Advertisement

ಕಾನೂನು ಕಚ್ಚುವುದು ಪ್ರಾಮಾಣಿಕರನ್ನೇ ಅಲ್ಲವೇ?

06:00 AM Sep 24, 2018 | |

ಹೆದ್ದಾರಿಗಳ ಪಕ್ಕದಲ್ಲಿ ಬಲಿಗಾಗಿ ಕಾದುಕುಳಿತುಕೊಳ್ಳುವ ಸಾರಿಗೆ ಇಲಾಖೆ ಅಥವಾ ಪೊಲೀಸರಿಗೆ ಸಿಕ್ಕಿಬೀಳುವುದು 10 ಸಂದರ್ಭಗಳಲ್ಲಿ ಒಂಬತ್ತು ಬಾರಿ ಹೆಲ್ಮೆಟ್‌ ಧಾರಣೆ, ದಾಖಲೆಗಳನ್ನು ಸರಿಯಾಗಿ ಹೊಂದಿದವರೇ ಆಗಿರುತ್ತಾರೆ. ಡಿಎಲ್‌ ಇಲ್ಲದ, ಹೆಲ್ಮೆಟ್‌ ಧರಿಸದ, ವಾಹನದ ವಿಮೆ, ಆರ್‌ಸಿಗಳು ಸಮರ್ಪಕವಾಗಿ ಇಲ್ಲದ ವಾಹನ ಚಾಲಕರ ಸಿಕ್ಸ್‌ ಸೆನ್ಸ್‌ ತೀರಾ ಸೂಕ್ಷ್ಮವಾಗಿರುತ್ತದೆ. ಅವರು ದಾಳಿಗೆ ಹೊಂಚು ಹಾಕುವ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವಲ್ಲಿಯೇ ಭಲೇ ಹುಶಾರು!

Advertisement

ಬೇರೆ ದೇಶದ ಕಥೆ ಗೊತ್ತಿಲ್ಲ. ಭಾರತದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಕಾನೂನು “ಕಚ್ಚುವುದು’ ಪ್ರಾಮಾಣಿಕರನ್ನೇ. ಪೊಲೀಸ್‌, ಅಧಿಕಾರಿಗಳು, ಕಾನೂನು, ದಂಡ, ಶಿಕ್ಷೆಗಳಲ್ಲಿ ಬೆದರುವುದು ಕೊನೆಗೂ ನೆಲದ ಕಾನೂನುಗಳನ್ನು ಬಹುತೇಕ ಪಾಲಿಸುವವರೇ ಆಗಿರುತ್ತಾರೆ. ತೆರಿಗೆ ಅಧಿಕಾರಿಗಳ ದಾಳಿ ನಡೆದಾಗ ಕಂತೆ ಕಂತೆ ನೋಟುಗಳೇ ಸಿಕ್ಕಿದರೂ ಹಣವಂತ ರಾಜಕಾರಣಿಗೆ ಈ ಕಾನೂನಿನಲ್ಲಿ ಬಚಾವಾಗುವ ದಾರಿ ಇದ್ದೇ ಇರುತ್ತದೆ ಎಂಬ ಆತ್ಮವಿಶ್ವಾಸ. ಬಂಧನದ ಸುಳಿವು ಸಿಗುತ್ತಿದ್ದಂತೆ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರುವ ನಾಟಕವನ್ನು ವಿಐಪಿಗಳು ಮಾಡಬಹುದು ಎಂಬುದು ಈ ದೇಶದ ಅಲಿಖೀತ ಕಾನೂನು!

