Advertisement

ಪೂರ್ಣಗೊಂಡೀತೇ  ದಶಕದ ಕಾಮಗಾರಿ

10:42 AM Feb 25, 2019 | |

ಗಜೇಂದ್ರಗಡ: ಬರದ ನಾಡಿಗೆ ಭಗೀರಥವಾಗಬೇಕಿದ್ದ ಜಿಲ್ಲೆಯ ಮಹತ್ವಾಕಾಂಕ್ಷೆಯ ಜಿಗಳೂರ ಶಾಶ್ವತ ಕುಡಿಯುವ ನೀರಿನ ಯೋಜನೆ ಈ ವರ್ಷವೂ ಪೂರ್ಣಗೊಳ್ಳದೇ, ಕಳೆದ ಒಂಬತ್ತು ವರ್ಷಗಳಿಂದ ಯೋಜನೆಗೆ ಗ್ರಹಣ ಹಿಡಿದಿದೆ.

Advertisement

ರೋಣ ತಾಲೂಕಿನ ಜಿಗಳೂರ ಗ್ರಾಮದ ಬಳಿ 310 ಎಕರೆ ವಿಸ್ತೀರ್ಣ ಜಮೀನಿನಲ್ಲಿ 115 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಕೇಂದ್ರ ಪರಿಷ್ಕೃತ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೋಣ, ಗಜೇಂದ್ರಗಡ, ನರೇಗಲ್‌ ಸೇರಿ ಸುತ್ತಲಿನ 7 ಹಳ್ಳಿಗಳಿಗೆ ಮಲಪ್ರಭಾ ನದಿ ಬಲದಂಡೆ ಕಾಲುವೆಯಿಂದ ನೀರು ಪೂರೈಸುವ ಶೇಖರಣಾ ಜಲ ಸಂಗ್ರಹಾಗಾರ ಕಾಮಗಾರಿ ಆರಂಭಗೊಂಡು ದಶಕ ಸಮೀಪಿಸಿದರೂ ಇನ್ನೂ ಮುಗಿದೇ ಇಲ್ಲ.

ಸರ್ಕಾರದ ಮಹತ್ವಾಕಾಂಕ್ಷೆ ಹಾಗೂ ಜಿಲ್ಲೆಯಲ್ಲೇ ದೊಡ್ಡದಾದ ಬೃಹತ್‌ ಕೆರೆ ನಿರ್ಮಾಣ ಕಾಮಗಾರಿ ಇದಾಗಿದ್ದು, 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ, ಅಂದಿನ ಸಚಿವ, ಈಗಿನ ಶಾಸಕ ಕಳಕಪ್ಪ ಬಂಡಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಬದಲಾದ ರಾಜಕಿಯ ಬೆಳವಣಿಗೆ ಯೋಜನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕಾಮಗಾರಿ ಅರ್ಥದಲ್ಲೇ ಸ್ಥಗಿತಗೊಂಡಿತ್ತು. 

