Advertisement

“ಕೈ’ಕಲಹ ನಿರ್ವಹಣೆಯಲ್ಲಿ  ರಾಜ್ಯ ನಾಯಕತ್ವ  ವೈಫ‌ಲ್ಯ

12:48 AM Jan 21, 2019 | Team Udayavani |

ಬೆಂಗಳೂರು: “ಆಪರೇಷನ್‌ ಕಮಲ’ದಡಿ ಬಿಜೆಪಿ ನಾಯಕರ ಜತೆ ಕಾಂಗ್ರೆಸ್‌ ಶಾಸಕರ ಸಂಪರ್ಕ, ರೆಸಾರ್ಟ್‌ನಲ್ಲಿ ಶಾಸಕರಿಬ್ಬರ ಹೊಡೆದಾಟ ಸಹಿತ ಇತ್ತೀಚಿನ ಬೆಳವಣಿಗೆಗಳನ್ನು ನಿಭಾಯಿಸುವಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕತ್ವ ವಿಫ‌ಲವಾಗಿರುವ ಬಗ್ಗೆ ಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗುತ್ತಿದೆ.

Advertisement

ಘಟಾನುಘಟಿ ನಾಯಕರಿದ್ದರೂ 80 ಶಾಸಕರನ್ನು ನಿಭಾಯಿಸಲು ತಿಣುಕಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಜತೆಗೆ ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್‌ ಗುಂಡೂರಾವ್‌ ನೇಮಕಗೊಂಡ ಅನಂತರ ಕೆಲವರ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದ್ದು, ಹೈಕಮಾಂಡ್‌ವರೆಗೂ ದೂರು ಹೋಗಿದೆ ಎಂದು ತಿಳಿದು ಬಂದಿದೆ.

ದಿನೇಶ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಣತಿಯಂತೆ ನಡೆಯುತ್ತಿದ್ದಾರೆಂದು ಡಿಸಿಎಂ ಪರಮೇಶ್ವರ್‌, ಸಚಿವ ಡಿಕೆಶಿ ಸೇರಿ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಕಾರ್ಯಾಧ್ಯಕ್ಷ ರಾದ ಅನಂತರ ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಸಂದರ್ಭ ರಮೇಶ್‌ ಜಾರಕಿಹೊಳಿ -ಲಕ್ಷ್ಮೀ ಹೆಬ್ಟಾಳ್ಕರ್‌ ಪ್ರಕರಣವನ್ನು ಸರಿಯಾಗಿ ನಿಭಾಯಿಸದೆ ಇದ್ದದ್ದು ಪರಿಸ್ಥಿತಿ ತಾರಕಕ್ಕೇರಲು ಕಾರಣ ವಾಯಿತು. ಅಲ್ಲಿಂದ ಪ್ರಾರಂಭವಾದ ಘರ್ಷಣೆ ಸಮ್ಮಿಶ್ರ ಸರಕಾರವನ್ನು ಅಲುಗಾಡಿಸುವ ಮಟ್ಟಕ್ಕೆ ಬಂದು ನಿಂತಿದೆ ಎಂಬ ಮಾತಿದೆ.

ಮುಸುಕಿನ ಗುದ್ದಾಟ
ಈ ಮಧ್ಯೆ ಈಶ್ವರ್‌ ಖಂಡ್ರೆ ಅವರನ್ನು ಕಾರ್ಯಾಧ್ಯಕ್ಷ ರನ್ನಾಗಿ ನೇಮಿಸಲಾಯಿತು. ದಿನೇಶ್‌-ಖಂಡ್ರೆ ನಡುವೆ ಹೊಂದಾಣಿಕೆ ಇಲ್ಲ ಎನ್ನಲಾಗುತ್ತಿದೆ.ಅಧಿಕಾರ ಸ್ವೀಕರಿಸಿ 6 ತಿಂಗಳು ಕಳೆದರೂ ಅವರು ಜತೆಯಾಗಿ ಜಿಲ್ಲಾ ಪ್ರವಾಸ ಮಾಡಿಲ್ಲ. ಇಬ್ಬರೂ ಸೇರಿ ಪತ್ರಿಕಾಗೋಷ್ಠಿ ಮಾಡದೆ ಇರುವುದು ಅವರಿಬ್ಬರ ಮುಸುಕಿನ ಗುದ್ದಾಟಕ್ಕೆ ಸಾಕ್ಷಿ ಎನ್ನಲಾಗಿದೆ.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ದಿನೇಶ್‌ ಗುಂಡೂ ರಾವ್‌ ಸಕ್ರಿಯ ಕೆಲಸ ಮಾಡಿದ್ದರೂ ಅಧ್ಯಕ್ಷರಾದ ಮೇಲೆ ಬೆಂಗಳೂರಿನಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆಂಬ ದೂರೂ ಇದೆ. ಲೋಕಸಭೆ ಚುನಾವಣೆಯನ್ನು ಜೆಡಿಎಸ್‌ ಜತೆ ಸೇರಿ  ಎದುರಿಸಲು ನಿರ್ಧರಿಸಿರುವುದರಿಂದ, ಕಾಂಗ್ರೆಸ್‌ ಉ.ಕರ್ನಾಟಕ ಭಾಗದಲ್ಲಿ ಬಿಜೆಪಿ ಜತೆ ಸ್ಪರ್ಧೆ ಮಾಡಬೇಕಿರುವುದರಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಬಹುದು. ಈಶ್ವರ್‌ ಖಂಡ್ರೆಗೂ ಅವಕಾಶ ಒಲಿಯಬಹುದು ಎಂಬ ಮಾತು ಕೇಳಿ ಬರುತ್ತಿದೆ.

 ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next