Advertisement

ಮಳೆಗಾಲದ ಯಕ್ಷಗಾನ ಸೇವೆಗೆ ಸಿಗುವುದೇ ಅನುಮತಿ?

09:19 PM Sep 03, 2020 | mahesh |

ಉಡುಪಿ: ಸರಕಾರದ ಹೊಸ ಮಾರ್ಗಸೂಚಿಯನ್ವಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ದೇಗುಲಗಳಿಂದ ನಡೆಯುತ್ತಿರುವ ಯಕ್ಷಗಾನ ಮೇಳಗಳನ್ನು ಆರಂಭಿಸುವ ಕುರಿತು ಚಿಂತನೆ ನಡೆಯುತ್ತಿದೆ. ಇತ್ತ ಕಲಾವಿದರು ಮಳೆಗಾಲದ ಯಕ್ಷಗಾನ ಸೇವೆಗೆ ಅನುಮತಿ ಸಿಗಬಹುದೇ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ.

Advertisement

ಹಿಂದೆ ಬುಕ್‌ ಮಾಡಲಾದ ಸೇವೆಗಳು ರದ್ದು
ಪ್ರತಿ ವರ್ಷ ನವೆಂಬರ್‌ನಿಂದ ಮೇ 25ರವರೆಗೆ ಒಟ್ಟು 206 ದಿನಗಳ ಕಾಲ ನಿರಂತರವಾಗಿ ಯಕ್ಷಗಾನ ಸೇವೆಗಳು ನಡೆಯುತ್ತವೆ.ಆದರೆ ಕೊರೊನಾ ಹಿನ್ನೆಲೆ ಯಲ್ಲಿ ಈ ಬಾರಿ ಯಕ್ಷಗಾನ ಸೇವೆ ಮಾರ್ಚ್‌ 22ಕ್ಕೆ ಸ್ಥಗಿತಗೊಂಡಿದ್ದು, ಈ ಹಿಂದೆ ಬುಕ್‌ ಮಾಡಲಾದ ಸೇವೆಗಳು ರದ್ದುಗೊಂಡಿದ್ದವು.

ಮನವಿ ಸಲ್ಲಿಕೆ
ಮಳೆಗಾಲದ ಸೇವೆ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಈ ಹಿಂದೆ ಮನವಿ ಸಲ್ಲಿಕೆಯಾಗಿದೆ. ಕೊರೊನಾದಿಂದ ರದ್ದುಗೊಂಡ ಯಕ್ಷಗಾನ ಸೇವೆ ಗಳಿಗೆ ಮೊದಲ ಆದ್ಯತೆ ನೀಡಲು ಮೇಳ ಗಳ ಮುಖ್ಯಸ್ಥರು ನಿರ್ಧರಿಸಿದ್ದಾರೆ. ಸರಕಾರದಿಂದ ಅನುಮತಿ ಸಿಕ್ಕಿದ ಕೂಡಲೇ ಕೋವಿಡ್‌ ನಿಯಮಾವಳಿ ಸುರಕ್ಷತಾ ಕ್ರಮ ಕೈಗೊಂಡು ಯಕ್ಷಗಾನ ಬಯಲಾಟ ನಡೆಸಲು ಉದ್ದೇಶಿಸಿದ್ದಾರೆ.

1,500 ಕಲಾವಿದರು ಅತಂತ್ರ
ಮಂದಾರ್ತಿ, ಅಮೃತೇಶ್ವರಿ, ಹಾಲಾಡಿ, ಶನೀಶ್ವರ, ಹಟ್ಟಿಯಂಗಡಿ, ಕಮಲಶಿಲೆ, ಹಿರಿಯಡ್ಕ ಮೇಳ ಸೇರಿದಂತೆ ಜಿಲ್ಲೆಯಲ್ಲಿ 24 ಯಕ್ಷಗಾನ ಮೇಳಗಳಿವೆ. ಇಲ್ಲಿ 1,500ಕ್ಕೂ ಅಧಿಕ ಮಂದಿ ಕಲಾವಿದರು ಕೆಲಸ ಮಾಡುತ್ತಾರೆ. ಇವರಲ್ಲಿ ಕೇವಲ ಯಕ್ಷಗಾನ ನಂಬಿಕೊಂಡಿರುವ ಅದೆಷ್ಟೋ ಕಲಾವಿದರು ಜೀವನೋಪಾಯಕ್ಕಾಗಿ ಪರದಾಡುತ್ತಿದ್ದಾರೆ.

