Advertisement

ಸಿಂಧಿಯಾ ಬಳಿಕ ಇದೀಗ ತರೂರ್, ಮಿಲಿಂದ್ ಸರದಿ? – ಆ ಟ್ವೀಟ್ ನ ಮರ್ಮವೇನು?

09:48 AM Mar 12, 2020 | Hari Prasad |

ತಿರುವನಂತಪುರಂ: ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಘಾತಗಳ ಮೇಲೆ ಆಘಾತಗಳು ಬಂದೆರಗುತ್ತಿವೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಕಮಲನಾಥ್ ಸರಕಾರದ 20 ಜನ ಶಾಸಕರೂ ಸಹ ರಾಜೀನಾಮೆ ನೀಡಲು ಸಜ್ಜಾಗಿರುವುದು ಆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಪತನದಂಚಿಗೆ ತಂದು ನಿಲ್ಲಿಸಿದೆ.

Advertisement

ಇದೀಗ ಜ್ಯೋತಿರಾದಿತ್ಯ ಬೆನ್ನಲ್ಲೇ ಇನ್ನಷ್ಟು ನಾಯಕರು ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆ ಎಂಬ ಗುಮಾನಿ ರಾಷ್ಟ್ರ ರಾಜಕಾರಣದ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಇದರಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಹೆಸರು ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಕೇರಳದ ತಿರುವನಂತಪುರದ ಸಂಸದ ಶಶಿ ತರೂರ್ ಮತ್ತು ಮುಂಬೈ ಕಾಂಗ್ರೆಸ್ ನಾಯಕ ಮಿಲಿಂದ್ ದೇವ್ರಾ ಅವರದ್ದು.

ಅದರಲ್ಲೂ ಮಾರ್ಚ್ 10ರಂದು ‘ಡ್ರಂಕ್ ಜರ್ನಲಿಸ್ಟ್’ ಎಂಬ ಹೆಸರಿನ ಟ್ವಿಟ್ಟರ್ ಖಾತೆಯಿಂದ ಮಾಡಲ್ಪಟ್ಟಿದ್ದ ಟ್ವೀಟ್ ಒಂದು ಇದೀಗ ಚರ್ಚೆಯ ವಸ್ತುವಾಗಿದೆ. ಈ ಟ್ವೀಟ್ ನಲ್ಲಿ ‘ಮುಂಬರುವ ದಿನಗಳಲ್ಲಿ ಈ ಇಬ್ಬರು ಕಾಂಗ್ರೆಸ್ ನಾಯಕರು ಖಂಡಿತವಾಗಿಯೂ ಬಿಜೆಪಿ ಸೇರಲಿದ್ದಾರೆ’ ಎಂದು ಬರೆದು ಅದರಲ್ಲಿ ಶಶಿ ತರೂರ್ ಹಾಗೂ ಮಿಲಿಂದ್ ದೇವ್ರಾ ಅವರ ಹೆಸರನ್ನು ಬರೆಯಲಾಗಿತ್ತು.


ಈ ಟ್ವೀಟ್ ನೆಟ್ಟಿಜನ್ ಲೋಕದಲ್ಲಿ ಬಹಳಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಮತ್ತು ಈ ಟ್ವೀಟ್ ಗೆ ಸ್ವತಃ ಸಂಸದ ಶಸಿ ತರೂರ್ ಅವರು ಪ್ರತಿಕ್ರಿಯಿಸಿದ್ದು ವಿಶೇಷವಾಗಿತ್ತು. ‘ನಿಮಗೆ ಅಮಲೇರಿರುವುದೇ ನಿಜವಾಗಿದ್ದರೆ ನಿಮ್ಮ ಪಟ್ಟಿಯಲ್ಲಿ ನನ್ನ ಹೆಸರಿರುತ್ತಿರಲಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

ಇದಾದ ಬಳಿಕ ತಾವು ಬಿಜೆಪಿ ಸೇರುವ ಗುಮಾನಿಗಳ ಕುರಿತು ಸುದ್ದಿಯನ್ನು ಪ್ರಕಟಿಸಿದ್ದ ಮಲಯಾಳಂ ವೆಬ್ ಸೈಟ್ ಸುದ್ದಿಗೂ ತರೂರ್ ಪ್ರತಿಕ್ರಿಯಿಸಿ, ‘ನಾನು ಹೊಟ್ಟೆಪಾಡನ್ನು ಅರಸಿ ರಾಜಕೀಯಕ್ಕೆ ಬಂದವನಲ್ಲ, ಬದಲಾಗಿ ಬಲವಾದ ತತ್ವಾದರ್ಶಗಳನ್ನು ನಂಬಿ ಈ ಕ್ಷೇತ್ರದಲ್ಲಿ ಕಳೆದ ನಲವತ್ತು ವರ್ಷಗಳಿಂದ ಇದ್ದೇನೆ’ ಎಂದು ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಗಾಂಧಿ ಕುಟುಂಬಕ್ಕೆ ಹೊರತಾದ ನಾಯಕರೊಬ್ಬರು ಕಾಂಗ್ರೆಸ್ ಚುಕ್ಕಾಣಿಯನ್ನು ಹಿಡಿಯಬೇಕು ಎಂದು ಶಶಿ ತರೂರ್ ಅವರು ಈ ಹಿಂದೆ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next