Advertisement
ನಾನು ಮದುವೆಯಾಗಿ ಹೋಗಿದ್ದು ತುಂಬು ಕುಟುಂಬಕ್ಕೆ. ನಾನಾಗ 18 ವರ್ಷದ ಹುಡುಗಿ. ಮನೆ ತುಂಬಾ ಜನರಿದ್ದರು. ಆದರೆ ಪತಿ ಮಾತ್ರ ಮನೆಯಲ್ಲಿ ಇರುತ್ತಿರಲಿಲ್ಲ. ಹೋರಾಟ, ಚಳುವಳಿ ಎಂದು ಸಾದಾ ಹೊರಗಡೆಯೇ ಓಡಾಡುತ್ತಿದ್ದರು. ಮದುವೆಯಾದ ಮೊದಲ ವರ್ಷದಲ್ಲೇ ನಮ್ಮ ಮೊದಲ ಮಗ ಹುಟ್ಟಿದ. ನಂತರದ 3 ವರ್ಷಗಳ ಬಹುತೇಕ ದಿನಗಳನ್ನು ನಾನು ತವರಿನಲ್ಲೇ ಕಳೆದೆ. ನನ್ನ ಮಗನಿಗೆ ಅಪ್ಪ ಎಂದರೆ ಏನು ಎಂದು ತಿಳಿದೇ ಇರಲಿಲ್ಲ. ದೊರೆಸ್ವಾಮಿ ಮನೆಗೆ ಬಂದಾಗ ಆತ ಅವರನ್ನು ಮಾಮ ಎಂದು ಕರೆಯುತ್ತಿದ್ದ! ಇವರೇ ನನ್ನ ಅಪ್ಪ ಎಂದು ತಿಳಿಯುವ ವೇಳೆಗಾಗಲೇ ಅವನಿಗೆ 10 ವರ್ಷವಾಗಿತ್ತು. ಅಪ್ಪ ಎಂಬುವರು ಮನೆಯಲ್ಲಿದ್ದು, ಮಕ್ಕಳನ್ನು ಎತ್ತಿ ಆಡಿಸಿದರೆ ತಾನೆ ಮಕ್ಕಳಿಗೆ ಅಪ್ಪನ ಬಗ್ಗೆ ತಿಳಿಯೋದು? ತವರಲ್ಲಿ ಮೂರು ವರ್ಷಗಳು ಇದ್ದು ಬಳಿಕ ಬೆಂಗಳೂರಿನಲ್ಲಿ ನಾವು ಮನೆ ಮಾಡಿದೆವು. ಆಗಲೂ ಅವರು ಮನೆಯಲ್ಲಿರುತ್ತಿದ್ದದ್ದೇ ಅಪರೂಪ. ಅವರು ಮನೆಯಿಂದ ಹೊರಹೋಗುವಾಗ ಅವರ ಮುಖ ನೋಡುತ್ತಿದ್ದುದು ಬಿಟ್ಟರೆ, ಮರಳಿ ಬಂದಾಗಲೇ ಅವರ ಮುಖ ನೋಡುತ್ತಿದ್ದದ್ದು. ಮಧ್ಯದಲ್ಲಿ ಅವರನ್ನು ಕುರಿತು ಯಾವುದೇ ಮಾಹಿತಿಗಳು ನನಗೆ ಸಿಗುತ್ತಿರಲಿಲ್ಲ. ಮೊದಲಿಗೆ ಆತಂಕದಿಂದ ದಿನ ದೂಡುತ್ತಿದ್ದೆ. ಬಳಿಕ ಎಲ್ಲಾ ಅಭ್ಯಾಸವಾಯಿತು. ಇನ್ನೂ ಹೆಚ್ಚಾಗಿ, ಮನೆ ಮತ್ತು ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿತ್ತು. ಆ ಕಡೆ ಗಮನ ಹರಿಸುತ್ತಿದ್ದೆ. (ಈಗಲೂ ಅವರು ಪ್ರತಿಭಟನೆಗಳಿಗೆ ಹೋಗುತ್ತಾರೆ. ಮೊಬೈಲ್ ಬಳಸುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಅವರ ಆರೋಗ್ಯದ ಬಗ್ಗೆ ಆತಂಕವಾಗುತ್ತದೆ.)
