ಹೊಸದಿಲ್ಲಿ: ವಿಪಕ್ಷ ಐಎನ್‌ಡಿಐಎ ಒಕ್ಕೂಟಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಚಾಲಕರಾಗಿ ನೇಮಕವಾಗುವ ಸಾಧ್ಯತೆ ಇದೆ. ಒಕ್ಕೂಟದಲ್ಲಿ ಅಧ್ಯಕ್ಷ ಹಾಗೂ ಸಂಚಾಲಕ ಸ್ಥಾನ ಮಹತ್ವದ ಪಾತ್ರವಹಿ ಸಲಿದ್ದು, ಗುರುವಾರ ಝೂಮ್ ಮೂಲಕ ನಡೆಯ ಲಿರುವ ಒಕ್ಕೂಟದ ಸಭೆಯಲ್ಲಿ ನಿತೀಶ್ ಆಯ್ಕೆಯನ್ನು ಅಧಿಕೃತಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್‌ರನ್ನು ಸಂಚಾಲಕರನ್ನಾಗಿ ನೇಮಿಸುವ ಸಂಬಂಧ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಜತೆಗೂ ಕಾಂಗ್ರೆಸ್ ಮಾತುಕತೆ ನಡೆಸಿದೆ. ಇತರ ಪಾಲುದಾರ ಪಕ್ಷಗಳ ಜತೆಯೂ ಸಮಾಲೋಚಿಸಿ ನೇಮಕವನ್ನು ಅಂತಿಮಗೊಳಿಸಲಾಗುತ್ತದೆ. ಇನ್ನೊಂದೆಡೆ, ನಿತೀಶ್ ಅವರು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಜತೆ ಮಾತುಕತೆ ನಡೆಸಿದ್ದಾರೆ. ದಿಲ್ಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಕೇಜ್ರಿವಾಲ್ ಕೂಡ ನಿತೀಶ್ ನೇಮಕಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಅರುಣಾಚಲಕ್ಕೆ ಜೆಡಿಯು ಅಭ್ಯರ್ಥಿ ಘೋಷಣೆ
ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಶುರುವಾಗುವ ಮುನ್ನವೇ ಜೆಡಿಯು ಲೋಕಸಭೆ ಚುನಾವಣೆಗೆ ಅರುಣಾಚಲ ಪ್ರದೇಶದಲ್ಲಿ ಮೊದಲ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ರುಹಿ ತಂಗುಂಗ್ ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದಿದೆ.