು ಹೆಚ್ಚಾಗಿದೆ. ಇದು ಕಾಮಗಾರಿ ಪ್ರಗತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ನಿಗಮದ ಅಧಿಕಾರಿಗಳಿಗೆ ತಲೆನೋವಾಗಿದೆ.
ಹೊಸ ವರ್ಷಕ್ಕೆ ಕೆಂಗೇರಿ ಮಾರ್ಗ?: ಮೈಸೂರು ರಸ್ತೆ- ಕೆಂಗೇರಿ ನಡುವೆ ಮೆಟ್ರೋ ನಿರ್ಮಾಣ ಕಾರ್ಯ ಕೂಡ ಚುರುಕಾಗಿ ಸಾಗಿದೆ. ಆದರೆ, ಇನ್ನೂ ಕಾರ್ಮಿಕರ ಅವಲಂಬಿತ ಕಾಮಗಾರಿ ಬಾಕಿ ಇದೆ. ಆದರೆ, ಲಾಕ್‌ಡೌನ್‌ನಿಂದ ಕಾರ್ಮಿಕರು ವಲಸೆ ಹೋಗಿದ್ದರಿಂದ ಕೊರತೆ ಕಾಡುತ್ತಿದೆ. ಜತೆಗೆ ಈ ಮಾರ್ಗದಲ್ಲಿ ಚಲ್ಲಘಟ್ಟ ನಿಲ್ದಾಣ ಬೇರೆ ಸೇರ್ಪಡೆಗೊಂಡಿದೆ. ಇದೆಲ್ಲ ಕಾರಣಗಳಿಂದ ನಿಗದಿತ ಗಡುವಿನಲ್ಲಿ ಅಂದರೆ ವರ್ಷಾಂತ್ಯದ ಒಳಗೆ ಪೂರ್ಣಗೊಳಿಸುವುದು ಅನುಮಾನವಾಗಿದ್ದು, 2021ರ ಜನವರಿ-ಮಾರ್ಚ್ ಮಧ್ಯೆ ಲೋಕಾರ್ಪಣೆ ಗುರಿ ಇದೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ನವೆಂಬರ್ 1ಕ್ಕೆ ಸೇವೆಗೆ ಮುಕ್ತ: ಆಗಸ್ಟ್‌ನಲ್ಲಿ ಮುಕ್ತಗೊಳಿಸುವ ಗುರಿ ಇತ್ತು. ಆದರೆ, ಲಾಕ್ ಡೌನ್‌ನಿಂದ ಇದು ತುಸು ತಡವಾಗಿದ್ದು, ಕನ್ನಡ ರಾಜ್ಯೋತ್ಸವದಂದು ಲೋಕಾರ್ಪಣೆಗೊಳಿಸಲು ನಿರ್ಧರಿಸಲಾಗಿದೆ. ಸದ್ಯ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇವೆ. ಇನ್ನು ತುಮಕೂರು ರಸ್ತೆಯ ಮೆಟ್ರೋ ಮಾರ್ಗವನ್ನೂ ವರ್ಷಾಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಇದೆ.
-ಅಜಯ್ ಸೇಠ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್
* ವಿಜಯಕುಮಾರ್ ಚಂದರಗಿ