Related Articles
Advertisement
ನಾವೂ ಜಗಳ ಆಡ್ತಿದ್ವಿ: ಜಗಳವೇ ಆಡದ ದಂಪತಿ ಎಲ್ಲಾದರೂ ಇರ್ತಾರ? ನಾವೂ ಸಾಕಷ್ಟು ಜಗಳವಾಡಿದ್ದೇವೆ. ಜಗಳವಾದಾಗ ಇಬ್ಬರಲ್ಲೊಬ್ಬರು ಮನೆಯಿಂದ ಹೊರಗೆ ಹೋಗಿಬಿಡುತ್ತಿದ್ದೆವು. ನಾನು ಯಾರಿಂದಾದರೂ ಹಣಕಾಸಿನ ಸಹಾಯ ಪಡೆದಾಗ ಇವರಿಗೆ ತುಂಬಾ ಕೋಪ ಬರುತ್ತಿತ್ತು. ಹೆಚ್ಚಿನ ಜಗಳಗಳು ಆ ಕಾರಣಕ್ಕಾಗಿಯೇ ಆಗಿವೆ. ನನ್ನ ಮಗ ದಾವಣಗೆರೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಸಮಯವದು. ಆಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ನಮ್ಮನೆಯವರು ಜೈಲಿನಲ್ಲಿದ್ದರು. ನನ್ನ ಮಗನಿಂದ ಪತ್ರ ಬಂದಿತು. ಪರೀಕ್ಷೆಗೆ ಹಣ ಕಟ್ಟದಿದ್ದರೆ ಒಂದು ವರ್ಷ ಮನೆಯಲ್ಲಿರಬೇಕಾಗುತ್ತದೆ ಎಂದು ಅವನು ಬರೆದಿದ್ದ. ಇವರಿಗೆ ಈ ಕುರಿತು ಸುದ್ದಿ ಮುಟ್ಟಿಸಿದೆ. ಇವರು ಈ ವರ್ಷ ಅವನು ಮನೆಯಲ್ಲೇ ಇರಲಿ. ಮುಂದಿನ ವರ್ಷ ಪರೀಕ್ಷೆ ಬರೆಯಲಿ ಎಂದು ಹೇಳಿದರು. ನನ್ನದು ಅಸಹಾಯಕ ಪರಿಸ್ಥಿತಿ. ನನ್ನ ಪತಿಯ ಸ್ನೇಹಿತರೊಬ್ಬರಿಗೆ ಈ ವಿಷಯ ಹೇಗೋ ತಿಳಿಯಿತು. ಅವರು ದಾವಣಗೆರೆಗೆ ಹೋಗಿ ಪರೀಕ್ಷಾ ಶುಲ್ಕ ಕಟ್ಟಿ, ಮಗನ ಕೈಗೆ ಸ್ವಲ್ಪ ಹಣವನ್ನೂ ಕೊಟ್ಟು ಬಂದಿದ್ದರು. ಜೈಲಿನಿಂದ ಬಂದ ಬಳಿಕ ಇವರಿಗೆ ಶುಲ್ಕದ ವಿಷಯ ತಿಳಿದು ಬಹಳ ಕೋಪಗೊಂಡರು. ನೀನ್ಯಾಕೆ ಹಣ ಪಡೆದೆ ಎಂದು ನನ್ನ ಮೇಲೆ ಕೂಗಾಡಿದ್ದರು.
ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಜೊತೆಗಿದ್ರೆ ಹಬ್ಬ: ನಮಗೆ 3 ಮೊಮ್ಮಕ್ಕಳು, 2 ಮರಿ ಮೊಮ್ಮಕ್ಕಳಿದ್ದಾರೆ. ಮಗಳ ಇಬ್ಬರು ಮಕ್ಕಧಿಳನ್ನು ನಾನೇ ಸಾಕಿ ಬೆಳೆಸಿದೆ. ಮೊಮ್ಮಕ್ಕಳು ನನ್ನ ಬೇಸರವನ್ನು ದೂರ ಮಾಡಿದರು. ಈಗ ಬೇಸಿಗೆ ರಜೆ ಇರುವುದರಿಂದ ಮರಿ ಮೊಮ್ಮಕ್ಕಳು ಮನೆಗೆ ಬಂದು ಸಂಜೆವರೆಗೂ ನಮ್ಮ ಜೊತೆ ಇರುತ್ತಾರೆ. ಈಗ ಅವರ ಜೊತೆ ಕಾಲ ಕಳೆಯುತ್ತಾ ಸಂತೋಷ ಪಡುತ್ತೇವೆ.
ಈ ಸೋಮವಾರ, ನನ್ನ ಯಜಮಾನರು 99 ವರ್ಷ ತುಂಬಿ 100ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಕಾರಣದಿಂದಲೇ ಅವತ್ತು ಇಡೀ ದಿನ ಮನೆಯಲ್ಲಿ ಸಂಭ್ರಮ ಇರುತ್ತದೆ. ಇದೇ 16ರಂದು ನಮ್ಮ ಮಗ, ಅವರ ಮನೆಯಲ್ಲಿ ಸಂತೋಷ ಕೂಟ ಏರ್ಪಡಿಸಿದ್ದಾನೆ. (ನಿರೂಪಣೆ ಚೇತನ.ಜೆ.ಕೆ) – ಲಲಿತಮ್ಮ ದೊರೆಸ್ವಾಮಿ