1,500ಕ್ಕೂ ಅಧಿಕ ಸೇವೆಯಾಟಗಳು ಬಾಕಿ
ಮಂದಾರ್ತಿ ದೇವಸ್ಥಾನದಲ್ಲಿ ಐದು ಮೇಳಗಳಿದ್ದು, 250ಕ್ಕೂ ಅಧಿಕ ಕಲಾವಿದರು ಸೇವೆ ಸಲ್ಲಿಸುತ್ತಿದ್ದಾರೆ. ಮಾ. 22ರಿಂದ ಮೇ 25ರ ವರೆಗಿನ 64 ದಿನಗಳಲ್ಲಿ 320 ಸೇವೆ ಹಾಗೂ ಮಳೆಗಾಲದ 150 ಸೇವೆಗಳು ಸ್ಥಗಿತಗೊಂಡಿವೆ. ಜತೆಗೆ ಉಳಿದ (ಪೆರ್ಡೂರು-ಸಾಲಿಗ್ರಾಮ ಮೇಳ ಹೊರತುಪಡಿಸಿ) 21 ಮೇಳಗಳಲ್ಲಿ 1,530ಕ್ಕೂ ಅಧಿಕ ಬುಕ್ಕಿಂಗ್‌ ಆದ ಸೇವೆಯಾಟಗಳು ಬಾಕಿಯಾಗಿವೆ.

Advertisement

ಹೊಸ ಮಾರ್ಗಸೂಚಿಯಲ್ಲೇನಿದೆ?
ಸೆ. 21ರಿಂದ ಗರಿಷ್ಠ 100 ಜನರ ಪರಿಮಿತಿಗೆ ಒಳಪಟ್ಟು ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳು, ಇತರ ಸಭೆಗಳಿಗೆ ಅನುಮತಿ ನೀಡಿ ಕೇಂದ್ರ, ರಾಜ್ಯ ಸರಕಾರ ಹೊಸದಾಗಿ ಅವಕಾಶ ನೀಡಿದೆ. ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಥರ್ಮಲ್‌ ಸ್ಕ್ಯಾನಿಂಗ್‌ ಹಾಗೂ ಸ್ಯಾನಿಟೈಸರ್‌ ವ್ಯವಸ್ಥೆ ಕಡ್ಡಾಯ. ಇದೇ ನಿಯಮದಡಿ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ನಡೆಸಲ್ಪಡುವ ಮೇಳಗಳ ಯಕ್ಷಗಾನ ಸೇವೆ ಪ್ರಾರಂಭಿಸಲು ಮೇಳಗಳ ಮುಖ್ಯಸ್ಥರು ಜಿಲ್ಲಾಡಳಿತ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಮನವಿ ಮಾಡಿದ್ದೇವೆ
ಜಿಲ್ಲಾಡಳಿತಕ್ಕೆ ಮಳೆಗಾಲದ ಯಕ್ಷಗಾನ ಸೇವೆ ಪ್ರಾರಂಭಿಸಲು ಈಗಾಗಲೇ ಮನವಿ ಮಾಡಲಾಗಿದೆ. ಅನುಮತಿ ಬಂದ ಕೂಡಲೇ ಸರಕಾರದ ನಿಯಮಾವಳಿ ಅನ್ವಯ ಸೇವೆಯನ್ನು ಪ್ರಾರಂಭಿಸಲಾಗುತ್ತದೆ.
-ಧನಂಜಯ ಶೆಟ್ಟಿ, ಮಂದಾರ್ತಿ ದೇಗುಲದ ಆಡಳಿತ ಮುಖಸ್ಥರು.

ಮಾರ್ಗದರ್ಶಿ ಸೂತ್ರದ ನಿರೀಕ್ಷೆ
ಯಕ್ಷಗಾನ ಬಯಲಾಟ ನಡೆಸುವ ಕುರಿತು ಸರಕಾರದಿಂದ ಮಾರ್ಗದರ್ಶಿ ಸೂತ್ರವನ್ನು ನಿರೀಕ್ಷಿಸುತ್ತಿದ್ದೇವೆ.
– ಪಿ.ಕಿಶನ್‌ ಹೆಗ್ಡೆ, ಯಕ್ಷಗಾನ ಅಕಾಡೆಮಿ ಸದಸ್ಯರು, ಯಕ್ಷಗಾನ ಮೇಳಗಳ ಮುಖ್ಯಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next