ಗಜೇಂದ್ರಗಡ, ನರೇಗಲ್ಲ ಎರಡು ಪಟ್ಟಣ ಹಾಗೂ ಮಾರ್ಗ ಮಧ್ಯದ ಹೊಸಳ್ಳಿ, ಸೂಡಿ, ರಾಜೂರ, ದಿಂಡೂರು, ಜಿಗಳೂರ, ಬೂದಿಹಾಳ, ಜಕ್ಕಲಿ ಗ್ರಾಮಗಳಿಗಷ್ಟೇ ಬಿಜೆಪಿ ಸರಕಾರದ ಅವಧಿಯ ಉದ್ದೇಶಿತ ಈ ಯೋಜನೆ ಸೀಮಿತವಾಗಿತ್ತು. ನಂತರ ಬಂದ ಕಾಂಗ್ರೆಸ್‌ ಶಾಸಕ ಜಿ.ಎಸ್‌ ಪಾಟೀಲ ರೋಣ ಪಟ್ಟಣವನ್ನು ಸೇರ್ಪಡೆ ಮಾಡಿ ಯೋಜನೆಗೆ ಹೆಚ್ಚುವರಿಯಾಗಿ 40 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆಗೊಳಿಸಿ ಸ್ಥಗಿತಗೊಂಡಿದ್ದ ಕಾಮಗಾರಿಗೆ ಮತ್ತೇ ಚಾಲನೆ ದೊರೆತರೂ ಇನ್ನೂ ಕುಂಟುತ್ತಾ ಸಾಗಿದೆ. ಯೋಜನೆಗೆ ಒಳಪಡುವ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಸವದತ್ತಿ ತಾಲೂಕಿನ ನವಿಲು ತೀರ್ಥನಿಂದ ನರಗುಂದ ಮಾರ್ಗವಾಗಿ ಹೊನ್ನಾಪುರ ಗ್ರಾಮ ಮೂಲಕ ರೋಣ ತಾಲೂಕು ಪ್ರವೇಶಿಸುವ ಮಲಪ್ರಭಾ ಮುಖ್ಯ ನಾಲೆ ಕದಡಿ, ಬೆಳವಣಿಕಿ, ಸವಡಿ, ರೋಣ ಮೂಲಕ 310 ಎಕರೆ ವಿಸ್ತಿರ್ಣದ ಬೃಹತ್‌ ಕೆರೆ ಸೇರಲಿದೆ. ಬಳಿಕ ನೀರು ಶುದ್ಧೀಕರಿಸಿ ಪೈಪ್‌ಲೈನ್‌ ಮೂಲಕ ನೀರು ಪೂರೈಸಲಾಗುವುದು. ಈಗಾಗಲೇ ಗಜೇಂದ್ರಗಡ ಪಟ್ಟಣದಲ್ಲಿ 5 ಲಕ್ಷ ಲೀಟರ್‌ ಸಾಮರ್ಥ್ಯದ 2 ಓವರ್‌ಹೆಡ್‌ ಟ್ಯಾಂಕ್‌ ಗಳು, ರೋಣದಲ್ಲಿ 10 ಲಕ್ಷ ಸಾಮರ್ಥ್ಯದ ಓವರ್‌ ಹೆಡ್‌ ಟ್ಯಾಂಕ್‌ಗಳು ಮತ್ತು ನರೇಗಲ್‌ನಲ್ಲಿ 2 ಜಲ ಸಂಗ್ರಹಾಗಾರಗಳನ್ನು ನಿರ್ಮಿಸಲಾಗಿದೆ.

ಕಾಲಮಿತಿ ತಪ್ಪಿದ ಯೋಜನೆ
ಕಳೆದ ನಾಲ್ಕೈದು ವರ್ಷಗಳಿಂದ ಮಳೆಯ ಪ್ರಮಾಣ ಈ ಭಾಗದಲ್ಲಿ ಗಣನೀಯವಾಗಿ ಕುಸಿತ ಕಂಡಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರ ಎದುರಿಸಲಾಗುತ್ತಿದೆ. ಇದನ್ನು ಹೋಗಲಾಡಿಸಿ ಬರದ ನಾಡಿಗೆ ಶಾಶ್ವತ ನೀರು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆ ಆರಂಭವಾಗಿ ಒಂಭತ್ತು ವರ್ಷ ಗತಿಸಿದರೂ, ಯೋಜನೆಯ ಮುಖ್ಯ ಘಟ್ಟವಾದ ನೀರು ಶುದ್ಧೀಕರಣ, ಪಂಪಿಂಗ್‌ ಸೇರಿ ಹಲವು ಯಂತ್ರಗಳನ್ನು ಇನ್ನೂ ಅಳವಡಿಸಿಲ್ಲ. ಯೋಜನೆ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಕಾಲಮಿತಿ ನಿಗದಿಗೊಳಿಸದೇ, ತಮಗೆ ತೋಚಿದಂತೆ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿರುವುದರಿಂದ ಪ್ರಸಕ್ತ ವರ್ಷ ಬೇಸಿಗೆಯಲ್ಲೂ ಕುಡಿಯುವ ನೀರಿನ ಸಮಸ್ಯೆ ತೀವ್ರತರವಾಗಿ ಉಲ್ಬಣಿಸುವುದರಲ್ಲಿ ಸಂದೇಹವೇ ಇಲ್ಲ.

