ಹೊಸದಿಲ್ಲಿ: ಪ್ರವಾಸಿ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿಗಳನ್ನು ಆಡುವ ಮೂಲಕ ಭಾರತ 2023ರ ಕ್ರಿಕೆಟ್ ಋತುವನ್ನು ಆರಂಭಿಸಲಿದೆ. ಇದಕ್ಕಾಗಿ ಮಂಗಳವಾರ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ನೂತನ ಆಯ್ಕೆ ಸಮಿತಿಯ ನೇಮಕ ವಿಳಂಬವಿರುವುದರಿಂದ ಚೇತನ್ ಶರ್ಮ ನೇತೃತ್ವದ ಆಯ್ಕೆ ಸಮಿತಿಯೇ ತಂಡಗಳನ್ನು ಹೆಸರಿಸಲಿದೆ ಎಂಬುದಾಗಿ ಬಿಸಿಸಿಐ ಈಗಾಗಲೇ ತಿಳಿಸಿದೆ.
ಫಾರ್ಮ್ ನಲ್ಲಿಲ್ಲದ, ಫಿಟ್‌ನೆಸ್ ಹೊಂದಿಲ್ಲದ ಹಾಗೂ ಹಿರಿಯ ಕ್ರಿಕೆಟಿಗರನೇಕರಿಗೆ ವಿಶ್ರಾಂತಿ ನೀಡುವುದು ಆಯ್ಕೆ ಸಮಿತಿಯ ಉದ್ದೇಶವಾಗಿದ್ದರೆ ಅಚ್ಚರಿ ಇಲ್ಲ. ಆಗ ರೋಹಿತ್ ಶರ್ಮ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಮೊದಲಾದವರೆಲ್ಲ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.
ಕಳೆದ ಟಿ20 ವಿಶ್ವಕಪ್ ವೈಫಲ್ಯವೂ ಆಯ್ಕೆ ಸಂದರ್ಭದಲ್ಲಿ ಗಣನೆಗೆ ಬರಲಿದೆ. ಮುಂದಿನ ವಿಶ್ವಕಪ್‌ಗೆ ಸಶಕ್ತ ಹಾಗೂ ಬಲಿಷ್ಠ ತಂಡವೊಂದನ್ನು ರಚಿಸುವ ಸಲುವಾಗಿ ಯುವಪಡೆಯೊಂದನ್ನು ಸಜ್ಜುಗೊಳಿಸಬೇಕಾದುದು ಅನಿವಾರ್ಯ. ಇದಕ್ಕೆ 2023ರ ಆರಂಭದಿಂದಲೇ . ಸಿದ್ಧತೆ ನಡೆಸುವ ಯೋಜನೆ ಬಿಸಿಸಿಐ ಮತ್ತು ಆಯ್ಕೆ ಸಮಿತಿಯದ್ದು. ಆಗ ಹಾರ್ದಿಕ್ ಪಾಂಡ್ಯ ಟಿ20 ತಂಡದ ಖಾಯಂ ನಾಯಕನಾಗಿ ನೇಮಿಸಲ್ಪಡುವ ಎಲ್ಲ ಸಾಧ್ಯತೆ ಇದೆ.
ಆರಂಭಿಕರ ಸ್ಥಾನಕ್ಕೆ ಇಶಾನ್ ಕಿಶನ್, ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್ ಆಯ್ಕೆ ಆಗಬಹುದು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಸಂಜು ಸ್ಯಾಮ್ಸನ್ ಕಾಣಿಸಿ ಕೊಳ್ಳಬಹುದು. ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಸವ್ಯಸಾಚಿಗಳು.
ವೇಗದ ಬೌಲಿಂಗ್ ವಿಭಾಗವನ್ನು ಮತ್ತೆ ಭುವನೇಶ್ವರ್ ಕುಮಾರ್ ಮುನ್ನಡೆಸಬಹುದು. ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ದೀಪಕ್ ಚಹರ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್ ಉಳಿದ ಪ್ರಮುಖರು. ಸ್ಪಿನ್ನಿಗೆ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಹಲ್ ಮೊದಲ ಆಯ್ಕೆಯಾಗಲಿದ್ದಾರೆ.
ಒಟ್ಟು 15 ಕ್ರಿಕೆಟಿಗರು ಟಿ20 ತಂಡಕ್ಕೆ ಬೇಕಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜ, ಜಸ್‌ಪ್ರೀತ್ ಬುಮ್ರಾ ಏಕದಿನ ಸರಣಿಗೆ ಆಯ್ಕೆ ಆಗಬಹುದು.