Advertisement

ಇನ್ನಾದರೂ ಹೋಟೆಲ್‌ ತಿಂಡಿ ಅಗ್ಗವಾಗುತ್ತಾ?

10:38 AM Oct 08, 2017 | Team Udayavani |

ಬೆಂಗಳೂರು: ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಕೈಗೊಂಡ ನಿರ್ಧಾರದಿಂದ ರಾಜ್ಯದಲ್ಲೂ ಸಣ್ಣ ಹಾಗೂ ಮಧ್ಯಮ ವರ್ಗದ ವಹಿವಾಟುದಾರರು ಹಾಗೂ ಚಿನ್ನಾಭರಣ ಮಾರಾಟಗಾರರಲ್ಲಿ ವ್ಯಾಪಾರ ವೃದ್ಧಿಯ ಆಶಾಭಾವನೆ ಮೂಡಿಸಿದೆ.

Advertisement

ವಾರ್ಷಿಕ ವಹಿವಾಟು 1.50 ಕೋಟಿ ರೂ. ಮೀರದ ವ್ಯಾಪಾರಿಗಳಿಗೆ ಮಾಸಿಕ ರಿಟರ್ನ್ಸ್ ಸಲ್ಲಿಕೆ ಬದಲಿಗೆ ಮೂರು ತಿಂಗಳಿಗೊಮ್ಮೆ ರಿಟರ್ನ್ಸ್ ಸಲ್ಲಿಸಲು ಅವಕಾಶ ನೀಡಿರುವುದು ಹಾಗೂ ರಾಜಿ ತೆರಿಗೆ ಮಿತಿ 75 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ವಿಸ್ತರಿಸಿರುವುದು ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರು ಹಾಗೂ ಹೋಟೆಲ್‌ಗ‌ಳಿಗೆ ಒಂದಷ್ಟು ನಿರಾಳ ಮೂಡಿಸಿದೆ.

 50 ಸಾವಿರ ರೂ. ಚಿನ್ನ ಖರೀದಿಗೂ ಪ್ಯಾನ್‌ ಕಾರ್ಡ್‌ ಕಡ್ಡಾಯ ನಿಯಮ ಸಡಿಲಿಸಿರುವುದು ಚಿನ್ನಾಭರಣ ಮಾರಾಟಗಾರರಿಗೆ ಸಂತಸ ತಂದಿದೆ. ಏಕೆಂದರೆ ಈ ಕ್ರಮದಿಂದ ಜಿಎಸ್‌ಟಿ ಬಳಿಕ ಕುಸಿದಿದ್ದ ವ್ಯಾಪಾರದ ಪ್ರಮಾಣ ಶೇ.50ರಷ್ಟು ವೃದ್ಧಿಯ ನಿರೀಕ್ಷೆ ಚಿನ್ನಾಭರಣ ಮಾರಾಟಗಾರರದು. ಇದರ ಎಫೆಕ್ಟ್ ಶನಿವಾರದಿಂದಲೇ ಬೆಂಗಳೂರು ಸೇರಿ ರಾಜ್ಯದ ಕೆಲವು ಕಡೆ ಕಂಡು ಬಂದಿತು. ದೀಪಾವಳಿ ಹಬ್ಬ ಸಮೀಪ ಇರುವುದರಿಂದ ಸಾರ್ವಜನಿಕರು ಪ್ಯಾನ್‌ ಗೊಡವೆ ಇಲ್ಲದೆ ಚಿನ್ನಾಭರಣ ಖರೀದಿಗೆ ಮುಂದಾಗಬಹುದು ಎಂಬ ನಿರೀಕ್ಷೆ ಚಿನ್ನಾಭರಣ ಮಾರಾಟಗಾರರಲ್ಲಿ ಮೂಡಿದೆ.  ಈ ಮಧ್ಯೆ, ರಾಜಿ ತೆರಿಗೆ ಮಿತಿಯನ್ನು 75 ಲಕ್ಷ ರೂ. ನಿಂದ 1 ಕೋಟಿ ರೂ.ಗೆ ಏರಿಕೆ ಮಾಡಿರುವುದರಿಂದ ಈ ಮಿತಿಯೊಳಗೆ ಬರುವ ಹೋಟೆಲ್‌ಗ‌ಳಿಗೆ ತೆರಿಗೆ ಶೇ.12 ರಿಂದ 5ಕ್ಕೆ ಇಳಿಯಲಿದೆ. ಇದರ ಲಾಭ ಗ್ರಾಹಕರಿಗೂ ಸಿಗುವುದೇ ಎಂಬುದನ್ನೂ ಕಾದು ನೋಡಬೇಕಿದೆ. ಜತೆಗೆ ಹವಾನಿಯಂತ್ರಿತ ಹೋಟೆಲ್‌ಗ‌ಳ ತೆರಿಗೆ ಪ್ರಮಾಣವನ್ನು ಶೇ.18 ರಿಂದ ಶೇ.12ಕ್ಕೆ ಇಳಿಸುವ ಬಗ್ಗೆ ಸಮಿತಿ ರಚಿಸಿರುವುದೂ ಕೂಡ ಹೋಟೆಲ್‌ ಉದ್ಯಮದಲ್ಲಿ ತೆರಿಗೆ ಇಳಿಕೆಯ ಭರವಸೆ ಮೂಡಿಸಿದೆ.