ಹೆದ್ದಾರಿಗಳ ಪಕ್ಕದಲ್ಲಿ ಬಲಿಗಾಗಿ ಕಾದುಕುಳಿತುಕೊಳ್ಳುವ ಸಾರಿಗೆ ಇಲಾಖೆ ಅಥವಾ ಪೊಲೀಸರಿಗೆ ಸಿಕ್ಕಿಬೀಳುವುದು 10 ಸಂದರ್ಭಗಳಲ್ಲಿ ಒಂಬತ್ತು ಬಾರಿ ಹೆಲ್ಮೆಟ್‌ ಧಾರಣೆ, ದಾಖಲೆಗಳನ್ನು ಸರಿಯಾಗಿ ಹೊಂದಿದವರೇ ಆಗಿರುತ್ತಾರೆ. ಡಿಎಲ್‌ ಇಲ್ಲದ, ಹೆಲ್ಮೆಟ್‌ ಧರಿಸದ, ವಾಹನದ ವಿಮೆ, ಆರ್‌ಸಿಗಳು ಸಮರ್ಪಕವಾಗಿ ಇಲ್ಲದ ವಾಹನ ಚಾಲಕರ ಸಿಕ್ಸ್‌ ಸೆನ್ಸ್‌ ತೀರಾ ಸೂಕ್ಷ್ಮವಾಗಿರುತ್ತದೆ. ಅವರು ದಾಳಿಗೆ ಹೊಂಚು ಹಾಕುವ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವಲ್ಲಿಯೇ ಭಲೇ ಹುಶಾರು!

ಅಧಿಕೃತ ದಂಧೆ!: ಈ ದೇಶದ ಕಾನೂನು ಒಳ್ಳೆಯವರನ್ನು ಬೆಂಬಲಿಸಬೇಕು, ಅವರಿಗೆ ಅಭಯ ನೀಡಬೇಕು. ಉದಾಹರಣೆಗೆ, ಹೆಲ್ಮೆಟ್‌ ಕಡ್ಡಾಯ ಎಂಬುದು ಖುದ್ದು ದ್ವಿಚಕ್ರ ವಾಹನ ಚಾಲಕರ ಹಿತರಕ್ಷಣೆಗಾಗಿ ಸರ್ಕಾರ ಜಾರಿಗೆ ತಂದಿರುವ ನಿಯಮ. ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬಹುದು. ಇನ್ನೂ ಮುಖ್ಯವಾಗಿ, ಶಿರಸ್ತ್ರಾಣ ಧರಿಸದ ವ್ಯಕ್ತಿಗಳು ಗಾಯಗೊಂಡರೆ, ಮೃತರಾದರೆ ವಿಮೆಯ ಪರಿಹಾರ ವ್ಯಾಖ್ಯೆಗೆ ಬರುವುದಿಲ್ಲ ಎಂಬ ಷರತ್ತನ್ನು ಹೇರಬಹುದು. ಜನ, ಲಾಭ ನಷ್ಟಗಳಲ್ಲಿ ಹೆಚ್ಚು ಆಸಕ್ತರೇ ವಿನಃ ಕಾನೂನು ಎಂದು ಬಂದಾಗ, ಅದನ್ನು ಉಲ್ಲಂ ಸುವ ಬಗೆ ಹೇಗೆ ಎಂಬ ಬಗ್ಗೆಯೇ ಹೆಚ್ಚು ಕಾರ್ಯಪ್ರವೃತ್ತರಾಗುತ್ತಾರೆ.  

ಆದರೆ ಕಡ್ಡಾಯ ನಿಯಮ ಎಂಬುದು ಸರ್ಕಾರಕ್ಕೆ ಅಧಿಕೃತವಾಗಿ ಹಣ ಮಾಡುವ ದಂಧೆಯಾಗುತ್ತದೆ. ಜನಕ್ಕಿಂತ ಹೆಲ್ಮೆಟ್‌ ಲಾಬಿ ಕೆಲಸ ಮಾಡಿದ್ದರೂ ಮಾಡಿರಬಹುದು. ಆರ್‌ಟಿಓ ಹಾಗೂ ಪೊಲೀಸ್‌ ಸಿಬ್ಬಂದಿ, ಆಗಾಗ್ಗೆ ಮಾರ್ಗಮಧ್ಯೆ ವಾಹನಗಳನ್ನು ತಡೆದು ದಾಖಲೆ, ನಿಯಮಗಳ ಜಾರಿಯನ್ನು ಪರಿಶೀಲಿಸುವ ಕ್ರಮ ಜಾಗೃತಿ ಮೂಡಿಸುವುದಾಗಲಿ, ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದ್ದಾಗಲಿ ಅಲ್ಲ. ಈಗ ಸರ್ಕಾರಗಳು ಪ್ರತಿ ಇಲಾಖೆಗೆ ಸೌಕರ್ಯಗಳನ್ನು ಕೊಡುವುದರ ಜೊತೆಗೆ ಪ್ರತಿ ಮಾಸಿಕ ಇಷ್ಟು ಪ್ರಮಾಣದ ಆದಾಯ ಸರ್ಕಾರಕ್ಕೆ ತಮ್ಮಿಂದ ಬರಬೇಕು ಎಂದು ಗುರಿಗಳನ್ನು ನಿಗದಿಪಡಿಸಿರುತ್ತವೆ.

