Advertisement
ಗುರುವಾರವೂ ಮಧ್ಯಾಹ್ನ 2 ಗಂಟೆಯವರೆಗೂ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಲಾಗಿತ್ತು. ಇದುವರೆಗೂ 28 ಸಾವಿರಕ್ಕೂ ಹೆಚ್ಚು ಟನ್ ಕಬ್ಬು ಅರೆಯಲಾಗಿದೆ. ಆದರೆ, ನಿಗದಿತ ಪ್ರಮಾಣದಲ್ಲಿ ಸಕ್ಕರೆ ಉತ್ಪಾದನೆಯಾಗಿಲ್ಲ ಎನ್ನಲಾಗುತ್ತಿದೆ. ಮೈಷುಗರ್ ಕಾರ್ಖಾನೆಯದ್ದೇ ಎನ್ನಲಾದ ಅರೆದ ಕಬ್ಬಿನ ರಸವನ್ನು ಸಂಗ್ರಹ ಮಾಡಿಟ್ಟುಕೊಳ್ಳಲಾಗದೆ, ಚರಂಡಿ ಮೂಲಕ ಹೆಬ್ಟಾಳ ನಾಲೆಗೆ ಹರಿಸಲಾಗಿದೆ ಎಂಬ ವಿಡಿಯೋ ವೈರಲ್ ಆಗಿದೆ. ಅರೆದ ಕಬ್ಬಿನ ಹಾಲನ್ನು 24 ಗಂಟೆಯೊಳಗೆ ಹೀಟ್ ಮಾಡಿ ಸಕ್ಕರೆ ಉತ್ಪಾದನೆಗೆ ಬಳಸಬೇಕಾಗಿದೆ. ಆದರೆ, ಯಾವ ಕಾರಣಕ್ಕೆ ನಾಲೆಗೆ ಹರಿಯಲು ಬಿಟ್ಟಿದ್ದಾರೋ ಗೊತ್ತಿಲ್ಲ.
Related Articles
Advertisement
ಒಣಗುತ್ತಿದೆ ಸಾವಿರಾರು ಟನ್ ಕಬ್ಬು: ಕಾರ್ಖಾನೆಗೆ ಕಬ್ಬು ತಂದರೂ ನಿಗದಿತವಾಗಿ ತೂಕ ಮಾಡಿ ತೆಗೆದುಕೊಳ್ಳದೆ ವಿಳಂಬ ಮಾಡಲಾಗುತ್ತಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಪದೇ ಪದೆ ಕಬ್ಬು ನುರಿಯುವ ಕಾರ್ಯ ನಿಲ್ಲುತ್ತಿರುವುದರಿಂದ ಕಬ್ಬು ಬಂದರೂ ಸಮಸ್ಯೆಯಾಗುತ್ತಿದೆ. ನಿರಂತರವಾಗಿ ಕಾರ್ಖಾನೆ ಕಬ್ಬು ನುರಿಸದ ಪರಿಣಾಮ ಗದ್ದೆಗಳಲ್ಲಿ ಕಟಾವಾಗಿರುವ ಸಾವಿರಾರು ಟನ್ ಕಬ್ಬು ಒಣಗುತ್ತಿದೆ. ಫ್ಯಾಕ್ಟರಿ ಬಳಿ ಒಂದು ಲೋಡ್ ನಿಂತಿದ್ದರೆ, ಗದ್ದೆಯಲ್ಲಿ ಮೂರ್ನಾಲ್ಕು ಲೋಡ್ ಒಣಗುವ ದುಸ್ಥಿತಿ ಎದುರಾಗಿದೆ. ಇದರಿಂದ ಪ್ರತೀ 10 ಟನ್‌ಗೆ ಅರ್ಧದಿಂದ ಒಂದು ಟನ್ ಇಳುವರಿ ಕುಸಿತವಾಗಲಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಚಾಲಕರಿಗೆ ನರಕಯಾತನೆ: ರೈತರಿಗೆ ಕಬ್ಬಿನ ಇಳುವರಿ, ನಷ್ಟದ ಸಮಸ್ಯೆಯಾದರೆ ಕಬ್ಬು ಸರಬರಾಜು ಮಾಡುವ ಚಾಲಕರಿಗೆ ನರಕಯಾತನೆಯಾಗಿದೆ. ಮೂರ್ನಾಲ್ಕು ದಿನ ಲಾರಿ, ಟ್ರ್ಯಾಕ್ಟರ್ ಹಾಗೂ ಎತ್ತಿನಗಾಡಿಯಲ್ಲೇ ಕಾಲಕಳೆಯಬೇಕಾದ ದುಸ್ಥಿತಿ ಎದುರಾಗಿದೆ. ಶೌಚಾಲಯದ ವ್ಯವಸ್ಥೆಯೂ ಇಲ್ಲದೆ ಪರದಾಡುವಂತಾಗಿದೆ. ಒಂದೇ ದಿನಕ್ಕೆ ಕಬ್ಬು ತೆಗೆದುಕೊಂಡರೆ ತೊಂದರೆ ಆಗುವುದಿಲ್ಲ. ಸರಿಯಾಗಿ ಕಬ್ಬು ನುರಿಸದಿರುವುದರಿಂದ ತುಂಬಾ ತೊಂದರೆ ಆಗುತ್ತಿದೆ. ಬೇರೆ ಕಾರ್ಖಾನೆಗಳಲ್ಲಿ ಈ ರೀತಿ ಸಮಸ್ಯೆ ಆಗುವುದಿಲ್ಲ ಎಂದು ಚಾಲಕರು ಹೇಳುತ್ತಾರೆ.
ಮೌನ ವಹಿಸಿದ ಜನಪ್ರತಿನಿಧಿಗಳು: ಕಾರ್ಖಾನೆಯು ಪದೇ ಪದೆ ಕಬ್ಬು ಅರೆಯುವಿಕೆ ಸ್ಥಗಿತಗೊಳಿಸುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಪ್ರಧಾನ ವ್ಯವಸ್ಥಾಪಕರಾಗಿರುವ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಕಾರ್ಖಾನೆಗೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಕೆಲಸ ಮಾಡುತ್ತಿದ್ದರೂ ಪದೇ ಪದೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ, ಇದುವರೆಗೂ ಯಾವುದೇ ಜನಪ್ರತಿನಿಧಿಗಳು ಭೇಟಿ ನೀಡಿ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ. ಕಬ್ಬು ಅರೆಯುವಿಕೆಗೆ ಚಾಲನೆ ಕೊಟ್ಟು ಹೋದ ನಂತರ ಕಾರ್ಖಾನೆಯತ್ತ ತಿರುಗಿಯೂ ನೋಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.