ಮುಂಬೈ: ಒಂದು ವರ್ಷದ ಹಿಂದೆ ಆಂಗ್ಲರ ನೆಲದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಭಾರತ ಉತ್ತಮ ಅಭಿಯಾನವನ್ನೇ ಮಾಡಿತ್ತು. ಸೆಮಿ ಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಸೋಲನುಭವಿಸಿದ್ದ ವಿರಾಟ್ ಬಳಗ ರೌಂಡ್ ರಾಬಿನ್ ವಿಭಾಗದಲ್ಲಿ ಸೋಲನುಭವಿಸಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರ. ಅದು ಆತಿಥೇಯ ಆಂಗ್ಲರ ವಿರುದ್ಧ!
ರೌಂಡ್ ರಾಬಿನ್ ವಿಭಾಗದ ಅಂತಿಮ ಘಟ್ಟದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ನಡೆದಿತ್ತು. ಭಾರತ ಅದಾಗಲೇ ಮುಂದಿನ ಹಂತಕ್ಕೆ ತೇರ್ಗಡೆಯಾಗಿತ್ತು. ಆದರೆ ಇಂಗ್ಲೆಂಡ್ ಗೆ ಗೆಲುವು ಅನಿವಾರ್ಯವಾಗಿತ್ತು. ಆದರೆ ಪಾಕಿಸ್ಥಾನದ ಮುಂದಿನ ಹಂತದ ತೇರ್ಗಡೆಗೆ ಭಾರತದ ಗೆಲುವು ಅನಿವಾರ್ಯುವಾಗಿತ್ತು. ಹಾಗಾಗಿ ಭಾರತದ ಗೆಲುವಿಗೆ ಪಾಕ್ ಅಭಿಮಾನಿಗಳು ಹಾರೈಸಿದ್ದರು.
ಪಂದ್ಯದಲ್ಲಿ ಜಾನಿ ಬೆರಿಸ್ಟೋರ ಶತಕದ ಸಹಾಯದಿಂದ 337 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಆದರೆ ರೋಹಿತ್ ಶತಕ ಬಾರಿಸಿದರೂ 306 ರನ್ ಮಾತ್ರ ಗಳಿಸಲು ಶಕ್ತವಾಗಿತ್ತು. ಆ ಮೂಲಕ ಭಾರತ 31 ರನ್ ಗಳ ಸೋಲನುಭವಿಸಿತ್ತು. ಈ ಮೂಲಕ ಪಾಕಿಸ್ಥಾನ ಕೂಟದಿಂದ ಹೊರಬಿದ್ದಿತ್ತು.
ಆದರೆ ಪಾಕಿಸ್ಥಾನವನ್ನು ಹೊರಹಾಕಲು ಭಾರತ ಉದ್ದೇಶಪೂರ್ವಕವಾಗಿ ಸೋಲನುಭವಿಸಿತ್ತು ಎಂದು ಕೆಲವರು ಆರೋಪಿಸಿದ್ದರು. ಪಾಕ್ ಮಾಜಿ ಆಟಗಾರ ಅಬ್ದುಲ್ ರಜಾಕ್ ಈ ಬಗ್ಗೆ ಆರೋಪಿಸಿದ್ದರು.
ಸದ್ಯ ಈ ಬಗ್ಗೆ ಮಾತನಾಡಿದ ಆಕಾಶ್ ಚೋಪ್ರಾ, ನಾನು ಬೆನ್ ಸ್ಟೋಕ್ಸ್ ಜೊತೆ ಮಾತನಾಡಿದ್ದೇನೆ. ಅವರಿಗೂ ಭಾರತ ಬೇಕಂತಲೇ ಸೋಲನುಭವಿಸಿದೆ ಎಂದು ಅನ್ನಿಸಲಿಲ್ಲ. ಹೀಗೆ ಹೇಳಿಕೆ ನೀಡುವವರಿಗೆ ಐಸಿಸಿ ದಂಡ ಹಾಕಬೇಕು ಎಂದು ಚೋಪ್ರಾ ಹೇಳಿದ್ದಾರೆ.