ಜಿಎಸ್‌ಟಿ ಸಭೆಯಲ್ಲಿ ಸಾದಾ ಚಪಾಟಿ, ರೊಟ್ಟಿ, ಖಾಕ್ರಾ, ಕುರುಕಲು ಉತ್ಪನ್ನಗಳ ತೆರಿಗೆಯನ್ನು ಇಳಿಕೆ ಮಾಡಿರುವುದರಿಂದ ರಾಜ್ಯದಲ್ಲಿ ಆ ವಲಯದಲ್ಲಿ ತೊಡಗಿಸಿಕೊಂಡಿರುವ ವ್ಯಾಪಾರಿಗಳು, ಬಳಕೆದಾರರಿಗೆ ಉಪಯೋಗವಾಗಲಿದೆ.

ಇನ್ನೂ ಸಾಕಷ್ಟು ನಿರೀಕ್ಷೆ: ಇಷ್ಟಾದರೂ ಉತ್ಪಾದನಾ, ವಿತರಕ, ವ್ಯಾಪಾರ ವಲಯ ನಿರೀಕ್ಷೆ ಇನ್ನೂ ಸಾಕಷ್ಟಿದೆ. ಮುಖ್ಯವಾಗಿ ಜನ ಸಾಮಾನ್ಯರು ಬಳಸುವ ವಸ್ತುಗಳಿಗೆ ವಿಧಿಸಿರುವ ತೆರಿಗೆ ಇಳಿಕೆ ಇಲ್ಲವೇ ವಿನಾಯ್ತಿ ಸಿಗದಿರುವುದು ನಿರಾಸೆ ಮೂಡಿಸಿದೆ.

Advertisement

ಜನ ಸಾಮಾನ್ಯರು ದಿನನಿತ್ಯ ಬಳಸುವ ಆಹಾರ ಪದಾರ್ಥಗಳಿಗೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಆರಂಭದಲ್ಲಿ ಘೋಷಿಸಿದ್ದ ಕೇಂದ್ರ ಸರ್ಕಾರ ಬಳಿಕ ಬ್ರಾಂಡೆಡ್‌ ಆಹಾರ ಪದಾರ್ಥಗಳಿಗೆ ತೆರಿಗೆ ವಿಧಿಸಿತ್ತು. ನಂತರ 2017ರ ಮೇ 15ಕ್ಕೆ ಬ್ರಾಂಡ್‌ ನೋಂದಣಿಯಾದ ಆಹಾರ ಪದಾರ್ಥಗಳು, ಆ್ಯಕ್ಷನೆಬಲ್‌ ಕ್ಲೇಮ್‌ ಹಾಗೂ ಎಕ್ಸ್‌ಕ್ಲೂಸಿವಿಟಿ
ಉತ್ಪನ್ನವೆಂದು ಉತ್ಪಾದಕರು ಪರಿಗಣಿಸಿದ ಆಹಾರ ಪದಾರ್ಥಕ್ಕೂ ಶೇ.5ರಷ್ಟು ತೆರಿಗೆ ವಿಧಿಸಲಾಗಿದೆ.

