Advertisement

ಟೀಮ್‌ ಇಂಡಿಯಾದ ವಿಂಡೀಸ್‌ ಪ್ರವಾಸ: ಸೀನಿಯರ್‌ಗಳ ಸ್ಥಾನಕ್ಕೆ ಕಾದಿದೆಯೇ ಆಪತ್ತು?

10:58 PM Jun 12, 2023 | Team Udayavani |

ಹೊಸದಿಲ್ಲಿ: ದ್ವಿತೀಯ ಆವೃತ್ತಿಯ ಐಸಿಸಿ ವಿಶ್ವಕಪ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಮುಗಿದಿದೆ. ಭಾರತ ಸತತ 2ನೇ ಫೈನಲ್‌ನಲ್ಲೂ ಮುಖಭಂಗ ಅನುಭವಿಸಿದೆ. ಆಸ್ಟ್ರೇಲಿಯ ವಿರುದ್ಧ ಎದುರಾದ 209 ರನ್ನುಗಳ ಭಾರೀ ಸೋಲು ಟೀಮ್‌ ಇಂಡಿಯಾದ ಟೆಸ್ಟ್‌ ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದ್ದು, ಆಯ್ಕೆ ಮಂಡಳಿ ಯೋಚನೆಯಲ್ಲಿ ಮುಳುಗಿದೆ.

Advertisement

ಈ 2 ವರ್ಷಗಳ ಅವಧಿಯಲ್ಲಿ ಭಾರತ ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಫೈನಲ್‌ ತಂಡದ ಆಯ್ಕೆಯಲ್ಲಿ ಎಡವಿದ್ದು ಹಗಲಿನಷ್ಟು ಸ್ಪಷ್ಟ. ಇಲ್ಲಿ ಯಾರೆಲ್ಲ ಆಡಬೇಕಿತ್ತು ಎಂಬುದನ್ನು ಸಾಮಾನ್ಯ ಜನರೂ ನಿಖರವಾಗಿ ಹೇಳಬಲ್ಲರು. ಆದರೆ ತಂಡದ ಆಡಳಿತ ಮಂಡಳಿಗೆ, ಕೋಚ್‌ ಮತ್ತು ನಾಯಕನಿಗೆ ಈ ಸಾಮಾನ್ಯ ಅಂಶ ಕೂಡ ಅರಿವಾಗದಿದ್ದುದು ವಿಪರ್ಯಾಸ. ಓವಲ್‌ನಲ್ಲಿ ಅಶ್ವಿ‌ನ್‌ ಅವರನ್ನು ಹೊರಗಿರಿಸಿದ್ದು ದೊಡ್ಡ ಎಡವಟ್ಟಾಗಿ ಪರಿಣಮಿಸಿತು.

ಜತೆಗೆ ಸೀನಿಯರ್‌ ಬ್ಯಾಟರ್‌ಗಳ ವೈಫ‌ಲ್ಯ ಭಾರತಕ್ಕೆ ಮುಳುವಾಯಿತು. ನಾಯಕ ರೋಹಿತ್‌ ಶರ್ಮ, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜ ಅವರ ಅನುಭವ ಇಲ್ಲಿ ನೆರವಿಗೆ ನಿಲ್ಲಲಿಲ್ಲ. ರೋಹಿತ್‌ ನಾಯಕತ್ವ ಕೂಡ ಪರಿಣಾಮಕಾರಿಯಾಗಿರಲಿಲ್ಲ. ಪೂಜಾರ ಇಂಗ್ಲೆಂಡ್‌ ಕೌಂಟಿಯಲ್ಲಿ ಪ್ರಚಂಡ ಫಾರ್ಮ್ ತೋರ್ಪಡಿಸಿದರೂ ಟೆಸ್ಟ್‌ನಲ್ಲಿ ಕೈ ಎತ್ತಿದರು. ಬಹುಶಃ ಓವಲ್‌ ಫೈನಲ್‌ ಎನ್ನುವುದು ಭಾರತ ತಂಡದ ಕೆಲವರಿಗಾದರೂ ಕೊನೆಯ ಟೆಸ್ಟ್‌ ಆಗಿ ಪರಿಣಮಿಸುವುದು ಖಂಡಿತ.

