Advertisement

ಪಾಶ್ಚಾತ್ಯ ದೇಶಗಳ ದಿಗ್ಬಂಧನಕ್ಕೆ ಹೆದರೀತೇ ರಷ್ಯಾ?

11:35 PM Feb 23, 2022 | Team Udayavani |

ರಷ್ಯಾ ಮತ್ತು ಉಕ್ರೇನ್‌ ನಡುವೆ ಇನ್ನೇನು ಯುದ್ಧ ಆರಂಭವಾಗಿಯೇ ಬಿಡುತ್ತದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಉಕ್ರೇನ್‌ಗೆ ಸೇರಿದ ಎರಡು ಪ್ರದೇಶಗಳು ಸ್ವತಂತ್ರ ಎಂದು ರಷ್ಯಾ ಘೋಷಿಸಿದ್ದು, ಇದು ಪಾಶ್ಚಾತ್ಯ ದೇಶಗಳಿಗೆ ಸಿಟ್ಟು ತರಿಸಿದೆ. ಹೀಗಾಗಿ ಅಮೆರಿಕ, ಬ್ರಿಟನ್‌, ಜಪಾನ್‌ ಸೇರಿದಂತೆ ಹಲವಾರು ದೇಶಗಳು ರಷ್ಯಾ ಮೇಲೆ ದಿಗ್ಬಂಧನ ಹೇರಿವೆ. ಈ ದಿಗ್ಬಂಧನಕ್ಕೆ ರಷ್ಯಾ ಹೆದರೀತೇ? ಈಗ ದಿಗ್ಬಂಧನಗಳು ಪ್ರಸ್ತುತವೇ? ಈ ಕುರಿತು ಒಂದು ಸಮಗ್ರ ನೋಟ ಇಲ್ಲಿದೆ…

Advertisement

2014ರಲ್ಲೂ ಹೀಗೇ ಆಗಿತ್ತು…
ಈಗಷ್ಟೇ ಅಲ್ಲ, 2014ರಲ್ಲೂ ರಷ್ಯಾ ಮೇಲೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳು ದಿಗ್ಬಂಧನ ಹೇರಿದ್ದವು. ಆಗ ಡಾನ್‌ಬಾಸ್‌ ಪ್ರದೇಶವೆಂದೇ ಕರೆಸಿಕೊಳ್ಳುವ ದೊನೆಸ್ಕ್ ಮತ್ತುಲುಹಾನ್ಸ್ಕ್ ನಲ್ಲಿ ಪ್ರತ್ಯೇಕತಾವಾದಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಟ ಶುರು ಮಾಡಿದ್ದರು. ಆಗ ರಷ್ಯಾ ಇವರಿಗೆ ಬೆಂಬಲ ನೀಡಿತ್ತು. ಇದಕ್ಕಾಗಿಯೇ ಉಕ್ರೇನ್‌ ಪರವಾಗಿ ನಿಂತ ಪಾಶ್ಚಾತ್ಯ ದೇಶಗಳು ರಷ್ಯಾ ಮೇಲೆ ದಿಗ್ಬಂಧನ ಹಾಕಿ, ರಷ್ಯಾವನ್ನು ನಿಯಂತ್ರಿಸುವ ಕೆಲಸ ಮಾಡಿದ್ದವು. ಆಗ ರಷ್ಯಾ ಆರ್ಥಿಕವಾಗಿ ಕಷ್ಟದಲ್ಲಿದ್ದರೂ ಈ ದಿಗ್ಬಂಧನಗಳಿಗೆ ಹೆದರಿರಲಿಲ್ಲ. ಆದರೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಉಕ್ರೇನ್‌ ಜತೆಗೆ ಕದನ ವಿರಾಮಕ್ಕೆ ಒಪ್ಪಿಗೆ ನೀಡಿತ್ತು. ಆಗ ಫ್ರಾನ್ಸ್‌ ಮತ್ತು ಜರ್ಮನಿ ದೇಶಗಳು ಕದನ ವಿರಾಮದ ಮಧ್ಯಸ್ಥಿಕೆ ವಹಿಸಿದ್ದವು.