ಇದರಿಂದ ಪರೋಕ್ಷವಾಗಿ ಬಹುತೇಕ ಆಹಾರ ಪದಾರ್ಥ ತೆರಿಗೆ ವ್ಯಾಪ್ತಿಗೆ ಒಳಪಡುವುದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ. ಇದರಿಂದ ಬ್ರಾಂಡ್‌ ರಹಿತ, ಗುಣಮಟ್ಟವೂ ಇಲ್ಲದ ಆಹಾರ ಪದಾರ್ಥಗಳಿಗಷ್ಟೇ ತೆರಿಗೆ ವಿನಾಯ್ತಿ ಎಂಬಂತಾಗಿದ್ದರೂ ಆರ್ಥಿಕವಾಗಿ ಹಿಂದುಳಿದವರು ಇಂತಹ ಪದಾರ್ಥ ಬಳಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಬಗ್ಗೆ ಜಿಎಸ್‌ಟಿ ಕೌನ್ಸಿಲ್‌ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂಬ ಮಾತುಗಳು
ಕೇಳಿಬರುತ್ತಿದೆ.

ಜಿಎಸ್‌ಟಿ ಕೌನ್ಸಿಲ್‌ನ 22ನೇ ಸಭೆಯಲ್ಲಿ 27 ಉತ್ಪನ್ನಗಳ ತೆರಿಗೆ ಪ್ರಮಾಣ ಇಳಿಕೆ ಮಾಡಿರುವುದರಿಂದ
ಅವಲಂಬಿತರು, ಸಾಮಾನ್ಯ ಜನರಿಗೆ ಅನುಕೂಲವಾಗಿದೆ. ರಿಟರ್ನ್ಸ್ ಸಲ್ಲಿಕೆಯನ್ನು ಮೂರು ತಿಂಗಳಿಗೊಮ್ಮೆ ಸಲ್ಲಿಸಲು ಅವಕಾಶ ನೀಡಿರುವುದರಿಂದ ಸಣ್ಣ, ಮಧ್ಯಮ
ವ್ಯಾಪಾರಿಗಳಿಗೆ ಉಪಯುಕ್ತವಾಗಲಿದೆ.
●ಕೆ.ರವಿ, ಎಫ್ಕೆಸಿಸಿಐ ಅಧ್ಯಕ್ಷ

ಗುಜರಾತ್‌, ರಾಜಸ್ಥಾನ ಇತರೆಡೆ ಯಷ್ಟೇ ಬಳಸುವ ಲಘು ಉಪಾಹಾರ ವೆನಿಸಿದ ಖಾಕ್ರಾಗೆ ವಿಧಿಸಿದ್ದ ತೆರಿಗೆ ಇಳಿಕೆ ಮಾಡಲಾಗಿದೆ. ದಕ್ಷಿಣ ಭಾರತ ರಾಜ್ಯಗಳ ಜನರ ಪ್ರಮುಖ ಆಹಾರವಾಗಿ ಬಳಕೆಯಾ ಗುವ ಅಕ್ಕಿಗೆ ಪರೋಕ್ಷವಾಗಿ ತಗಲುವ ತೆರಿಗೆ ಇಳಿಕೆಗೆ ಕೇಂದ್ರ ಗಮನ ಹರಿಸುತ್ತಿಲ್ಲ.
●ಶ್ರೀನಿವಾಸ್‌ ಎನ್‌. ರಾವ್‌, ರಾಜ್ಯ ಅಕ್ಕಿಗಿರಣಿದಾರರ ಸಂಘದ ಪ್ರ. ಕಾರ್ಯದರ್ಶಿ