ಆಯ್ಕೆಯ ಸವಾಲು
ಮುಂದಿನ ತಿಂಗಳು ಭಾರತ ತಂಡ ವೆಸ್ಟ್‌ ಇಂಡೀಸ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಇಲ್ಲಿ 2 ಟೆಸ್ಟ್‌ಗಳನ್ನಾಡಲಿದೆ. ಜತೆಗೆ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯೂ ಇದೆ. ಈ ಸರಣಿ ತೃತೀಯ ಆವೃತ್ತಿಯ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ಗೆ ನಾಂದಿ ಹಾಡಲಿರುವುದರಿಂದ ಟೆಸ್ಟ್‌ ತಂಡದ ಆಯ್ಕೆ ಅತ್ಯಂತ ಜಟಿಲವೆನಿಸುವುದರಲ್ಲಿ ಅನುಮಾನವಿಲ್ಲ. ಮುಂದಿನೆರಡು ವರ್ಷಗಳ ಕಾಲ ಉತ್ತಮ ಫಾರ್ಮ್ ಕಾದಿರಿಸಿಕೊಂಡು ತಂಡದಲ್ಲಿ ಖಾಯಂ ಸ್ಥಾನ ಗಳಿಸುವ ಆಟಗಾರರಿಗೆ ಮಣೆ ಹಾಕಬೇಕಿದೆ.

ಬಿಸಿಸಿಐ ಹಾಗೂ ಶಿವಸುಂದರ್‌ ದಾಸ್‌ ನೇತೃತ್ವದ ಆಯ್ಕೆ ಸಮಿತಿಯ ಕೆಲವು ಮೂಲಗಳ ಪ್ರಕಾರ ಸೀನಿಯರ್‌ಗಳಾದ ಚೇತೇಶ್ವರ್‌ ಪೂಜಾರ ಮತ್ತು ಉಮೇಶ್‌ ಯಾದವ್‌ ಸ್ಥಾನಕ್ಕೆ ಸಂಚಕಾರವಿದೆ. ಯಶಸ್ವಿ ಜೈಸ್ವಾಲ್‌ ಮತ್ತು ಮುಕೇಶ್‌ ಕುಮಾರ್‌ ಇವರ ಸ್ಥಾನ ತುಂಬಬಹುದು. ಜೈಸ್ವಾಲ್‌ ಕೇವಲ ಐಪಿಎಲ್‌ನಲ್ಲಿ ಮಾತ್ರವಲ್ಲ, ರಣಜಿ, ಇರಾನಿ ಮತ್ತು ದುಲೀಪ್‌ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ್ದನ್ನು ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ದೇವಾಂಗ್‌ ಗಾಂಧಿ ಉಲ್ಲೇಖೀಸಿದ್ದಾರೆ.

Advertisement

ಇನ್ನುಳಿದಂತೆ ಕೆ.ಎಲ್‌. ರಾಹುಲ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಜಸ್‌ಪ್ರೀತ್‌ ಬುಮ್ರಾ ಅವರ ಪುನರಾಗಮನಕ್ಕೆ ಇನ್ನೂ ಡೇಟ್‌ ಫಿಕ್ಸ್‌ ಆಗಿಲ್ಲ. ಇಷ್ಟೂ ಮಂದಿ ಭಾರತದ ಟೆಸ್ಟ್‌ ತಂಡಕ್ಕೆ ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಭಾರತದಲ್ಲೇ ನಡೆಯುವ ವಿಶ್ವಕಪ್‌ ಹಿನ್ನೆಲೆಯಲ್ಲಿ ಏಕದಿನ ತಂಡದ ಆಯ್ಕೆಯೂ ಜಟಿಲವಾಗಲಿದೆ. ಟಿ20 ತಂಡದ ಆಯ್ಕೆಯೊಂದೇ ಸದ್ಯದ ಮಟ್ಟಿಗೆ ಸುಲಭ. ಕಾರಣ, ಐಪಿಎಲ್‌ ಪ್ರಭಾವ. ಹಾರ್ದಿಕ್‌ ಪಾಂಡ್ಯ ನಾಯಕತ್ವದ ತಂಡಕ್ಕೆ ಸೇರಿಕೊಳ್ಳಲು ರಿಂಕು ಸಿಂಗ್‌, ಜಿತೇಶ್‌ ಶರ್ಮ, ಮೋಹಿತ್‌ ಶರ್ಮ ಮೊದಲಾದವರು ಕಾದು ನಿಂತಿದ್ದಾರೆ. ರೋಹಿತ್‌, ಕೊಹ್ಲಿ, ಶಮಿ, ಸಿರಾಜ್‌ ಮೊದಲಾದವರಿಗೆ ವಿಶ್ರಾಂತಿ ನೀಡುವುದು ಒಳ್ಳೆಯದು. ಎಲ್ಲ ಕ್ರಿಕೆಟಿಗರು ಮೂರೂ ಮಾದರಿಗಳಲ್ಲಿ ಆಡಬೇಕೆಂದಿಲ್ಲವಲ್ಲ!

Advertisement

Udayavani is now on Telegram. Click here to join our channel and stay updated with the latest news.

Next