ಪ್ರೀತಿಸುವ ಮೊದಲು ಯೋಚಿಸಿ. ದೃಢ ನಿರ್ಧಾರ, ದೃಢ ಸಂಕಲ್ಪವಿದ್ದರೆ ಮಾತ್ರ ಪ್ರೀತಿಸಿ. ಪ್ರೀತಿಸಿದವನಿಗಿಂತ ಹೆತ್ತವರ ಪ್ರೀತಿ, ಗೌರವ ಹೆಚ್ಚೆನಿಸುವುದಾದರೆ ದಯವಿಟ್ಟು ಅವರ ಮಾತನ್ನೇ ಕೇಳಿ. ಅವರಿಗೆ ನೀವು ಕೆಟ್ಟ ಮಕ್ಕಳಾಗುವುದು ಬೇಡ.
ಪ್ರೀತಿಯ ಹುಡುಗಿ,
ಹೇಗಿದ್ದಿ? ಚೆನ್ನಾಗಿದ್ದೀಯಾ? ನೀನು ಚೆನ್ನಾಗಿಯೇ ಇರಿ¤àಯ ಬಿಡು. ಹಾಗೆಂದುಕೊಂಡೇ ಈ ಪತ್ರ ಬರೆಯುತ್ತಿದ್ದೇನೆ. ಮಾತುಗಳಲ್ಲಿ ಹೇಳಲಾಗದ ಕೆಲವೊಂದು ವಿಷಯಗಳನ್ನು ಅಕ್ಷರಗಳಲ್ಲಿ ಹೇಳಬಹುದು ಅಂತ ಎಲ್ಲಿಯೋ ಓದಿದ ನೆನಪು. ಹಾಗಾಗಿಯೇ ಈ ಪತ್ರ.
ನೀನೀಗ ಸುಖವಾಗಿರಬಹುದು. ಬಹುಶಃ ಈ ಬಾಲಿಶ ಪ್ರೇಮಿಯ ನೆನಪಾಗದಿರುವಷ್ಟರ ಮಟ್ಟಿಗೆ. ನಾವಿಬ್ಬರೂ ಬರೀ ಪರಿಚಯದವರು ಮಾತ್ರವೇ ಆಗಿದ್ದರೆ, ಹಾಯ್, ಹಲೋ ಅನ್ನುವಷ್ಟರ ಮಟ್ಟಿಗಷ್ಟೇ ನಮ್ಮ ಫ್ರೆಂಡ್‌ಶಿಪ್ ಇದ್ದಿದ್ದರೆ ಸಾಕಾಗಿತ್ತು. ಆದರೆ ಈ ಪ್ರೀತಿಯ ಹುಚ್ಚನ್ನು ಏಕೆ ಹಚ್ಚಿಕೊಂಡೆವು ಎಂದು ನನ್ನನ್ನೇ ನಾನು ಅನೇಕ ಬಾರಿ ಕೇಳಿಕೊಂಡಿದ್ದೇನೆ. ಅಂದು ನಾವು ಪ್ರೀತಿಸುತ್ತಿದ್ದ ದಿನಗಳಲ್ಲಿ, ಮುಂದೊಂದು ದಿನ ಇಂಥ ವಿರಹ ವೇದನೆಯಿಂದ ಬಳಲುವ ಪ್ರಸಂಗ ಬರುತ್ತದೆ ಎಂಬ ಮುನ್ಸೂಚನೆ ಸಿಕ್ಕಿದ್ದರೆ…? ನಿನ್ನ ಅನೇಕ ಸ್ನೇಹಿತರಲ್ಲಿ ನಾನೂ ಒಬ್ಬನಾಗಿ, ಸಾಮಾನ್ಯರ ಸಾಲಿನಲ್ಲಿ ಸೇರಿ ಬಿಡುತ್ತಿದ್ದೆ. ಆದರೆ, ಜೀವನದ ಪ್ರತಿ ಕ್ಷಣವನ್ನೂ ನಾನು ಅಸಂತೋಷದಿಂದ ಕಳೆಯಬೇಕೆಂದೇ ನೀನು ಪ್ರೇಮಿಯಾಗಿ ನನ್ನ ಜೀವನವನ್ನು ಪ್ರವೇಶಿಸಿದ್ದೆ. ಆನಂತರದಲ್ಲಿ ನಾನು ನಾನಾಗಿ ಉಳಿಯಲಿಲ್ಲ. ಸಂಪೂರ್ಣವಾಗಿ ನಿನ್ನವನಾಗಿ ಬಿಟ್ಟೆ. ನಿನಗೋಸ್ಕರವೇ ಈ ಬದುಕು ಎನ್ನುವಷ್ಟರ ಮಟ್ಟಿಗೆ ನಿನ್ನ ಪ್ರೇಮದಾಳದಲ್ಲಿ ಮುಳುಗಿಬಿಟ್ಟೆ. ಅದರಿಂದ ಮೇಲೇಳಲೇ ಆಗಲಿಲ್ಲ. ಈಗ, ಹೊರ ಜಗತ್ತಿಗೆ ಬರಬೇಕೆಂದರೆ ಅದರ ತಿರುವೂ ಕಾಣಿಸುತ್ತಿಲ್ಲ. ಇಂಥದ್ದೊಂದು ಅಸಹಾಯಕ ಪರಿಸ್ಥಿತಿಗೆ ನನ್ನನ್ನು ದೂಡಿಬಿಟ್ಟೆ.