ಈಗಿನ ಸ್ಥಿತಿ ಏನು?
ಈಗ ರಷ್ಯಾ ತುಂಬ ದೂರ ಹೋಗಿಯಾಗಿದೆ. ಕಳೆದ ಅಕ್ಟೋಬರ್‌ನಿಂದಲೂ ರಷ್ಯಾ ಉಕ್ರೇನ್‌ ಗಡಿಯಲ್ಲಿ ಸೇನೆ ಸನ್ನದ್ಧವಾಗಿರಿಸಿಕೊಂಡು ಕಾಯುತ್ತಿದೆ. ಅಲ್ಲದೆ ಈಗ ರಷ್ಯಾಗೆ ಶಸ್ತ್ರಾಸ್ತ್ರ ಖರೀದಿ ಮಾಡಬೇಕು, ಇದಕ್ಕೆ ಹಣ ಕೊಡಿ ಎಂದು ಯಾರನ್ನೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಅಲ್ಲದೆ 635 ಬಿಲಿಯನ್‌ ಡಾಲರ್‌ ಚಿನ್ನ ಮತ್ತು ಫಾರೆಕ್ಸ್‌ ರಿಸರ್ವ್‌ ಇದೆ. ಹೀಗಾಗಿ ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುವುದರಿಂದ ಯಾವುದೇ ದೇಶ ನಮ್ಮ ಮೇಲೆ ದಿಗ್ಬಂಧನ ಹೇರಿದರೂ ನಾವು ತಡೆದುಕೊಳ್ಳುತ್ತೇವೆ ಎಂದು ರಷ್ಯಾದ ಹಣಕಾಸು ಸಚಿವರೇ ಹೇಳಿದ್ದಾರೆ. ಇದಷ್ಟೇ ಅಲ್ಲ ಅಮೆರಿಕದ ಜತೆಗೆ ರಷ್ಯಾದ ಬಾಂಧವ್ಯ ಅಷ್ಟಕ್ಕಷ್ಟೇ. ಒಂದು ವೇಳೆ ಯಾವುದೇ ರೀತಿಯ ದಿಗ್ಬಂಧನ ಹಾಕಿದರೂ ನಮ್ಮ ಮೇಲೆ ಪರಿಣಾಮ ಬೀರದು ಎಂದೂ ತಿಳಿಸಿದ್ದಾರೆ.

ಚಿಪ್‌ ಗಳ ಮೇಲೆ ನಿರ್ಬಂಧ
ರಷ್ಯಾ ಮೇಲೆ ಎಲೆಕ್ಟ್ರಾನಿಕ್‌ ನಿರ್ಬಂಧ ಹೇರುವ ಸಾಧ್ಯತೆಯೂ ಇದೆ. ಈಗಾಗಲೇ ಅಮೆರಿಕದ ವೈಟ್‌ಹೌಸ್‌, ಯುಎಸ್‌ ಚಿಪ್‌ ಇಂಡಸ್ಟ್ರಿಗೆ ಒಂದು ಸೂಚನೆಯನ್ನು ನೀಡಿದೆ. ಒಂದು ವೇಳೆ ರಷ್ಯಾ ಉಕ್ರೇನ್‌ ಮೇಲೆ ದಾಳಿ ನಡೆಸಿದರೆ ಆ ದೇಶಕ್ಕೆ ಯಾವುದೇ ರೀತಿಯ ಎಲೆಕ್ಟ್ರಾನಿಕ್‌ ಚಿಪ್‌ಗಳು ರಫ್ತಾಗಬಾರದು. ಇದನ್ನು ಜಾಗತಿಕವಾಗಿ ನಿಲ್ಲಿಸಿ ಎಂದು ಆದೇಶಿಸಿದೆ. ಒಂದು ವೇಳೆ ಈ ಕ್ರಮ ತೆಗೆದುಕೊಂಡರೆ ರಷ್ಯಾಕ್ಕೆ ಸಮಸ್ಯೆಯಾಗುತ್ತದೆ.