Advertisement

ವಾಹನಗಳ ನೋಂದಣಿ ಮತ್ತಿತರ ಕಚೇರಿ ಒಳಗಣ ಚಟುವಟಿಕೆಗಳಿಂದಲೇ ದೊಡ್ಡ ಮೊತ್ತವನ್ನು ಸಂಗ್ರಹಿಸುವ ಸಾರಿಗೆ ಇಲಾಖೆಯ ಕಾರ್ಯಬಾಹುಳ್ಯ, ಸಿಬ್ಬಂದಿ ಕೊರತೆಯ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ವಿಚಕ್ಷಣೆಗೆ ಇಳಿಯುತ್ತಿಲ್ಲ. ಆದರೆ, ಗುರಿ ಸಾಧನೆಯ ಒತ್ತಡದಿಂದ ರಸ್ತೆಗಿಳಿಯುವ ಆರಕ್ಷಕರ ಗುರಿಯೂ ಒಂದೇ. ಆದಷ್ಟು ಕಡಿಮೆ ಅವಧಿಯಲ್ಲಿ ಗರಿಷ್ಠ ದಂಡದ ಮೊತ್ತವನ್ನು ಸಂಗ್ರಹಿಸುವುದು. ಈ ಕಾರಣದಿಂದ ಒಂದು ನಿರ್ದಿಷ್ಟ ಅವಧಿಯಲ್ಲಿ ಮಾರ್ಗದಲ್ಲಿ ಸಿಗುವ ವಾಹನಗಳನ್ನೆಲ್ಲ ತಡೆಯುವುದು, ಅವುಗಳಲ್ಲಿ ಕಾಣಿಸುವ ವ್ಯತ್ಯಯಗಳನ್ನು ಕಂಡುಹಿಡಿದು ದಂಡ ಹೇರುವುದು.

ಒಂದು ವೇಳೆ ಒಬ್ಬ ಕಾನೂನಿಗೆ ತಲೆಬಾಗುವ ಮನುಷ್ಯ ಆರ್‌ಸಿ, ಡಿಎಲ್‌, ಹೆಲ್ಮೆಟ್‌, ಕಮೀಷನ್‌ ವರದಿ, ವಿಮೆಗಳನ್ನೆಲ್ಲ ಸರಿ ಇರಿಸಿಕೊಟ್ಟಿದ್ದಾನೆಂದು ಕೊಂಡರೆ ಅವನಿಗೆ ಒಂದು ಮಿರರ್‌ ಸರಿಇಲ್ಲ ಎಂದೋ, ನಂಬರ್‌ ಪ್ಲೇಟ್‌ನ ಅಂಕಿ ಕಾಣುತ್ತಿಲ್ಲ ಎಂಬ ಕಾರಣವೊಡ್ಡಿ ದಂಡ ವಸೂಲಿ ಮಾಡಲಾಗುತ್ತದೆ. ದಾಖಲೆಗಳನ್ನೆಲ್ಲ ಸರಿಯಿಟ್ಟು ಕೊಂಡೂ ನೂರು ರೂ. ದಂಡ ಕೊಡುವುದಕ್ಕಿಂತ ಅವುಗಳಿಗೆಲ್ಲ ಹಣ ಸುರಿಯದೆ ಅಪರೂಪಕ್ಕೊಮ್ಮೆ ಎದುರಾಗುವ ವಿಚಕ್ಷಣೆಯಲ್ಲಿ ದಂಡ ಕಟ್ಟುವುದೇ ಲಾಭವೇ?

