ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ಸಿನಿಮಾ ದೊಡ್ಡ ಹಿಟ್ ಆದದ್ದು ಗೊತ್ತೇ ಇದೆ. ಆ ಬಳಿಕ ರಜಿನಿಕಾಂತ್ ತನ್ನ ಮುಂದಿನ ಸಿನಿಮಾದಲ್ಲಿ ನಿರತರಾಗಿದ್ದಾರೆ.
ನೆಲ್ಸನ್ ದಿಲೀಪ್ ಕುಮಾರ್ ಅವರ ʼಜೈಲರ್ʼ ತಲೈವಾ ಫ್ಯಾನ್ಸ್ ಗಳಿಗೆ ಇಷ್ಟವಾಗಿತ್ತು. 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕಾಲಿವುಡ್ ನಲ್ಲಿ 2023 ರಲ್ಲಿ ದೊಡ್ಡ ಹಿಟ್ ಕೊಟ್ಟ ಸಿನಿಮಾಗಳ ಸಾಲಿಗೆ ಸೇರಿತ್ತು. ಈ ಸಿನಿಮಾದ ಬಳಿಕ ರಜಿನಿಕಾಂತ್ ಟಿಜೆ ಜ್ಞಾನವೇಲ್ ಅವರ
ʼ ವೆಟ್ಟೈಯನ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ನಟನೆ ಜೊತೆ ನಿರ್ದೇಶನದಲ್ಲೂ ಬ್ಯುಸಿಯಾದ ಧನುಷ್; ನಿರ್ದೇಶನದ 2 ಸಿನಿಮಾ ಇದೇ ವರ್ಷ ತೆರೆಗೆ
ಈ ಸಿನಿಮಾದ ಬಳಿಕ ರಜಿನಿಕಾಂತ್ ಲೋಕೇಶ್ ಕನಕರಾಜ್ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ. ಆ ನಂತರ ʼಜೈಲರ್ʼ ನಿರ್ದೇಶಕನ ಜೊತೆ ಮತ್ತೊಂದು ಸಿನಿಮಾವನ್ನು ರಜಿನಿಕಾಂತ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದೀಗ ಬಂದಿರುವ ಲೇಟೆಸ್ಟ್ ವರದಿಯ ಪ್ರಕಾರ ರಜಿನಿಕಾಂತ್ – ನೆಲ್ಸನ್ ಅವರ ʼತಲೈವರ್ 172ʼ ಸಿನಿಮಾ ʼಜೈಲರ್ -2ʼ ಆಗಿ ಬರಲಿದೆ ಎನ್ನಲಾಗುತ್ತಿದೆ. ದೊಡ್ಡಮಟ್ಟದಲ್ಲಿ ʼಜೈಲರ್-2ʼ ಸಿನಿಮಾ ತೆರೆಗೆ ತರುವ ಯೋಜನೆಯೊಂದನ್ನು ಹಾಕಿಕೊಂಡಿರುವ ಬಗ್ಗೆ ಕಾಲಿವುಡ್ ನಲ್ಲಿ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ನೆಲ್ಸನ್ ಅವರೊಂದಿಗಿನ ರಜಿನಿಕಾಂತ್ ಸಿನಿಮಾ ʼಜೈಲರ್ -2ʼ ಆಗಿರುತ್ತದೋ ಅಥವಾ ಹೊಸ ಕಥೆ ಇರುತ್ತದೋ ಎನ್ನುವುದನ್ನು ಕಾದುನೋಡಬೇಕಿದೆ.