ಚೆನ್ನೈ : ದಾಕ್ಷಿಣಾತ್ಯ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎನಿಸಿಕೊಂಡಿರುವ ಬಾಹುಬಲಿ ಖ್ಯಾತಿಯ ಜನಪ್ರಿಯ ನಟ ಪ್ರಭಾಸ್ ಈ ವರ್ಷಾಂತ್ಯ ಮದುವೆಯಾಗಲಿದ್ದಾರೆಯೇ ? ಈ ಬಗ್ಗೆ ಅವರ ಕುಟುಂಬ ಮೂಲಗಳಿಂದ ಸುದ್ದಿಗಳು ಕೇಳಿಬರುತ್ತಿವೆ.
ವಿಶೇಷವೆಂದರೆ ಪ್ರಭಾಸ್ ಅವರು ತಮ್ಮ ಜೀವನ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಲ್ಲ; ಬದಲು ಅವರ ಹೆತ್ತವರು ಆಯ್ಕೆ ಮಾಡಿರುವ ಹುಡುಗಿಯನ್ನು ಅವರು ಕೈಹಿಡಿಯಲಿದ್ದಾರೆ; ಈ ವರ್ಷಾಂತ್ಯ ಪ್ರಭಾಸ್ ಮದುವೆ ನಡೆಯಲಿದೆ ಎಂದು ಕೇಳಿಬಂದಿದೆ.
ಪ್ರಭಾಸ್ ಈ ಹಿಂದೆ ಎಂದೂ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದವರಲ್ಲ. ಮದುವೆಯ ವಿಷಯವನ್ನು ಅವರು ಎಂದೂ ಎತ್ತುತ್ತಿರಲಿಲ್ಲ. ಇದೀಗ ಪ್ರಭಾಸ್ ಮದುವೆಯಾಗುವುದಕ್ಕೆ ಒಪ್ಪಿರುವುದು ತನ್ನ ಹೆತ್ತವರ ಒತ್ತಾಯಕ್ಕೆ ಮಣಿದು ಎಂದು ಹೇಳಲಾಗಿದೆ.
ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷೆಯ “ಬಾಹುಬಲಿ 2 – ದಿ ಕನ್‌ಕ್ಲೂಶನ್’ ಚಿತ್ರ ಬಿಡುಗಡೆ ಇದೀಗ ಸನ್ನಿಹಿತವಾಗಿರುವುದರಿಂದ ಪ್ರಭಾಸ್ ತನ್ನ ಮದುವೆಯ ಕುರಿತಾಗಿ ಮಾತನ್ನೇ ಆಡುತ್ತಿಲ್ಲ. ಕಾರಣ ತನ್ನಿಂದಾಗಿ ಚಿತ್ರದ ಫೋಕಸ್ ಬೇರೆಡೆಗೆ ಹರಿಯುವುದು ಅವರಿಗೆ ಇಷ್ಟವಿಲ್ಲ.
ಕಳೆದ ವರ್ಷ ಬಾಹುಬಲಿ ಚಿತ್ರದಲ್ಲಿನ ತನ್ನ ಸಹ ನಟ ರಾಣಾ ದಗ್ಗುಬತಿ ಅವರು ತನ್ನ ಸ್ನೇಹಿತನಿಗೆ ವಧುವನ್ನು ಹುಡುಕಲು ನೆರವಾಗುವುದಕ್ಕಾಗಿ ವೈವಾಹಿಕ ಜಾಹೀರಾತೊಂದನ್ನು ಪ್ರಕಟಿಸಿ ತಮ್ಮ ಲಕ್ಷಾಂತರ ಅಭಿಮಾನಿಗಳಿಗೆ ಅಚ್ಚರಿ ಉಂಟುಮಾಡಿದ್ದರು.
ಅಂದ ಹಾಗೆ ಕೊನೇ ಮಾತು : ಪ್ರಭಾಸ್ ಈ ವರ್ಷಾಂತ್ಯದಲ್ಲಿ ಮದುವೆ ಆಗುವರೇ ಇಲ್ಲವೇ ಎಂಬುದನ್ನು ಈಗಿನ್ನು ಸಮಯವೇ ಉತ್ತರಿಸಲಿದೆ !