ಕೋವಿಡ್ ಬಳಿಕ ಈಗಷ್ಟೇ ಚಿತ್ರರಂಗ ನಿಧಾನವಾಗಿ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡುತ್ತಿದೆ. ದಕ್ಷಿಣದ ಸಿನಿಮಾಗಳು ಬಾಲಿವುಡ್ ಹೋಲಿಸಿದರೆ ತುಸು ಹೆಚ್ಚೇ ಕಮಾಲ್ ಮಾಡುತ್ತಿದೆ. ಬಾಲಿವುಡ್ ನಲ್ಲಿ ʼಪಠಾಣ್ʼ ಬಿಟ್ಟರೆ ಕಳೆದ ವರ್ಷ ಹೇಳಿಕೊಳ್ಳುವಷ್ಟು ಯಾವ ಸಿನಿಮಾಗಳು ಓಡಿಲ್ಲ. ವರ್ಷದ ಆರಂಭಲ್ಲಿ ʼಪಠಾಣ್ʼ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಆ ಬಳಿಕ ಬಂದಿರುವ ಸಿನಿಮಾಗಳ ಮತ್ತದೇ ಹಳೆಯ ಸ್ಟೈಲ್, ರಿಮೇಕ್ ನಿಂದ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ವಿಫಲವಾಗುತ್ತಿದೆ.
ಚಿತ್ರರಂಗದಲ್ಲಿ ರಿಮೇಕ್ ಹೊಸದಲ್ಲ. ಒಂದು ಚಿತ್ರ ಸೂಪರ್ ಹಿಟ್ ಆದರೆ ಅದನ್ನು ಇತರ ಭಾಷೆಯಲ್ಲಿ ರಿಮೇಕ್ ಮಾಡಿ ರಿಲೀಸ್ ಮಾಡುವುದು ಹೊಸದೇನಲ್ಲ. ಬಾಲಿವುಡ್ ನಲ್ಲಿ ಈ ವಾರ ರಿಲೀಸ್ ಆಗಿರುವ ʼ ಶೆಹಜಾದಾʼ ಸಿನಿಮಾ ಅಲ್ಲು ಅರ್ಜುನ್ ಅಭಿನಯದ ತೆಲುಗಿನ ‘ಅಲ ವೈಕುಂಠಪುರಮುಲೋ’ ಸಿನಿಮಾದ ರಿಮೇಕ್. ಸಿನಿಮಾ ಮೊದಲ ದಿನ ಗಳಿಸಿದ್ದು 6 ಕೋಟಿ ರೂ ಮಾತ್ರ.
ದಕ್ಷಿಣದ ಸಿನಿಮಾಗಳೇ ರಿಮೇಕ್: ಬಾಲಿವುಡ್ ನಲ್ಲಿ ಕಳೆದ ಕೆಲ ವರ್ಷಗಳಿಂದ ರಿಮೇಕ್ ಚಿತ್ರಗಳೇ ಹೆಚ್ಚಾಗಿ ಬರುತ್ತಿದೆ. ಬಾಲಿವುಡ್ ನಲ್ಲಿ ʼಭೂಲ್ ಭುಲೈಯಾ 2ʼ ಕಳೆದ ವರ್ಷ ಒಂದು ಹಂತಕ್ಕೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ರೀತಿಯಲ್ಲಿ ಗಳಿಕೆ ಕಂಡಿತ್ತು. ಆದರೆ ಆ ಬಳಿಕ ತೆರೆ ಕಂಡ ಸಿನಿಮಾಗಳು ಹೆಚ್ಚಾಗಿ ಅಬ್ಬರಿಸಲೇ ಇಲ್ಲ. ಸೌತ್ ನಲ್ಲಿ ಮೋಡಿ ಮಾಡಿದ್ದ ನಾನಿ ಅಭಿನಯದ ʼಜೆರ್ಸಿʼ, ಬಾಲಿವುಡ್ ನಲ್ಲಿ ಶಾಹಿದ್ ಕಪೂರ್ ರಿಮೇಕ್ ಮಾಡಿದ್ದರು. ತಮಿಳಿನಲ್ಲಿ ಆರ್. ಮಾಧವನ್, ವಿಜಯ್ ಸೇತುಪತಿ ಅಭಿನಯಿಸಿದ್ದ ʼ ವಿಕ್ರಮ್ ವೇದʼ ಚಿತ್ರವನ್ನು ಹಿಂದಿಯಲ್ಲಿ ಅದೇ ಟೈಟಲ್ ಇಟ್ಟುಕೊಂಡು ಹೃತಿಕ್ ಹಾಗೂ ಸೈಫ್ ಅಲಿ ಖಾನ್ ರಿಮೇಕ್ ಮಾಡಿದ್ದರು. ಮಲಯಾಳಂ ʼದೃಶ್ಯಂ-2ʼ ಹಿಂದಿಯಲ್ಲಿ ಥೇಟು ಅದೇ ಟೈಟಲ್ ನಲ್ಲಿ ಅಜಯ್ ದೇವಗನ್ ಹಿಂದಿಯಲ್ಲಿ ಬಣ್ಣ ಹಚ್ಚಿದ್ದರು.
