Advertisement

Waqf Board ನೋಟಿಸ್‌ ನೀಡಲು ಅವರಪ್ಪನ ಮನೆ ಆಸ್ತಿಯಾ?: ಜೋಶಿ

02:44 AM Oct 29, 2024 | Team Udayavani |

ಹುಬ್ಬಳಿ: ಕಾಂಗ್ರೆಸ್‌ ಸರಕಾರ ಆಡಳಿತ ಇರುವೆಡೆ ವಕ್ಫ್ ಬೋರ್ಡ್‌ ಮೂಲಕ ಇದ್ದ ಬಿದ್ದ ಆಸ್ತಿಯನ್ನು ಕೆಲವರು ತಮ್ಮ ಹೆಸರಿಗೆ ಮಾಡಿಕೊಳ್ಳುವ ಕ್ರಿಮಿನಲ್‌ ತರಾತುರಿಯಲ್ಲಿದ್ದಾರೆ. ಇದನ್ನು ಬಿಜೆಪಿ ಗಟ್ಟಿಯಾಗಿ ಪ್ರಶ್ನೆ ಮಾಡದಿದ್ದರೆ ಕಾಂಗ್ರೆಸ್‌ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸುದ್ದಿಗಾರರ ಜತೆ ಹೇಳಿದರು. ವಕ್ಫ್  ಬೋರ್ಡ್‌ ನೋಟಿಸ್‌ ನೀಡುವುದಕ್ಕೆ ಇದೇನು ಅವರಪ್ಪನ ಮನೆ ಆಸ್ತಿಯಾ? ಎಂದು ಪ್ರಶ್ನಿಸಿದ್ದಾರೆ.

Advertisement

ವಕ್ಫ್ ಮಂಡಳಿಯಿಂದ ಲ್ಯಾಂಡ್‌ ಜೆಹಾದ್‌: ಆರ್‌. ಅಶೋಕ್‌
ರಾಜ್ಯ ಕಾಂಗ್ರೆಸ್‌ ಸರಕಾರ ಹಾಗೂ ವಕ್ಫ್ ಮಂಡಳಿಯಿಂದ ಲ್ಯಾಂಡ್‌ ಜೆಹಾದ್‌ ಆರಂಭವಾಗಿದ್ದು, ಬಡ ರೈತರ ಜಮೀನನ್ನು ಕಬಳಿಸಲು ಎಲ್ಲ ಬಗೆಯ ಪ್ರಯತ್ನ ಮಾಡಲಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ವಿಧಾನಸಭೆ ವಿಪಕ್ಷದ ನಾಯಕ ಆರ್‌. ಅಶೋಕ್‌ ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ಸರಕಾರ ಬಂದ ಅನಂತರ ಇಡೀ ಕರ್ನಾಟಕ ಒಂದೇ ಸಮುದಾಯಕ್ಕೆ ಸೇರಿದ್ದು ಎಂಬಂತೆ ಆಡುತ್ತಿದೆ. ಕಾಂಗ್ರೆಸ್‌ನ ತುಷ್ಟೀಕರಣದಿಂದಾಗಿ ಹಿಂದೂಗಳ ಮೇಲೆ ಹಲ್ಲೆಯಾಗಿದೆ. ಗಣೇಶ ವಿಸರ್ಜನೆಗೆ ಅವಕಾಶವಿಲ್ಲ. ಹಿಂದೂಗಳು ಜೈ ಶ್ರೀರಾಮ್‌ ಎನ್ನುವಂತಿಲ್ಲ. ಭದ್ರತೆಯೂ ಇಲ್ಲ. ಈಗ ವಿಜಯಪುರದ ಹೊನವಾಡ ಗ್ರಾಮದಲ್ಲಿ ಸುಮಾರು 12 ಸಾವಿರ ಹಾಗೂ ಇಡೀ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 15 ಸಾವಿರ ಎಕರೆ ಭೂಮಿ ಕಬಳಿಸಲು ವಕ#… ಬೋರ್ಡ್‌ ಯೋಜನೆ ರೂಪಿಸಿದೆ. ಇದಕ್ಕಾಗಿ ಕಂದಾಯ ಇಲಾಖೆಯಿಂದ 139 ರೈತರಿಗೆ ತಿಳಿವಳಿಕೆ ನೋಟಿಸ್‌ ನೀಡಲಾಗಿದೆ. ಇದು ಸ್ಪಷ್ಟವಾಗಿ ಸರ್ಕಾರದಿಂದಲೇ ನಡೆಯುತ್ತಿರುವ ಲ್ಯಾಂಡ್‌ ಜಿಹಾದ್‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಬಾಂಬ್‌ ಸ್ಫೋಟವಾಗುತ್ತದೆ, ಪಾಕಿಸ್ಥಾನಕ್ಕೆ ಜೈಕಾರ ಹಾಕಲಾಗುತ್ತದೆ, ಲವ್‌ ಜೆಹಾದ್‌ನಿಂದ ಹಿಂದೂ ಯುವತಿಯರು ಸಾಯುತ್ತಿದ್ದಾರೆ. ಈಗ “ಲ್ಯಾಂಡ್‌ ಜೆಹಾದ್‌’ ಕೂಡ ಆರಂಭವಾಗಿದೆ. ಕಳೆದ ತಿಂಗಳು ಜಿಲ್ಲೆಗೆ ಬಂದಿದ್ದ ಸಚಿವ ಜಮೀರ್‌ ಅಹ್ಮದ್‌, ಗೆಜೆಟ್‌ ಆಗಿರುವ ಆಸ್ತಿಗಳಲ್ಲಿ ವಕ#… ಆಸ್ತಿ ಎಂದು ನಮೂದಿಸಲು ಮೌಖೀಕ ಆದೇಶ ಮಾಡಿದ್ದಾರೆ ಎಂದು ದೂರಿದ್ದಾರೆ.