ಸಾವು ಮಕ್ಕಳಾಟ!: ಭಾರತದಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳ ಸಾವಿನ ಸಂಖ್ಯೆ ಗಾಬರಿ ಮೂಡಿಸುವಂತದು. ಪ್ರತಿ ವರ್ಷ ಸುಮಾರು 1,50,000 ಸಾವುಗಳು ರಸ್ತೆ ಅಪಘಾತದಿಂದ ಸಂಭವಿಸುತ್ತಿವೆ. ದಿನದ ಸರಾಸರಿಯಲ್ಲಿ ಪ್ರತಿ ದಿನ ಸಾವನ್ನಪ್ಪುತ್ತಿರುವವರ ಸಂಖ್ಯೆ 400. ಅತಿ ಹೆಚ್ಚಿನ ವಾಹನಗಳನ್ನು ಹೊಂದಿರುವ ಅಮೆರಿಕಾದಲ್ಲಿ 2016ರಲ್ಲಿ ಈ ರೀತಿಯ ಮೃತ್ಯು ಕಂಡವರು 40 ಸಾವಿರ ಜನ ಮಾತ್ರ. ಅಪಘಾತಕ್ಕೀಡಾಗುತ್ತಿರುವವರ ವಯೋಮಾನವನ್ನು ಗಣನೆಗೆ ತೆಗೆದುಕೊಂಡರೆ ಯುವ ಸಮುದಾಯವೇ ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಹೆಚ್ಚಿನ ಸಾವು ಕಾಣುತ್ತಿದ್ದಾರೆ. ಸಾವಿನ ಹೊರತಾಗಿಯೂ ಹೆಚ್ಚಿನ ಅಪಘಾತಗಳಾಗುತ್ತಿರುವುದು ವಾಹನ ಚಾಲನಾ ಪರವಾನಗಿ ಪಡೆಯುವ ವಯಸ್ಸಿಗಿಂತ ಕಡಿಮೆ ವಯೋಮಾನದವರು ಮನೆಯ ಬೈಕ್‌, ಸ್ಕೂಟರ್‌ಗಳನ್ನು ರಸ್ತೆಗಿಳಿಸಿದ್ದರಿಂದ!

ಪೋಷಕರಿಗೆ ತಮ್ಮ ಮಕ್ಕಳು ಅತಿ ಎಳೆಯ ಪ್ರಾಯದಲ್ಲಿಯೇ ಬೈಕ್‌, ಕಾರು ಚಲಾಯಿಸುತ್ತಾರೆ ಎಂಬುದು ಹೆಮ್ಮೆಯ ವಿಚಾರ. ಈಗಂತೂ, ಕಾಲೇಜಿಗೆ ಸೇರಿದ ಮಕ್ಕಳಿಗೆ ಬರ್ತ್‌ಡೇ, ಹಬ್ಬ ಎಂಬ ನೆಪದಲ್ಲಿ ಬೈಕ್‌, ಸ್ಕೂಟರ್‌ಗಳನ್ನೇ ಗಿಫ್ಟ್ ರೂಪದಲ್ಲಿ ಕೊಡುವುದು ಪ್ರತಿಷ್ಠೆಯ ವಿಚಾರ. ಇಂದು ದೊಡ್ಡ ಸಂಖ್ಯೆಯಲ್ಲಿ ರಸ್ತೆಗೆ ವಾಹನ ಇಳಿಸುವವರಲ್ಲಿ ಡಿಎಲ್‌ ಇಲ್ಲಿರುವುದಿಲ್ಲ. ಈ ರೀತಿಯ ವಯೋ ಅರ್ಹತೆಯನ್ನು ಪಡೆಯದವರು, ಡಿ.ಎಲ್‌ ಇಲ್ಲದವರನ್ನು ವಾಹನ ಚಲಾಯಿಸದಂತೆ ನಿರ್ಬಂಧಿಸಿದರೆ ಅಪಘಾತಗಳ ಪ್ರಮಾಣ ಗಣನೀಯವಾಗಿ ಕುಸಿಯುವುದರಲ್ಲಿ ಅನುಮಾನವಿಲ್ಲ.

ಹೈದರಾಬಾದ್‌ನಲ್ಲಿ ಈ ವರ್ಷದ ಆರಂಭದಿಂದ ಚಾಲನಾ ಪರವಾನಗಿ ಪತ್ರ ಹೊಂದಿಲ್ಲದ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಆಂದೋಲನವೇ ನಡೆದಿದೆ. ಫೆಬ್ರವರಿಯಲ್ಲಿ ಟ್ರಾಫಿಕ್‌ ಪೊಲೀಸರು 1079 ದೂರು ದಾಖಲಿಸಿದ್ದಾರೆ. ಒಂದೇ ದಿನ 191 ಪ್ರಕರಣಗಳನ್ನು ಹಿಡಿದ ದಾಖಲೆಯೂ ಇದೆ. ಕಾಲೇಜು, ಪ್ರೌಢಶಾಲೆಗಳ ಸುತ್ತಮುತ್ತ ಎಡತಾಕುವ ಪೊಲೀಸರು, ಇಂಥವರನ್ನು ಒಳಗೆಹಾಕಿದ್ದಾರೆ. ಇದೇ ವೇಳೆ 2017ರಲ್ಲಿ 20,411 ಕುಡಿದು ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧವೂ ದೂರು ದಾಖಲಿಸಲಾಗಿದೆ.

ಬಹುಶಃ ಡಿ.ಎಲ್‌ ಇಲ್ಲದ ಅರ್ಹತೆಗಿಂತ ಕಡಿಮೆ ವಯೋಮಾನದವರ ಮೇಲೆ ಕೇವಲ ದಂಡ ಹಾಕಿದ್ದರೆ ಯಾವ ಪರಿಣಾಮವೂ ಆಗುತ್ತಿರಲಿಲ್ಲ. ತಮ್ಮ ಪಾಕೆಟ್‌ ಮನಿಯಲ್ಲಿ ಈ ಹುಡುಗರು ದಂಡ ಕಟ್ಟಬಲ್ಲರು. ದಂಡ ಪಾವತಿಗೆಂದೇ ಹೆಚ್ಚುವರಿ ಪಾಕೆಟ್‌ ಮನಿ ಕೊಡುವ ಪೋಷಕರಿದ್ದರೂ ಅಚ್ಚರಿಯಲ್ಲ. ಆದರೆ, ಹೈದರಾಬಾದ್‌ನ ಪೊಲೀಸರು ಭಾರತದ ಮೋಟಾರ್‌ ವಾಹನ ಕಾಯ್ದೆಯ ಸೆಕ್ಷನ್‌ 180ರ ಪ್ರಕಾರ, ವಾಹನಗಳನ್ನು ಅಧಿಕೃತ ಡಿಎಲ್‌ ಇಲ್ಲದವರಿಗೆ ಕೊಟ್ಟ ಅಪರಾಧಕ್ಕಾಗಿ ಈ ಮಕ್ಕಳ ಪೋಷಕರ ವಿರುದ್ಧವೇ ದೂರು ದಾಖಲಿಸುತ್ತಿದ್ದಾರೆ. ಅಷ್ಟೇ ಅಲ್ಲ, ಮಾರ್ಚ್‌ನಲ್ಲಿ ತಮ್ಮ ಮೈನರ್‌ ಮಕ್ಕಳಿಗೆ ವಾಹನ ಕೊಟ್ಟ ಅಪರಾಧಕ್ಕಾಗಿ 10 ಪೋಷಕರು 500 ರೂ. ದಂಡದ ಜೊತೆಗೆ ಒಂದು ದಿನದ ಜೈಲು ಶಿಕ್ಷೆಯನ್ನೂ ಅನುಭವಿಸುವಂತಾಯಿತು!

ಸ್ವಂತ ವಾಹನಗಳಲ್ಲಿ ಕಾಲೇಜು ಪ್ರಾಂಗಣಕ್ಕೆ ಬರುವ ದ್ವಿತೀಯ ಪಿಯುಸಿ ಮಟ್ಟದ ಎಲ್ಲ ವಿದ್ಯಾರ್ಥಿಗಳ ವಿರುದ್ಧ ಖುದ್ದು ಕಾಲೇಜು ಆಡಳಿತ ಮಂಡಳಿಯೇ ದೂರು ನೀಡಿ ಆರ್‌ಟಿಓ ಗಮನ ಸೆಳೆಯಬಹುದು. ಈ ತರಹದ ಜೈಲು, ದಂಡಗಳು ಬಿದ್ದರೆ ಪೋಷಕರು ಹುಷಾರಾಗುತ್ತಾರೆ. ಮಕ್ಕಳ ಕೈಗೆ ಬೈಕ್‌, ಕಾರ್‌ ಸಿಗದಂತೆ ನೋಡಿಕೊಂಡರೆ ಅಷ್ಟರಮಟ್ಟಿಗೆ ಅಪಘಾತಗಳು ಕಡಿಮೆಯಾದಂತೆ. ಬರೀ ಹೈದರಾಬಾದ್‌ಲ್ಲಷ್ಟೇ ಈ ಕಾಯ್ದೆ ಸೆಕ್ಷನ್‌ ಪಾಲಿಸಿದರೆ ಸಾಕಾಗುವುದಿಲ್ಲ. ದೇಶಾದ್ಯಂತ ಏಕಕಾಲಕ್ಕೆ ಈ ನಿಯಮ ಪಾಲಿಸಲು ಸರ್ಕಾರ ಸ್ಪಷ್ಟ ಶಬ್ಧಗಳಲ್ಲಿ ಹೇಳಬೇಕು.

ವೈಜಾನಿಕ ವೇಗ ಮಿತಿ:ಭಾರತದ ರಸ್ತೆ ಅಪಘಾತಗಳಲ್ಲಿ ಶೇ. 70 ವಿಪರೀತ ವೇಗದ ಕಾರಣದಿಂದ ಸಂಭವಿಸುತ್ತವೆ ಎಂದು ಒಂದು ಅಧ್ಯಯನದ  ವರದಿ ಹೇಳುತ್ತದೆ. ಹಾಗೆಂದು ಈ ಹಿಂದೆ ನಗರಗಳ ಒಳಗೆ ಕಾರುಗಳಿಗೆ ಘಂಟೆಗೆ 40 ಕಿ.ಮೀ ಹಾಗೂ ದ್ವಿಚಕ್ರ ವಾಹನಗಳಿಗೆ 30 ಕಿ.ಮೀ ಎಂಬ ಪರಿುತಿ ಈ ಕಾಲದಲ್ಲಿ ಹಾಸ್ಯಾಸ್ಪದವಾಗಿ ಕಾಣಿಸುತ್ತಿತ್ತು. ಇಂದಿನ ವಾಹನಗಳ ರಚನೆಯಲ್ಲಿಯೇ ಬ್ರೇಕಿಂಗ್‌ ವ್ಯವಸ್ಥೆಯನ್ನು ಸುಧಾರಿಸಲಾಗಿದೆ. ಅಲ್ಲದೆ, ಬೈಕ್‌ ಒಂದು ನಗರದ ಎನ್‌ಎಚ್‌ನಲ್ಲಿ 30 ಕಿ.ಮೀ ಪರಿಮಿತಿಯಲ್ಲಿ ಓಡುತ್ತಿದೆ ಎಂಬುದು ಬುಕ್‌ ತರಹ ಕಾಣಿಸುತ್ತದೆ.