ರಿಮೇಕ್ ಓಕೆ; ಹಿಟ್ ಇಲ್ಲ ಯಾಕೆ?: ಬಾಲಿವುಡ್ ನಲ್ಲಿ ಮೊದಲಿನ ಹಾಗೆ ಸ್ವಂತ ಕಥೆಯ ಚಿತ್ರಗಳು ಬರುತ್ತಿಲ್ಲ ಎಂದಿಲ್ಲ. ಬರುವ ಪ್ರಮಾಣ ಕಮ್ಮಿಯಾಗಿದೆ. ʼವಿಕ್ರಮ್ ವೇದʼ ಹಿಂದಿಯಲ್ಲಿ ಬಂದ ಸಿನಿಮಾಕ್ಕೆ ಒಳ್ಳೆಯ ಹೈಪ್ ಕ್ರಿಯೇಟ್ ಆಗಿತ್ತು. ಆದರೆ ಆ ಮಟ್ಟಿಗಿನ ಯಶಸ್ಸು ಕಂಡಿಲ್ಲ. ಇಬ್ಬರು ಸ್ಟಾರ್ ಗಳನ್ನು ಒಂದೇ ಸ್ಕ್ರೀನ್ ನಲ್ಲಿ ಪ್ರೇಕ್ಷಕರು ನೋಡಿ ಕಣ್ತುಂಬಿಕೊಂಡರು ವಿನಃ ಈ ಹಿಂದೆಯೇ ಒರಿಜಿನಲ್ ಸಿನಿಮಾ ನೋಡಿದ ಪ್ರೇಕ್ಷಕರು ಹಿಂದಿ ರಿಮೇಕ್ ಗೆ ಜೈ ಎಂದಿಲ್ಲ. ಇನ್ನು ಜೆರ್ಸಿ ಸಿನಿಮಾದಲ್ಲಿ ಶಾಹಿದ್ ಕಪೂರ್ ಕ್ರಿಕೆಟರ್ ಪಾತ್ರಕ್ಕೆ ಜೀವ ತುಂಬಿದ್ದರು. ಆದರೆ ತೆಲುಗಿನಲ್ಲಿ ನಾನಿಯ ಪಾತ್ರದ ಮುಂದೆ ಶಾಹಿದ್ ಪಾತ್ರ ಅಷ್ಟಾಗಿ ಗಮನ ಸೆಳೆದಿಲ್ಲ. ಥಿಯೇಟರ್ ನಿಂದ ಹಿಂದಿ ರಿಮೇಕ್ ನ ಜೆರ್ಸಿ ಸಿನಿಮಾ ಬಹುಬೇಗನೇ ಹೊರ ಹೋಯಿತು.
ʼಜೆರ್ಸಿʼ ಹಾಗೂ ʼವಿಕ್ರಮ್ ವೇದʼ ಎರಡೂ ಸಿನಿಮಾಗಳ ಮತ್ತೊಂದು ಕಾರಣವನ್ನು ನೋಡಿದರೆ ಎರಡೂ ಸಿನಿಮಾಗಳು ಹಿಂದಿ ಭಾಷೆಗೆ ರಿಮೇಕ್ ರಿಲೀಸ್ ಆದದ್ದು ತಡವಾಗಿ. ರಿಲೀಸ್ ಆಗುವ ವೇಳೆ ಹಿಂದೆ ಭಾಷೆಗೆ ಡಬ್ ಆಗಿ ಸಿನಿಮಾ ಟಿವಿಯಲ್ಲಿ ಪ್ರದರ್ಶನ ಕಾಣುತ್ತಿದ್ದು, ಹತ್ತಾರು ಬಾರಿ ಟಿವಿಯಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಫ್ರೀಯಾಗಿ ಸಿನಿಮಾ ನೋಡಿದ ಬಳಿಕ ಹಿಂದಿಯಲ್ಲಿ ರಿಮೇಕ್ ಆಗಿ ಸಿನಿಮಾ ತೆರೆಗೆ ಬಂದಾಗ ಪ್ರೇಕ್ಷಕರು ಮತ್ತೆ ಸಿನಿಮಾ ನೋಡಲು ಹಿಂದೇಟು ಹಾಕಿದರು. ಇದು ಈ ಸಿನಿಮಾಗಳಿಗೆ ಮುಳುವಾಯಿತು.