ಪೈಪ್‌ಲೈನ್‌ ರಾಜಕೀಯ
ಐರೋಪ್ಯ ಒಕ್ಕೂಟದ ಪ್ರಮುಖ ದೇಶವಾಗಿರುವ ಜರ್ಮನಿ, ರಷ್ಯಾ ಜತೆಗಿನ 11ಬಿಲಿಯನ್‌ ಡಾಲರ್‌ ಮೌಲ್ಯದ ನಾರ್ಡ್‌ ಸ್ಟ್ರೀಮ್‌ -2 ಪೈಪ್‌ಲೈನ್‌ ಯೋಜನೆಯನ್ನು ಸ್ಥಗಿತ ಮಾಡಿದೆ. ಈಗಿನ ಪರಿಸ್ಥಿತಿ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜರ್ಮನಿ ತಿಳಿಸಿದೆ. ಆದರೆ ಇಲ್ಲೊಂದು ತಿರುವು ಇದೆ. ಜರ್ಮನಿಯ ಈ ನಿರ್ಧಾರ ತಾತ್ಕಾಲಿಕವಾಗಬಹುದು. ಏಕೆಂದರೆ ಇದುವರೆಗೆ ತನಗೆ ಬೇಕಿರುವ ನೈಸರ್ಗಿಕ ಅನಿಲದ ಶೇ. 50ರಷ್ಟನ್ನು ಜರ್ಮನಿ ರಷ್ಯಾದಿಂದಲೇ ತರಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ, ಆಸ್ಟ್ರಿಯಾ, ಇಟಲಿ ಮತ್ತು ಇತರ ಐರೋಪ್ಯ ದೇಶಗಳಿಗೂ ರಷ್ಯಾ ಅನಿಲವನ್ನು ಸರಬರಾಜು ಮಾಡುತ್ತಿದೆ. ಹೀಗಾಗಿ ಈ ಮಾರ್ಗವೂ ಕಷ್ಟ ಎಂದೇ ಹೇಳಲಾಗುತ್ತಿದೆ.

Advertisement

ಸ್ವಿಫ್ಟ್ ಬ್ಯಾನ್‌
ಕೆಲವು ವರದಿಗಳ ಪ್ರಕಾರ ರಷ್ಯಾ ಮೇಲೆ ಅಮೆರಿಕ ಮತ್ತು ಐರೋಪ್ಯ ದೇಶಗಳು ಸ್ವಿಫ್ಟ್ ಹಣಕಾಸು ವ್ಯವಸ್ಥೆಯಿಂದ ಹೊರಹಾಕಬಹುದು. ಸ್ವಿಫ್ಟ್ ಎಂದರೆ ಸೊಸೈಟಿ ಫಾರ್‌ ವರ್ಡ್‌ವೈಡ್‌ ಇಂಟರ್‌ಬ್ಯಾಂಕ್‌ ಫೈನಾನ್ಶಿಯಲ್‌ ಟೆಲಿಕಮ್ಯೂನಿಕೇಶನ್‌. ಇದು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ನಾಗರಿಕರು ಹಣ ಕಳುಹಿಸುವ ಮತ್ತು ತರಿಸಿಕೊಳ್ಳಲು ಇರುವ ವ್ಯವಸ್ಥೆ. ಇದರಿಂದಲೇ ವಹಿವಾಟು ಆಗುವುದಿಲ್ಲ, ಇದಕ್ಕೆ ಬದಲಾಗಿ ಇದು ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ವೇಳೆ ರಷ್ಯಾವನ್ನುಸ್ವಿಫ್ಟ್ ನಿಂದ ಬ್ಯಾನ್‌ ಮಾಡಿದಲ್ಲಿ ರಷ್ಯಾದ ಜನತೆ ಹೊರಗಿನ ಯಾವುದೇ ದೇಶಕ್ಕೂ ಹಣ ಕಳುಹಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಹೊರಗಡೆಯಿಂದ ರಷ್ಯಾಕ್ಕೆ ಹಣ ಬರಲೂ ಸಾಧ್ಯವಿಲ್ಲ. ಆದರೆ ಈ ನಿರ್ಧಾರಕ್ಕೆ ಬರಬೇಕು ಎಂದಾದರೆ ಅಮೆರಿಕಕ್ಕೆ ಎಲ್ಲ ಐರೋಪ್ಯ ದೇಶಗಳ ಒಪ್ಪಿಗೆ ಬೇಕು. ಹಾಗೆಯೇ ಬ್ರುಸೆಲ್ಸ್‌ನ ಒಪ್ಪಿಗೆಯೂ ಬೇಕಾಗುತ್ತದೆ. ಇದು ಮೊದಲಿನಿಂದಲೂ ನ್ಯೂಟ್ರಲ್‌ ಆಗಿ ಕೆಲಸ ಮಾಡುವುದರಿಂದ ಇದಕ್ಕೆ ಒಪ್ಪಿಕೊಳ್ಳುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಲಾಗುತ್ತಿದೆ. ಇದಕ್ಕೂ ಮಿಗಿಲಾಗಿ ರಷ್ಯಾ ವಿದೇಶಿ ಹಣಕಾಸು ವಿನಿಮಯಕ್ಕಾಗಿ ತನ್ನದೇ ಆದ ಒಂದು ವೇದಿಕೆಯನ್ನೂ ಸೃಷ್ಟಿಮಾಡಿಕೊಂಡಿದೆ. 7 ವರ್ಷಗಳಿಂದ ಈ ವ್ಯವಸ್ಥೆಯೂ ಜಾರಿಯಲ್ಲಿದೆ. ಹೀಗಾಗಿ ಸ್ವಿಫ್ಟ್ ನಿಂದ ಹೊರಹಾಕಿದರೂ ರಷ್ಯಾಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂಬ ಮಾತುಗಳಿವೆ.

