Advertisement

ಕೈಗೂಡುವುದೇ ಪಾಲ್ತಾಡಿ ನೂತನ ಗ್ರಾ.ಪಂ. ಬೇಡಿಕೆ?

11:42 AM Aug 12, 2018 | |

ಸವಣೂರು : ಸವಣೂರು ಗ್ರಾ.ಪಂ. ವ್ಯಾಪ್ತಿಕ್ಕೊಳಪಟ್ಟಿರುವ ಪಾಲ್ತಾಡಿ ಗ್ರಾಮವನ್ನು ಪ್ರತ್ಯೇಕ ಗ್ರಾ.ಪಂ. ಮಾಡಬೇಕು ಎನ್ನುವ ಬೇಡಿಕೆ ಈಡೇರುವುದೆಂದು? ಈ ಬಾರಿಯಾದರೂ ಈಡೇರಬಹುದು ಎನ್ನುವ ಆಶಾಭಾವನೆ ಪಾಲ್ತಾಡಿ ಗ್ರಾಮಸ್ಥರದ್ದು. ಕಳೆದ ಬಾರಿ ಗ್ರಾಮ ಪಂಚಾಯತ್‌ ಪುನರ್ವಿಂಗಡನೆ ಸಮಯದಲ್ಲಿಯೇ ಗ್ರಾಮಸ್ಥರಿಂದ ಪ್ರತ್ಯೇಕ ಗ್ರಾ.ಪಂ.ನ ಬೇಡಿಕೆ ವ್ಯಕ್ತವಾಗಿತ್ತು. ಬಳಿಕ ಗ್ರಾಮಸ್ಥರು ಕಂದಾಯ ಇಲಾಖೆಯ ಸಚಿವರಿಗೆ, ಗ್ರಾ.ಪಂ. ಪುನರ್‌ ವಿಂಗಡನ ಸಮಿತಿಗೆ, ಇಲಾಖೆಯ ನಿರ್ದೇಶಕರಿಗೂ ಮನವಿ ಸಲ್ಲಿಸಿದ್ದರು. ಆದರೆ ಪ್ರತ್ಯೇಕ ಗ್ರಾ.ಪಂ. ಕನಸು ಕನಸಾಗಿಯೇ ಉಳಿದಿದೆ.

Advertisement

580 ಕುಟುಂಬಗಳಿವೆ
ಪಾಲ್ತಾಡಿ ಗ್ರಾಮದ ಒಟ್ಟು ವಿಸ್ತೀರ್ಣ 2668.10 ಎಕರೆ ಆಗಿದ್ದು, ಒಟ್ಟು 580 ಕುಟುಂಬಗಳು ವಾಸ್ತ ವ್ಯ ವಿವೆ. 2011ರ ಜನಗಣತಿಯ ಪ್ರಕಾರ 2,838 ಜನಸಂಖ್ಯೆ ಇದೆ. ಇದರಲ್ಲಿ 753 ಪರಿಶಿಷ್ಟ ಜಾತಿ, 220 ಪರಿಶಿಷ್ಟ ಪಂಗಡ, 1,865 ಮಂದಿ ಇತರರು ಇದ್ದಾರೆ. 2,191 ಮಂದಿ ಮತದಾರರಿದ್ದಾರೆ. 2 ವಾರ್ಡ್‌ಗಳನ್ನು ಹೊಂದಿದ್ದು, 8 ಗ್ರಾ.ಪಂ. ಸದಸ್ಯರಿದ್ದಾರೆ.

ವಿವಿಧ ಸೌಕರ್ಯಗಳಿವೆ
ಪಾಲ್ತಾಡಿ, ಅಂಕತ್ತಡ್ಕ, ಮಂಜುನಾಥ ನಗರದಲ್ಲಿ ಸ.ಹಿ.ಪ್ರಾ. ಶಾಲೆ, ಚೆನ್ನಾವರದಲ್ಲಿ ಕಿ.ಪ್ರಾ. ಶಾಲೆ ಇದೆ. ಮಂಜುನಾಥ ನಗರದಲ್ಲಿ ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅಂಕತ್ತಡ್ಕ, ಮಂಜುನಾಥ ನಗರ, ಚೆನ್ನಾವರ, ಪಾಲ್ತಾಡಿ, ಉಪ್ಪಳಿಗೆಯಲ್ಲಿ ಅಂಗನವಾಡಿ ಕೇಂದ್ರಗಳಿವೆ. ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯೂ ಪಾಲ್ತಾಡಿಯ ಅಂಕತ್ತಡ್ಕದಲ್ಲಿ ಇದೆ.ಅಂಕತ್ತಡ್ಕದಲ್ಲಿ ಕೊಳ್ತಿಗೆ ಸಹಕಾರಿ ಸಂಘದ ಹಾಗೂ ಮಂಜುನಾಥನಗರದಲ್ಲಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ ಇದೆ.