ಇನ್ನು ಆಮಿರ್ ಖಾನ್ ಅವರ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾ ಕೂಡ ಹಾಲಿವುಡ್ ನ ಕ್ಲಾಸಿಕ್ ಹಿಟ್ ʼ ʼಫಾರೆಸ್ಟ್ ಗಂಪ್ʼ ಚಿತ್ರದ ಹಿಂದಿ ರಿಮೇಕ್. ಹಾಲಿವುಡ್ ನಲ್ಲಿ ʼ ಫಾರೆಸ್ಟ್ ಗಂಪ್ʼ ಆದಾಗಲೇ ಓಟಿಟಿಯಲ್ಲಿ ತೆರೆ ಕಂಡಾಗಿತ್ತು. ʼಲಾಲ್ ಸಿಂಗ್ ಚಡ್ಡಾʼ ಸೋಲಲು ಇದೊಂದು ಕಾರಣವಾದರೆ ಬಾಯ್ಕಾಟ್ ಕೂಡ ಮತ್ತೊಂದು ಕಾರಣವಾಯಿತು ಎನ್ನಬಹುದು.
ಕಾರ್ತಿಕ್ ಆರ್ಯನ್ ಅವರ ʼ ʼ ಶೆಹಜಾದಾʼ ಸಿನಿಮಾ ಅಲ್ಲು ಅರ್ಜುನ್ ಅವರ ಮಾಸ್ ಲುಕ್ ಮ್ಯಾಚ್ ಮಾಡಲು ಸಾಧ್ಯವಾಗಿಲ್ಲ. ‘ಅಲ ವೈಕುಂಠಪುರಮುಲೋ’ ಸಿನಿಮಾ ಓಟಿಟಿ ಹಾಗೂ ಟಿವಿಯಲ್ಲಿ ಆದಾಗಲೇ ಸೌಂಡ್ ಮಾಡಿದೆ. ಆದರೆ ಅದೇ ಕಥೆಯನ್ನಿಟ್ಟುಕೊಂಡು ,ಹಿಂದಿಯ ಬಿಲ್ಡಪ್ ಸೇರಿಸಿ ಬಂದ ಸಿನಿಮಾಕ್ಕೆ ಆರಂಭಿಕವಾಗಿ ಹಿನ್ನೆಡೆಯಾಗಿದೆ.
ಸಲ್ಮಾನ್ ಖಾನ್ ಅವರ ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಚಿತ್ರವೂ ತಮಿಳಿನ ʼವೀರಂʼ ಚಿತ್ರದ ರಿಮೇಕ್. ಈ ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ಇನ್ನು ಅಜಯ್ ದೇವಗನ್ ಅವರ ʼಭೋಲಾʼ ಸಿನಿಮಾ ಕಾರ್ತಿ ಅಭಿನಯದ ಸೌತ್ ಸೂಪರ್ ಹಿಟ್ ʼʼಖೈತಿ” ಸಿನಿಮಾದ ಹಿಂದಿ ರಿಮೇಕ್.
ಸೌತ್ ನಿಂದ ರಿಮೇಕ್ ಆದ ಸಿನಿಮಾಗಳು ಬಾಲಿವುಡ್ ನಲ್ಲಿ ಫ್ಲಾಪ್ ಆಗುತ್ತಿದ್ದರೂ, ಬಾಲಿವುಡ್ ನ ನಿರ್ದೇಶಕರು ಮತ್ತೆ ಮತ್ತೆ ದಕ್ಷಿಣದ ಸಿನಿಮಾಗಳನ್ನೇ ರಿಮೇಕ್ ಮಾಡುತ್ತಿದ್ದಾರೆ. ರಿಮೇಕ್ ಬಾಲಿವುಡ್ ನಿಂದ ನಿಧಾನವಾಗಿ ದೂರವಾಗುತ್ತಿರುವುದು ಮಾತ್ರ ಸತ್ಯ.
-ಸುಹಾನ್ ಶೇಕ್