ಬ್ಯಾಂಕ್‌ಗಳ ಮೇಲೆ ನಿರ್ಬಂಧ?
ಅಮೆರಿಕ 2014ರಲ್ಲಿ ಬ್ಯಾಂಕ್‌ ರಷ್ಯಾ ಮೇಲೆ ದಿಗ್ಬಂಧನ ಹೇರಿಯಾಗಿದೆ. ಈಗ ಉಳಿದ ಸಣ್ಣಪುಟ್ಟ ಬ್ಯಾಂಕ್‌ಗಳು ಉಳಿದಿವೆ. ಆದರೆ ಇವುಗಳ ಮೇಲೆ ಅಮೆರಿಕ ನೇರವಾಗಿ ದಿಗ್ಬಂಧನ ಹೇರಲು ಸಾಧ್ಯವಿಲ್ಲ. ಹಾಗೆಯೇ ರಷ್ಯಾದ ಉದ್ಯಮಿಗಳು ಮತ್ತು ಕಂಪೆನಿಗಳನ್ನು ವಿಶೇಷವಾಗಿ ಗುರುತಿಸಲ್ಪಟ್ಟ ವ್ಯಕ್ತಿಗಳು(ಎಸ್‌ಡಿಎನ್‌) ಎಂಬ ಪಟ್ಟಿಗೆ ಹಾಕಿ ಅವರನ್ನು ನಿರ್ಬಂಧಿಸಬಹುದು. ಈ ಮೂಲಕ ಇವರ್ಯಾರೂ ಅಮೆರಿಕದ ಬ್ಯಾಂಕ್‌ಗಳೊಂದಿಗೆ ವ್ಯವಹಾರ ಮಾಡದಂತೆ ನೋಡಿಕೊಳ್ಳಬಹುದು. ವಿಟಿಬಿ ಬ್ಯಾಂಕ್‌, ಸ್ಬೆರ್‌ ಬ್ಯಾಂಕ್‌, ವಿಇಬಿ ಮತ್ತು ಗಾಜ್‌ಪ್ರಂ ಬ್ಯಾಂಕ್‌ ಮೇಲೆ ನಿರ್ಬಂಧ ಹಾಕಬಹುದು. ಆದರೆ ಈ ಬ್ಯಾಂಕ್‌ಗಳನ್ನು ಎಸ್‌ಡಿಎನ್‌ ಪಟ್ಟಿಗೆ ಸೇರಿಸಲು ಸಾಧ್ಯವಿದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಅಲ್ಲದೆ ಜಾಗತಿಕ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ರಷ್ಯಾದ ಪ್ರಭಾವ ತುಸು ಹೆಚ್ಚಾಗಿಯೇ ಇದೆ. ಹೀಗಾಗಿ ಇಂಥ ಕ್ರಮಗಳನ್ನು ತೆಗೆದುಕೊಳ್ಳಲು ಆಗುತ್ತದೆಯೇ ಎಂಬುದನ್ನು ನೋಡಬೇಕಾಗುತ್ತದೆ.

ಸಾವರಿನ್‌ ಬಾಂಡ್‌ ಖರೀದಿಗೆ ತಡೆ
ಇದು ಒಂದು ರೀತಿಯಲ್ಲಿ ಷೇರುಪೇಟೆಯ ಮೇಲೆ ಹಿಡಿತ ಸಾಧಿಸಿ ರಷ್ಯಾ ಮೇಲೆ ನಿರ್ಬಂಧ ಹೇರುವ ದಾರಿ. 2021ರ ಎಪ್ರಿಲ್‌ನಲ್ಲಿಯೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಅಮೆರಿಕದ ಹೂಡಿಕೆದಾರರಿಗೆ ರಷ್ಯಾದ ಯಾವುದೇ ಬಾಂಡ್‌ಗಳನ್ನು ಖರೀದಿ ಮಾಡದಂತೆ ಸೂಚನೆ ನೀಡಿದ್ದಾರೆ. ಅಂದರೆ ಅಮೆರಿಕದ ಚುನಾವಣೆಯಲ್ಲಿ ರಷ್ಯಾ ಮೂಗು ತೂರಿಸಿತ್ತು ಎಂಬ ಕಾರಣಕ್ಕಾಗಿ ರಷ್ಯಾದ ರಬಲ್‌ ಬಾಂಡ್‌ಗಳನ್ನು ಖರೀದಿಸಬಾರದು ಎಂದಿದ್ದರು. ಅಮೆರಿಕದ ಈ ನಿರ್ಧಾರ ಒಂದು ರೀತಿಯಲ್ಲಿ ರಷ್ಯಾಕ್ಕೆ ಉಪಯೋಗವಾದಂತೆ ಆಗಿತ್ತು. ಅಂದರೆ ರಷ್ಯಾ ಬಾಂಡ್‌ಗಳನ್ನು ಹೊರಗಿನವರು ಖರೀದಿಸದ ಹಿನ್ನೆಲೆಯಲ್ಲಿ ಆ ದೇಶದ ಸಾಲ ಶೇ.30ರಷ್ಟು ಕಡಿಮೆಯಾಗಿದೆ. ಇದರಿಂದಾಗಿ ದೇಶದ ಬ್ಯಾಲೆನ್ಸ್‌ ಶೀಟ್‌ ಕೂಡ ಉತ್ತಮವಾಗಿದೆ. ಆದರೆ ಇದರಿಂದ ರಷ್ಯಾಕ್ಕೆ ಹೆಚ್ಚಿನ ಅಪಾಯವೂ ಆಗಿದೆ. ಅಂದರೆ ಹೊರ ದೇಶಗಳಿಂದ ಸಾಲ ಬರದ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿಗೆ ಮತ್ತು ಆರ್ಥಿಕ ಚೇತರಿಕೆಗೆ ಹೊಡೆತ ಬಿದ್ದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತೈಲ ಬೆಲೆಯಲ್ಲಿ ಭಾರೀ ಏರಿಕೆ?
ಮೊದಲೇ ಹೇಳಿದಂತೆ ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಭಾವ್ಯ ಯುದ್ಧ ಮತ್ತು ಪಾಶ್ಚಾತ್ಯ ದೇಶಗಳಿಂದ ರಷ್ಯಾ ಮೇಲಿನ ನಿರ್ಬಂಧದಿಂದಾಗಿ ಭಾರತಕ್ಕೂ ನಷ್ಟವಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ 100 ಡಾಲರ್‌ ತಲುಪಿದೆ. ಈಗ ದೇಶದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ತೈಲ ಕಂಪೆನಿಗಳು, ಬೆಲೆ ಏರಿಕೆ ಮಾಡದೇ ಸುಮ್ಮನಿವೆ. ಒಮ್ಮೆ ಪಂಚರಾಜ್ಯಗಳ ಚುನಾವಣೆ ಮುಗಿದ ಮೇಲೆ ಬೆಲೆ ಏರಿಕೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಜತೆಗೆ ಉಕ್ರೇನ್‌ನಿಂದ ಭಾರತ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ನಿಲ್ಲುವ ಸಾಧ್ಯತೆ ಇದೆ. ಇನ್ನು ಅಂತಾರಾಷ್ಟ್ರೀಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯೂ ಹೆಚ್ಚುತ್ತಿದ್ದು, ಇದು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next