Advertisement

ಸಾರ್ವಜನಿಕರಿಂದ ಹೋರಾಟ ಎಚ್ಚರಿಕೆ
ರಾಜಕೀಯ ದಾಳವಾಗಿ ಬಳಸಿಕೊಂಡು ಯೋಜನೆಯನ್ನು ನನೆಗುದಿಗೆ ತಳ್ಳಲ್ಪಟ್ಟಿರುವ ಜಿಗಳೂರು ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಬಗ್ಗೆ ಹೇಳ್ಳೋರಿಲ್ಲ. ಕೇಳ್ಳೋರಿಲ್ಲ ಎನ್ನುವಂತಾಗಿ ನಡೆಯುತ್ತಿರುವುದು ಖಂಡನೀಯ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಲಮಿತಿ ನಿಗದಿಪಡಿಸಿ, ಯೋಜನೆ ಪೂರ್ಣಗೊಳಿಸದಿದ್ದರೆ ಯೋಜನೆ ವ್ಯಾಪ್ತಿಗೊಳಪಡುವ ಪಟ್ಟಣಗಳು ಮತ್ತು ಗ್ರಾಮಗಳನ್ನೊಳಗೊಂಡು ಉಗ್ರ ಹೋರಾಟ ಮಾಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ .

ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಸರ್ಕಾರ ಇದೆಯೋ ಇಲ್ಲವೋ ಎನ್ನುವಂತಾಗಿದೆ. ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷಿಸುತ್ತಿದ್ದು, ಯಾವುದೇ ಕೆಲಸಗಳು ಆಗುತ್ತಿಲ್ಲ. ಹೀಗಾಗಿ ಬರಗಾಲದಲ್ಲಿ ಜನರಿಗೆ ನೀರು ಕೊಡದಂತಾಗಿದೆ.
 ಕಳಕಪ್ಪ ಬಂಡಿ, ಶಾಸಕ

ಜಿಗಳೂರ ಗ್ರಾಮ ಬಳಿಯ ಶಾಶ್ವತ ಕುಡಿಯುವ ನೀರಿನ ಯೋಜನೆ ಅಂತಿಮ ಹಂತ ತಲುಪಿದ್ದು, ಸಿವಿಲ್‌ ವರ್ಕ್‌ ಜೊತೆಗೆ ಪಂಪಿಂಗ್‌ ಮಿಷನರಿಗೆ ಟೆಂಡರ್‌ ಕರೆಯಲಾಗಿದೆ. ಯೋಜನೆ ಪೂರ್ಣಗೊಳ್ಳಲು ಇನ್ನೂ 14 ಕೋಟಿ ಅನುದಾನ ಕೊರತೆ ಇದೆ. ಹೀಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 
ಕರಿಸಿದ್ದಪ್ಪ, ಸಹಾಯಕ ಅಭಿಯಂತರ 

ಯಾವೊಂದು ಕಾಲಮಿತಿ ಇಲ್ಲದೇ, ಹಲವು ವರ್ಷಗಳಿಂದ ಕುಂಟುತ್ತ ಸಾಗಿರುವ ಶಾಶ್ವತ ಕುಡಿಯುವ ನೀರಿನ ಯೋಜನೆ ಈವರೆಗೂ ಪೂರ್ಣಗೊಳಿಸಿಲ್ಲ. ಈ ಬಾರಿಯ ಬೇಸಿಗೆಯಲ್ಲದರೂ ಈ ಯೋಜನೆ ಪೂರ್ಣಗೊಳ್ಳಬೇಕಿತ್ತು. ಜನಪ್ರತಿನಿಧಿಗಳು ಸಂಪೂರ್ಣ ವಿಫಲವಾಗಿದ್ದಾರೆ.
 ಎಂ.ಎಸ್‌ ಹಡಪದ, ಸಿಪಿಐಎಂ ಮುಖಂಡ

ಡಿ.ಜಿ ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next