“ಗುಲಾಬಿ ಹಿಡಿದು ಬಂದು ನನ್ನೆದುರು ನಿಂತ ಮೊದಲ ಹುಡುಗ ನೀನೇ’ ಎಂದು ನೀನು ಹೇಳಿದಾಗ, ನಾನು ಖುಷಿಯಿಂದ ಉಬ್ಬಿ ಹೋಗಿದ್ದೆ. ಯಾಕೆಂದರೆ, ಒಬ್ಬ ಹುಡುಗಿಗೆ ಮೊದಲ ಪ್ರೇಮಿಯಾಗುವುದಿದೆಯಲ್ಲ. ಓಹ್! ಅದೊಂದು ಮಧುರಾನುಭವ. ಸಂತೋಷಕ್ಕೆ ಇದಕ್ಕಿಂತ ಮುಖ್ಯ ಕಾರಣವೆಂದರೆ, ಯಾವ ಪ್ರತಿರೋಧವೂ ಇಲ್ಲದೇ ನನ್ನ ಪ್ರೇಮ ನಿವೇದನೆಗೆ ನೀನು ಒಪ್ಪಿಕೊಂಡದ್ದು. ಇನ್ನೇನು ಬೇಕಿತ್ತು ಹೇಳು, ಪ್ರೇಮಲೋಕವೊಂದನ್ನು ಹೊರತುಪಡಿಸಿ ಬೇರೆ ಬದುಕು ಇಲ್ಲ ಅನ್ನಿಸಲು? ಈ ಪ್ರಪಂಚದ ಜೀವ ಕೋಟಿಯಲ್ಲಿ ನೀನೊಬ್ಬಳೇ ಎದ್ದು ಕಾಣುತ್ತಿದ್ದೆ. ಸ್ನಾನ, ಊಟ, ನಿದ್ದೆ… ಎಲ್ಲೆಲ್ಲೂ ಬರೀ ನೀನೇ! ಒಂಟಿಯಾಗಿದ್ದಾಗಲೂ ನಾನು ನಿನ್ನೊಂದಿಗೇ ಮಾತಾಡಿಕೊಳ್ಳತೊಡಗಿದೆ. ಅದನ್ನು ನೋಡಿ ಅನೇಕರು ನನ್ನನ್ನು ಹುಚ್ಚ ಅಂದರು. ನಿಜ ಹೇಳಬೇಕೆಂದರೆ, ನಾನು ಪ್ರೀತಿಯಲ್ಲಿ ಬಿದ್ದ ಹುಚ್ಚನಾಗಿಬಿಟ್ಟಿದ್ದೆ.
ಮುಂದೆ ನಡೆದದ್ದೇನು? “ಅಪ್ಪ ತೋರಿಸಿದ ಹುಡುಗನನ್ನು ಮದುವೆಯಾಗುತ್ತಿದ್ದೇನೆ’ ಎಂದು ಒಂದು ಸಾಲಿನ ಪತ್ರ ಗೀಚಿ ಒಗೆದು, ಸಂಬಂಧವನ್ನು ಕಡಿದುಕೊಂಡೆಯಲ್ಲ? ಆಗ ಮಾತ್ರ ನಾನು ಪಾತಾಳಕ್ಕಿಳಿದು ಹೋದೆ. ಭಾವಿ ಜೀವನದ ಕನಸನ್ನು ಕಟ್ಟಿದ್ದ ನನ್ನನ್ನು ಮೇಲೇಳಲೇ ಆಗದಷ್ಟು ಆಳಕ್ಕೆ ನೂಕಿದ್ದೆ. ಈ ಪ್ರೀತಿಯೇ ಹೀಗೇನೋ, ಈ ಹುಡುಗಿಯರೇ ಹೀಗೇನೋ ಎಂದು ಸಮಸ್ತ ಹೆಣ್ಣುಕುಲವನ್ನೇ ಬಯ್ದುಕೊಳ್ಳುವಷ್ಟರ ಮಟ್ಟಿಗೆ ಕುಸಿದು ಹೋದೆ.
ನೀನು ಬೇರೊಬ್ಬನನ್ನು ಕಟ್ಟಿಕೊಂಡು ಸುಖವಾಗಿರಬಹುದು. ಆದರೆ ನನ್ನ ಹೃದಯಕ್ಕೆ ಮಾಡಿ ಹೋಗಿರುವ ಗಾಯ ವಾಸಿ ಮಾಡುವವರ್ಯಾರು? ಈ ಪತ್ರದ ಮೂಲಕ ನಿನ್ನಂಥ ಹೆಣ್ಣು ಮಕ್ಕಳಿಗೆ ನನ್ನದೊಂದು ಕೋರಿಕೆ. ಪ್ರೀತಿಸುವ ಮೊದಲು ಯೋಚಿಸಿ. ದೃಢ ನಿರ್ಧಾರ, ದೃಢ ಸಂಕಲ್ಪವಿದ್ದರೆ ಮಾತ್ರ ಪ್ರೀತಿಸಿ. ಪ್ರೀತಿಸಿದವನಿಗಿಂತ ಹೆತ್ತವರ ಪ್ರೀತಿ, ಗೌರವ ಹೆಚ್ಚೆನಿಸುವುದಾದರೆ ದಯವಿಟ್ಟು ಅವರ ಮಾತನ್ನೇ ಕೇಳಿ. ಅವರಿಗೆ ನೀವು ಕೆಟ್ಟ ಮಕ್ಕಳಾಗುವುದು ಬೇಡ. ಆದರೆ, ಒಮ್ಮೆ ಪ್ರೀತಿಯಲ್ಲಿ ಬಿದ್ದಿರಿ ಎಂದಾದರೆ ಏನೇ ಬಂದರೂ ಎದುರಿಸುವ ಛಲ, ಧೈರ್ಯ ನಿಮ್ಮದಾಗಿರಲಿ. ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಮನುಷ್ಯರಾಗಬೇಡಿ.
ಇಂತಿ
– ಭೋಜರಾಜ ಸೊಪ್ಪಿಮಠ