ಸೂಕ್ತ ನಿವೇಶನವೂ ಇದೆ
ಚೆನ್ನಾವರ, ಅಂಕತ್ತಡ್ಕದಲ್ಲಿ ಮಸೀದಿ, ಮದ್ರಸ ಇವೆ. ಮಂಜುನಾಥ ನಗರ, ಪಾದೆಬಂಬಿಲ, ಅಲ್ಯಾಡಿಯ ಭಜನ ಮಂದಿರಗಳಿವೆ. ಮಂಜುನಾಥ ನಗರದಲ್ಲಿ ಸಿದ್ಧಿವಿನಾಯಕ ಸಭಾಭವನ ಹಾಗೂ ಸುವರ್ಣ ಗ್ರಾಮ ಯೋಜನೆಯಲ್ಲಿ ನಿರ್ಮಾಣಗೊಂಡ ಸಮುದಾಯ ಭವನವೂ ಇದೆ. ದೇವಸ್ಥಾನ, ದೈವಸ್ಥಾನಗಳಿದೆ. ಬಂಬಿಲ ಮತ್ತು ಉಪ್ಪಳಿಗೆಯಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘವಿದೆ. ಯುವಕ ಮಂಡಲ, ಯುವತಿ ಮಂಡಲ ಸಹಿತ ವಿವಿಧ ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳೂ ಇವೆ. ಗ್ರಾ.ಪಂ.ಗೆ ಸೂಕ್ತವಾದ ನಿವೇಶನವೂ ಪಾಲ್ತಾಡಿ ಗ್ರಾಮದಲ್ಲಿದೆ. ಒಟ್ಟಿನಲ್ಲಿ ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಿ ಮಾಡಬೇಕೆನ್ನುವ ಬೇಡಿಕೆ ಪ್ರಬಲವಾಗಿದೆ.

ಕೊನೆ ಘಳಿಗೆಯಲ್ಲಿ ಕೈತಪ್ಪಿತು
ಕಳೆದ ಬಾರಿ ಗ್ರಾ.ಪಂ. ಪುನರ್‌ ವಿಂಗಡನೆಯ ಸಂದರ್ಭ ಪಾಲ್ತಾಡಿ ಗ್ರಾ.ಪಂ. ಅನ್ನು ನೂತನ ಗ್ರಾ.ಪಂ. ಆಗಿ ಮಾಡಬೇಕೆನ್ನುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಲಾಗಿದೆ. ಕೊನೆ ಗಳಿಗೆಯಲ್ಲಿ ಕೆಲ ವ್ಯತ್ಯಾಸಗಳಿಂದ ತಪ್ಪಿ ಹೋಯಿತು. ಮುಂದಿನ ಬಾರಿಯಾದರೂ ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಿ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎ.ಎಸ್‌. ರಝಾಕ್‌ ಅಂಕತ್ತಡ್ಕ ಹೇಳಿದ್ದಾರೆ.

Advertisement

ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಬೇಕೆಂಬ ನಿಟ್ಟಿನಲ್ಲಿ ಗ್ರಾ.ಪಂ. ಸಾಮಾನ್ಯ ಸಭೆ, ಗ್ರಾಮ ಸಭೆಗಳಲ್ಲಿ ಪ್ರಸ್ತಾವಿಸಲಾಗಿದೆ. ಈ ಕುರಿತು ಶಾಸಕರೂ ಮುತುವರ್ಜಿ ವಹಿಸಬೇಕಿದೆ ಎಂದು ಸವಣೂರು ಗ್ರಾ.ಪಂ. ಸದಸ್ಯ ಸತೀಶ್‌ ಅಂಗಡಿಮೂಲೆ ಅವರು ಒತ್ತಾಯಿಸಿದ್ದಾರೆ

ನಿರ್ಣಯ ಮಾಡಿ ಕಳುಹಿಸಲಾಗಿದೆ
ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಮಾಡಬೇಕೆನ್ನುವ ಕೂಗು ಈ ಹಿಂದಿನಿಂದಲೂ ಇದೆ. ಜನರ ಬೇಡಿಕೆಯನ್ನು ಗ್ರಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲಾಗಿದೆ.
ಇಂದಿರಾ ಬಿ.ಕೆ.
ಸವಣೂರು ಗ್ರಾ.ಪಂ. ಅಧ್ಯಕ್ಷೆ 

ಎಲ್ಲ ಅರ್ಹತೆ ಇದೆ
ಅಭಿವೃದ್ಧಿ ದೃಷ್ಟಿಯಿಂದ ಪಾಲ್ತಾಡಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಿ ಮಾಡಬೇಕು. ಗ್ರಾ.ಪಂ. ಆಗಿ ರೂಪುಗೊಳ್ಳಲು ಎಲ್ಲ ಅರ್ಹತೆಗಳು ಪಾಲ್ತಾಡಿ ಗ್ರಾಮಕ್ಕಿದೆ. ಈ ಕುರಿತು ಪ್ರಯತ್ನಗಳನ್ನು ಮಾಡಬೇಕಿದೆ.
 - ಬಿ.ಕೆ. ರಮೇಶ್‌
ಸ್ಥಾಪಕಾಧ್ಯಕ್ಷರು, ಭಾರತಿ ಗ್ರಾಮ
ವಿಕಾಸ ಪ್ರತಿಷ್ಠಾನ ಪಾಲ್ತಾಡಿ

Advertisement

Udayavani is now on Telegram. Click here to join our channel and stay updated with the latest news.

Next