ಸಾಮಾನ್ಯವಾಗಿ 15 ಗ್ರಾಂ ಚಿನ್ನದ ಮೌಲ್ಯ 50,000 ರೂ. ಮೀರುತ್ತದೆ. ಹೀಗಿರುವಾಗ 50,000 ರೂ.ಗಿಂತ ಹೆಚ್ಚು ಮೊತ್ತದ ಚಿನ್ನ ಖರೀದಿಗೆ ಪ್ಯಾನ್‌ ನೀಡಬೇಕೆಂಬ ನಿಯಮದಿಂದ ಗ್ರಾಹಕರಿಗೆ ತೊಂದರೆ ಯಾಗಿತ್ತು. ಇದೀಗ ನಿಯಮ ಕೈಬಿಟ್ಟಿರುವು ದಕ್ಕೆ ವಹಿವಾಟು ಚೇತರಿಕೆಯಾಗಬಹುದು.
●ಟಿ.ಎ.ಶರವಣ, ಕರ್ನಾಟಕ ಜುವೆಲ್ಲರಿ ಅಸೋಸಿಯೇಷನ್‌ ಅಧ್ಯಕ್ಷ

ಕೇಂದ್ರ ಸರ್ಕಾರವು ದೇಶದ ವ್ಯಾಪಾರಿ ಗಳು, ಜನತೆಗೆ ದೀಪಾವಳಿ ಉಡು ಗೊರೆ ನೀಡಿದೆ ಎಂಬುದು ಭ್ರಮೆ. ಚಿನ್ನ ಖರೀದಿಗೆ ಪ್ಯಾನ್‌ ಕಡ್ಡಾಯ ನಿಯಮ ಕೈಬಿಡುವ ಕೇಂದ್ರ ಸರ್ಕಾರ, ಬ್ರಾಂಡ್‌ಇಲ್ಲದೆ ಕಳಪೆ ಆಹಾರ ಪದಾರ್ಥ ಬಳಸುವಂತಾಗಿರುವ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
● ರಮೇಶ್‌ಚಂದ್ರ ಲಹೋಟಿ, ಬೆಂಗಳೂರು ಬೇಳೆಕಾಳು ವರ್ತಕರ ಸಂಘದ ಅಧ್ಯಕ್ಷ

ಜಿಎಸ್‌ಟಿ ಜಾರಿಯಾದ ನಂತರ ನೇಯ್ಗೆ ಉತ್ಪನ್ನಗಳ ವಹಿವಾಟು ಶೇ.30ರಷ್ಟು ಇಳಿಕೆಯಾಗಿದೆ. ಹಿಂದೆಲ್ಲ ರೇಷ್ಮೆ- ನೇಯ್ಗೆ ಉತ್ಪನ್ನಗಳ ವಹಿವಾಟು ಐದಾರು ಲಕ್ಷ ರೂ. ವರೆಗೆ ನಡೆಯುತ್ತಿದ್ದರೆ ಈಚಿನ ದಿನಗಳಲ್ಲಿ ನಿತ್ಯ ಒಂದು ಲಕ್ಷ ರೂ. ವ್ಯಾಪಾರವಾಗುವುದು ಕಷ್ಟವಾಗಿದೆ.
●ಟಿ.ವಿ.ಮಾರುತಿ, ಕರ್ನಾಟಕ ನೇಯ್ಗೆದಾರರ ಒಕ್ಕೂಟದ ಅಧ್ಯಕ್ಷ

ಎಂ.ಕೀರ್ತಿಪ್ರಸಾದ್‌  

Advertisement

Udayavani is now on Telegram. Click here to join our channel and stay updated with the latest news.

Next