Advertisement

ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ ಪ್ರಶ್ನೆ

06:02 PM Oct 19, 2021 | Team Udayavani |

ಬೆಂಗಳೂರು: ದೇಶದಲ್ಲಿ ಕೇಸರಿ ಬಣ್ಣವನ್ನು ನಿಷೇಧ ಮಾಡಲಾಗಿದೆಯೇ? ರಾಷ್ಟ್ರಧ್ವಜದಲ್ಲಿ ಕೇಸರಿ ಬಣ್ಣವಿಲ್ಲವೇ? ನಾಳೆ  ಕೇಸರಿಯನ್ನು ತೆಗೆದುಹಾಕಬೇಕು ಎಂದು ಯಾರಾದರೂ ಹೇಳಿದರೆ ಹಾಗೆ  ಮಾಡಲಾಗುತ್ತದೆಯೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸುವ ಮೂಲಕ ಪೊಲೀಸರು ಆಯುಧಪೂಜೆ ಸಂದರ್ಭದಲ್ಲಿ ಕೇಸರಿ ಉಡುಪು ಧರಿಸಿದ್ದನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ತವ್ಯದಲ್ಲಿರುವಾಗ  ಸಮವಸ್ತ್ರ ತೊಡುತ್ತಾರೆ.  ಆದರೆ ಪೂಜೆ ಸಂದರ್ಭದಲ್ಲಿ  ಸಮವಸ್ತ್ರದಲ್ಲೇ ಇರಬೇಕೆಂದಿಲ್ಲ. ಠಾಣೆಯಲ್ಲೂ  ಎಲ್ಲ ಪೊಲೀಸರು ಸಮವಸ್ತ್ರದಲ್ಲಿ ಇರುವುದಿಲ್ಲ ಎಂದರು.

ಕೇಸರಿ ಶಾಲು ಸಾಂಪ್ರದಾಯಿಕ ಉಡುಗೆಯಾಗಿದೆ. ಪೊಲೀಸರ ಖಾಸಗಿತನವನ್ನೂ ಗೌರವಿಸಬೇಕು. ಪೂಜೆ, ಪುನಸ್ಕಾರ ಹಾಗೂ ಮನೆಗಳಲ್ಲಿ ಇಂಥದ್ದೇ ಬಟ್ಟೆಗಳನ್ನು ತೊಡಬೇಕೆಂದು ಹೇಳಲು ಸಾಧ್ಯವಿಲ್ಲ. ಕೇಸರಿ ಶಾಲು ಹಾಕಿದ ಕೂಡಲೇ ಏನಾಗುತ್ತದೆ? ಕೇಸರಿ ಶಾಲು ಬಿಜೆಪಿಗೆ ಸೀಮಿತವಾಗಿಲ್ಲ ಎಂದು ಹೇಳಿದರು.

ನಮಾಜನ್ನೂ ಗೌರವಿಸುತ್ತೇವೆ
ಇಲಾಖೆಯಲ್ಲಿರುವ ಮುಸ್ಲಿಂ ಸಿಬಂದಿ  ಮಧ್ಯಾಹ್ನ ನಮಾಜ್‌ಗೆ ಹೋಗುವುದನ್ನು  ನಾವು ಗೌರವಿಸುವುದಿಲ್ಲವೇ? ಪಶ್ಚಿಮ ಬಂಗಾಲದ ವಿಧಾನಸೌಧದ ಸಮೀಪದ ಹಾಲ್‌ನಲ್ಲಿ ನಮಾಜ್‌ ಮಾಡಲು ಮಸೀದಿ ಕಟ್ಟಿಸಲಾಗಿದೆ. ಇದನ್ನು ಯಾರೂ ಪ್ರಶ್ನಿಸಲಿಲ್ಲ. ಯಾವುದೋ ಒಂದು ಸಮುದಾಯವನ್ನು ಓಲೈಸುವುದಕ್ಕಾಗಿ ನಮ್ಮ ಪರಂಪರೆ ಮತ್ತು ಸಂಪ್ರದಾಯವನ್ನು ಹೀಗಳೆಯುವ ಕೆಲಸವನ್ನು ವಿಪಕ್ಷಗಳು ಮಾಡುತ್ತಿವೆ. ಇದೇ ರೀತಿ ಮುಂದುವರಿದರೆ ನೀವು ದೊಡ್ಡ ಸಮುದಾಯದ ಜನರನ್ನು ಕಳೆದುಕೊಳ್ಳಲಿದ್ದೀರಿ ಎಂದರು.

ಇದನ್ನೂ ಓದಿ:ಉತ್ತರಾಖಂಡ ವರುಣಾರ್ಭಟ: ಸಾವಿನ ಸಂಖ್ಯೆ 16ಕ್ಕೆ ಏರಿಕೆ

Advertisement

ಚುನಾವಣೆಗಾಗಿ ತ್ರಿಶೂಲ ವೈಭವೀಕರಣ
ತ್ರಿಶೂಲ ವಿತರಿಸುವುದು ಪ್ರತಿ ವರ್ಷ ವಿಶ್ವ ಹಿಂದೂ ಪರಿಷತ್ತಿನಲ್ಲಿ  ನಡೆದುಕೊಂಡು ಬಂದಿರುವ ಪರಂಪರೆಯಾಗಿದೆ. ಈ ವರ್ಷ ಚುನಾವಣೆಗಾಗಿ ಅದನ್ನು ವೈಭವೀಕರಿಸಲಾಗುತ್ತಿದೆ. ಹಿಂದಿನ ಕಾಲದಲ್ಲಿ ತ್ರಿಶೂಲ ಆಯುಧವಾಗಿತ್ತು. ಈಗ ಅದನ್ನು ಹಿಡ್ಕೊಂಡು ಚುಚ್ಚಲು ಆಗುತ್ತದೆಯೇ? ಅದರಲ್ಲಿ ಯುದ್ಧ ಮಾಡಲಾದೀತೇ ಎಂದು ವ್ಯಂಗ್ಯವಾಡಿದರು.

ನಾಳೆ ಕೇಸರಿ ಬಾತ್‌ಗೆ ಹಸಿರು ಬಣ್ಣ ಹಾಕಬೇಕು ಎನ್ನಲಾದೀತೇ? ಪೊಲೀಸರು ಕೇಸರಿ ಶಾಲಿನ ಜತೆಗೆ ಬಿಳಿ ಟೋಪಿ, ಕುರ್ತಾ ಪೈಜಾಮ ಧರಿಸಿದ್ದರು. ಅದರಲ್ಲಿ ಆಕ್ಷೇಪಿಸುವುದೇನಿದೆ? ಪೊಲೀಸರ ಖಾಸಗಿ ಜೀವನವನ್ನು ಗೌರವಿಸಬೇಕು. ಚುನಾವಣೆ ಹಿನ್ನೆಲೆಯಲ್ಲಿ ಇಂಥದ್ದನ್ನೆಲ್ಲ ವಿವಾದ ಮಾಡುವುದು ಸರಿಯಲ್ಲ.
– ಆರಗ ಜ್ಞಾನೇಂದ್ರ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next