ವೈಜಾnನಿಕ ತಳಹದಿಯ ಮೇಲೆ ವೇಗ ಮಿತಿ ನಿರ್ಧಾರವಾಗುವುದು ಹೆಚ್ಚು ಹಿತ ಎಂಬ ಮಾತೂ ಕೇಳಿಬಂದಿತ್ತು. 2018ರ ಏಪ್ರಿಲ್‌ ವೇಳೆಗೆ ಈ ವೇಗಮಿತಿಯ ನಿಯಮಗಳನ್ನು ವಾಹನ ಕಾಯ್ದೆ 1988ರ 180ನೇ ಅನುಬಂಧದ ಪ್ರಕಾರ ಸಿಕ್ಕ ಅಧಿಕಾರದನ್ವಯ ಬದಲಿಸಲಾಗಿದೆ. ಎಕ್ಸ್‌ಪ್ರೆಸ್‌ ಹೈವೇಗಳಲ್ಲಿ ವಾಹನಗಳು ಇನ್ನು ಮುಂದೆ 120 ಕಿ.ಮೀ/ಘಂಟೆ ವೇಗದಲ್ಲಿ ಚಲಿಸಬಹುದು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗರಿಷ್ಠ ವೇಗ ಮಿತಿ 100 ಕೆಎಂಪಿಹೆಚ್‌.

ರಾಜ್ಯ ಹೆದ್ದಾರಿಯಲ್ಲಿ 70 ಕಿ.ಮೀ. ನಗರದೊಳಗಿನ ಈ ರಸ್ತೆಗಳಲ್ಲಿ ಘಂಟೆಗೆ ಪರಮಾವಧಿ 60 ಕಿ.ಮೀ. ಬೈಕ್‌ಗಳಿಗೂ ಈ ಮಿತಿಯನ್ನು 40ರಿಂದ ಘಂಟೆಗೆ 60 ಕಿ.ಮೀ ಎಂದು ಬದಲಿಸಲಾಗಿದೆ. ಈಗಲೂ ಈ ವೇಗಮಿತಿಯಲ್ಲಿದ್ದರೆ ಹೆಚ್ಚಿನ ಅಪಘಾತಗಳು ಆಗುವುದಿಲ್ಲ. ಇದೊಂದು ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ಡಿಎಲ್‌ ಚಾಲಕರು ಅಪಘಾತ ಮಾಡುವುದಿಲ್ಲ. ಆದ ಅಪಘಾತದಲ್ಲೂ ಸಾವು ನೋವು ಇಳಿದೀತು. ಮತ್ತೆ ಈ ವೇಗಮಿತಿಗಿಂತ ಒಂದೆರಡು ಕಿ.ಮೀ ಜಾಸ್ತಿ ಇದ್ದರೂ ದಂಡ ವಿಧಿಸುತ್ತಾರೆ.

ಗೋವಾದಂಥ ರಾಜ್ಯದಲ್ಲಿ ಮೂರು ಮೂರು ತಿಂಗಳ ಸುದೀರ್ಘ‌ ಅವಧಿ ಡಿಎಲ್‌ ಅಮಾನತುಗಳಿಸುತ್ತಾರೆ. ವಾಸ್ತವವಾಗಿ, ಮೋಟಾರು ವಾಹನ ಕಾಯ್ದೆಯ ಅನ್ವಯವೇ ಶೇ. 5ರ ವ್ಯತ್ಯಾಸಕ್ಕೆ ಯಾವುದೇ ದಂಡ, ಶಿಕ್ಷೆ ವಿಧಿಸುವಂತಿಲ್ಲ. ಕೊನೆ ಮಾತು: ಈ ವಾರವಷ್ಟೇ ರಸ್ತೆಗುಂಡಿಗಳ ವಿರುದ್ಧ ಸುಪ್ರೀಂಕೋರ್ಟ್‌ ತೀವ್ರ ಆಕ್ಷೇಪವನ್ನು ದಾಖಲಿಸಿದೆ. ಕಳೆದ ವರ್ಷ ರಸ್ತೆ ಗುಂಡಿಗಳಿಗೆ ದೇಶದಲ್ಲಿ 3,597 ಜನ ಸಾವನ್ನಪ್ಪಿದ್ದಾರೆ. ಹೊಸದೊಂದು ಕಾನೂನು ಜಾರಿಗೆ ತಂದು ಜನರ ಜೀವ ರಕ್ಷಿಸುತ್ತೇನೆ ಎನ್ನುವ ಸರ್ಕಾರ ಮೊದಲು ಗುಂಡಿ ಮುಚ್ಚಬೇಕಿತ್ತಲ್ಲವೇ? 

* ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next