ಜಮೀರ್‌ ಆಧುನಿಕ ಟಿಪ್ಪು
ಒಂದು ಕಡೆ ಸಿಎಂ ಸಿದ್ದರಾಮಯ್ಯ ಮುಡಾ ನಿವೇಶನ ಲೂಟಿ ಮಾಡುತ್ತಾರೆ. ಮತ್ತೂಂದು ಕಡೆ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಸಿಎ ನಿವೇಶನ ಲೂಟಿ ಮಾಡುತ್ತದೆ. ಈಗ ಜಮೀರ್‌ ಅಹಮದ್‌ ಕೂಡ ಈ ಪಟ್ಟಿಗೆ ಸೇರಿ ಭೂಮಿ ಕೊಳ್ಳೆ ಹೊಡೆದು ವಕ್ಫ್ಗೆ ಸೇರಿಸಲು ತಂತ್ರ ಮಾಡಿದ್ದಾರೆ. ಅವರೊಂದು ರೀತಿಯಲ್ಲಿ ಆಧುನಿಕ ಟಿಪ್ಪು ಸುಲ್ತಾನ್‌ ಆಗಲು ಹೊರಟಿದ್ದಾರೆ. ಈ ರೀತಿಯಾದರೂ ಭೂಮಿ ಕಸಿದು, ಸಿಎಂ ಆಗುವ ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.

Advertisement

ಧಾರವಾಡದ ಮೂವರು ರೈತರ ಪಹಣಿಯಲ್ಲೂ ವಕ್ಫ್ ಆಸ್ತಿ!
ಪಿತ್ರಾರ್ಜಿತ ಆಸ್ತಿಯಲ್ಲೂ ವಕ್ಫ್ ಹೆಸರು ನಮೂದು
ಧಾರವಾಡ: ಪಿತ್ರಾರ್ಜಿತವಾಗಿ ಬಂದ ರೈತರ ಹೊಲಗಳ ಪಹಣಿಗಳಲ್ಲಿ ಇದೀಗ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಬೆಳಕಿಗೆ ಬಂದಿದ್ದು, ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಮೂರು ಕುಟುಂಬಗಳಲ್ಲಿ ಆತಂಕ ಸೃಷ್ಟಿಯಾಗಿದೆ.

ಜವಳಗಿ, ಮಸೂತಿ ಹಾಗೂ ಹುಟಗಿ ಎಂಬ ಕುಟುಂಬಕ್ಕೆ ಸೇರಿದ ಜಮೀನುಗಳು ಪಿತ್ರಾರ್ಜಿತವಾಗಿದ್ದು, ಅವುಗಳನ್ನು ಈ ರೈತರು ಯಾರಿಂದಲೂ ದಾನವಾಗಿ ಪಡೆದಿಲ್ಲ. ಆದರೂ ಈ 3 ಕುಟುಂಬಗಳಿಗೆ ಸಂಬಂಧಿಸಿದ 3 ಎಕರೆ, 5 ಎಕರೆ ಹಾಗೂ 20 ಎಕರೆ ಹೊಲಗಳ ಪಹಣಿ ಪತ್ರಿಕೆಯಲ್ಲಿ 2021, 2022 ಹಾಗೂ 2023ರಲ್ಲಿ ರೈತರ ಜಮೀನುಗಳು ವಕ್ಫ್ ಆಸ್ತಿಗೆ ಒಳಪಟ್ಟಿವೆ ಎಂದು ನಮೂದಾಗಿದೆ. ಇದೇ ಪಹಣಿ ಪತ್ರಿಕೆಯನ್ನು 2018, 2019ರಲ್ಲಿ ತೆಗೆದು ನೋಡಿದಾಗ ಅದರಲ್ಲಿ ವಕ್ಫ್ ಆಸ್ತಿ ಎಂದು ಇರಲಿಲ್ಲ. 2021, 2022ರಲ್ಲಿ ಈ ರೀತಿ ಪಹಣಿ ಪತ್ರಿಕೆಯ ಋಣಭಾರ ಕಾಲಂನಲ್ಲಿ ವಕ್ಫ್ ಆಸ್ತಿಗೆ ಜಮೀನು ಒಳಪಟ್ಟಿದೆ ಎಂದು ನಮೂದಾಗಿದೆ.

ಈ ಬಗ್ಗೆ ವಕ್ಫ್ ಮಂಡಳಿ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವ ಪ್ರಯೋಜನವೂ ಆಗಿಲ್ಲ ಎಂದು ಸಂತ್ರಸ್ತ ರೈತರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next