Advertisement

ಕಾರಣ ಹೇಳದೆ ಹೋಗಿದ್ದು ಸರಿಯಾ?

12:30 AM Feb 05, 2019 | |

“ನಿನ್ನ ನೋಡದೆ ಅಳುವೇ ಬರುತಿದೆ..
ನಿನ್ನ ನಗುವಿಲ್ಲದೆ ಜಗ ನಿಂತಂತಿದೆ..’ 

 ಹೀಗೆ ನನ್ನ ಭಾವನೆಗಳನ್ನೆಲ್ಲ ಸಿನಿಮಾ ಹಾಡುಗಳ ಮೂಲಕ, ಅದೆಷ್ಟು ಬಾರಿ ನಿನ್ನೆಡೆಗೆ ಹರಿದು ಬಿಟ್ಟೆನೋ ಲೆಕ್ಕವೇ ಇಲ್ಲ. ನನ್ನ ಹೃದಯದಲ್ಲಿ ಭಾವನೆಗಳು ಎಂದೂ ಬತ್ತದ ಚಿಲುಮೆಯ ಹಾಗೆ. ಹಾಗೇನಾದರೂ ಬತ್ತಿದರೆ,  ಅಂದು ಹೃದಯ ಕೆಲಸ ನಿಲ್ಲಿಸಿರುತ್ತದೆ. ಇಂಥ ನೂರಾರು ಮಾತುಗಳು ನಮ್ಮ ನಡುವೆ ವಿನಿಮಯವಾಗಿವೆ. ಆದರೆ ಆ ಮಾತುಗಳಲ್ಲಿ ಹೆಚ್ಚಿನ ಪಾಲು ನನ್ನದೇ. ನೀನೋ, ಮಾತಾಡಿದರೆ ಮುತ್ತು ಉದುರುತ್ತದೆ ಎಂದು ಲೆಕ್ಕ ಮಾಡಿ ನಾಲ್ಕು ಮಾತಾಡುವ ಜಾಯಮಾನದವಳು. ನಾನೋ, ಮಾತನಾಡಲು ಶುರು ಮಾಡಿದರೆ ಎದುರಿನವರು “ಸಾಕು ನಿಲ್ಲಿಸು’ ಅನ್ನಬೇಕು; ಹಾಗೆ ಮಾತಾಡುವವನು.

Advertisement

ಎಲ್ಲ ಪ್ರೇಮಿಗಳ ಹಾಗೆ ನಾವು ಫೋನಿನಲ್ಲಿ ಗಂಟೆಗಟ್ಟಲೆ ಮಾತಾಡಲಿಲ್ಲ, ಸಿನಿಮಾ ಮಂದಿರದಲ್ಲಿ ಕೂತು ಪಿಸುಗುಡಲಿಲ್ಲ, ಕಾಫಿ ಡೇಯ ಕಪ್ಪುಗಳಿಗೆ ಮುತ್ತಿಕ್ಕಲೂ ಇಲ್ಲ. ನಮ್ಮಿಬ್ಬರ ಪ್ರೀತಿಯೇನೋ ಸರಳವಾಗಿಯೇ ಇತ್ತು. ಆದರೆ, ನೀ ವಿಧಿಸಿದ ಹಲವಾರು ಷರತ್ತುಗಳು ಅನ್ವಯಿಸುತ್ತಿದ್ದವು. ನಿನ್ನ ಹೃದಯದಲ್ಲಿ ಆಜೀವ ಸದಸ್ಯತ್ವ ಸಿಗುತ್ತದೆ ಎಂದಮೇಲೆ ಈ ಷರತ್ತುಗಳೆಲ್ಲ ಯಾವ ಲೆಕ್ಕ ಅನಿಸಿತ್ತು ಆಗ. ನಾವು ದೊಡ್ಡ ಯುದ್ಧ ಗೆಲ್ಲಬೇಕಾದರೆ, ಕೆಲವು ಚಿಕ್ಕ ಚಿಕ್ಕ ಯುದ್ಧಗಳನ್ನು ಸೋಲಬೇಕಂತೆ . ಹಾಗೆಯೇ ನಿನ್ನ ಹೃದಯದ ಅರಸನಾಗುವ ಆಸೆಯಿಂದ ನನ್ನ ಸಣ್ಣ ಸಣ್ಣ ಆಸೆಗಳನ್ನು ಬದಿಗೊತ್ತಿದ್ದೆ.

ಇದಕ್ಕಿಂತ ಹೆಚ್ಚಿಗೆ ಏನೂ ಹೇಳುವ ಅಗತ್ಯ ಇಲ್ಲ ಅಂದ್ಕೊತೀನಿ. ಯಾಕಂದ್ರೆ, ನೀನು ಎಲ್ಲದರ ಬಗ್ಗೆಯೂ ತಿಳ್ಕೊಂಡಿದ್ದೀಯಾ. ನನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ನಿನ್ನಲ್ಲಿದೆ. ಆ ವಿಷಯದಲ್ಲಿ ನಾನು ಅದೃಷ್ಟವಂತ. ಎಷ್ಟು ಅದೃಷ್ಟವಿದ್ದರೇನು, ನೀನೇ ಜೊತೆಯಲ್ಲಿ ಇಲ್ಲದಿರುವಾಗ… ಹೇಳು, ಯಾಕೆ ನನ್ನಿಂದ ದೂರಾದೆ? ನನ್ನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರೂ, ಬಿಟ್ಟು ಹೋಗುವ ನಿರ್ಧಾರವನ್ನೇಕೆ ಮಾಡಿದೆ. ಅದೂ, ಕಾರಣ ತಿಳಿಸದೆಯೇ?

ಕೊನೆಯದಾಗಿ ಕೇಳಿಕೊಳ್ಳುತ್ತಿದ್ದೇನೆ, ಮರಳಿ ಬಂದುಬಿಡು. 

ಈರಯ್ಯ ಉಡೇಜಲ್ಲಿ, ಹುಬ್ಬಳ್ಳಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next