ಮೈಸೂರು: ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ನಗರದ ಇರ್ವಿನ್ ರಸ್ತೆ ಅಗಲೀಕರಣ ಮಾಡಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಮೇಯರ್ ಹಾಗೂ ಪಾಲಿಕೆ ಅಧಿಕಾರಿಗಳು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು. ನಗರದ ಲಷ್ಕರ್ ಪೊಲೀಸ್ ಠಾಣೆ ಬಳಿಯಿಂದ ಆಯುರ್ವೇದ ವೃತ್ತದವರೆಗೆ ಕಾಲ್ನಡಿಗೆ ಮೂಲಕ ತೆರಳಿದ ಮೇಯರ್ ಎಂ.ಜೆ.ರವಿಕುಮಾರ್ ಹಾಗೂ ಪಾಲಿಕೆ ಆಯುಕ್ತ ಜಗದೀಶ್, ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅವಕಾಶ ಕಲ್ಪಿಸುವಂತೆ ಸ್ಥಳೀಯ ವ್ಯಾಪಾರಿಗಳು, ಅಂಗಡಿ ಮಾಲೀಕರನ್ನು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೇಯರ್ ಹಾಗೂ ಪಾಲಿಕೆ ಆಯುಕ್ತರ ಮನವಿಗೆ ಸ್ಪಂದಿಸಿದ ಕೆಲವರು, ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿದರೆ, ಕೆಲವು ನಿವಾಸಿಗಳು ಮಾತ್ರ ರಸ್ತೆ ಅಗಲೀಕರಣ ಮಾಡುವ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಸ್ತೆ ಅಗಲೀಕರಣ ಮಾಡುವುದರಿಂದ ತಾವು ಮನೆಗಳನ್ನು ಕಳೆದುಕೊಳ್ಳಲಿದ್ದು, ಹೀಗಾಗಿ ಯಾವುದೇ ಕಾರಣಕ್ಕೂ ರಸ್ತೆ ವಿಸ್ತರಣೆಗೆ ಅವಕಾಶ ನೀಡುವುದಿಲ್ಲ ಎಂದು ಕೆಲವರು ರಸ್ತೆ ಅಗಲೀಕರಣವನ್ನು ವಿರೋಧಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಜಗದೀಶ್ ಮಾತನಾಡಿ, ಇರ್ವಿನ್ ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಕೈಗೊಳ್ಳುವುದರಿಂದ ಸಾಕಷ್ಟು ವಿಳಂಬವಾಗಲಿದೆ. ಹೀಗಾಗಿ ಸ್ಥಳೀಯ ಕಟ್ಟಡ ಮಾಲೀಕರ ಒಪ್ಪಿಗೆ ಪಡೆದು ರಸ್ತೆ ಅಗಲೀಕರಣ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಈ ರಸ್ತೆಯಲ್ಲಿರುವ 89 ಕಟ್ಟಡ ಮಾಲೀಕರ ಪೈಕಿ 53 ಕಟ್ಟಡಗಳ ಮಾಲೀಕರು ಇದಕ್ಕೆ ಒಪ್ಪಿಗೆ ನೀಡಿದ್ದು, ಶೇಕಡ 75 ಕಟ್ಟಡಗಳ ಮಾಲೀಕರು ಒಪ್ಪಿಗೆ ನೀಡಿದ ಕೂಡಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಬೆ ನಡೆಸಿ ಪರಿಹಾರ ನಿಗದಿಪಡಿಸಿ, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸರ್ಕಾರ ಒಪ್ಪಿಗೆ ನೀಡುತ್ತಿದ್ದಂತೆ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಲಾಗುವುದು ಎಂದರು.
ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಇರ್ವಿನ್ ರಸ್ತೆಯ ಕಟ್ಟಡಗಳ ಪ್ರತಿ ಚದರ ಅಡಿಗೆ 13,177 ರೂ. ನೀಡಲು ಡೀಸಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ ರಸ್ತೆ ವಿಸ್ತರಣೆ ವೇಳೆ ಕಟ್ಟಡಗಳಿಗೆ ಆಗುವ ಹಾನಿಗೆ ಪ್ರತ್ಯೇಕ ಪರಿಹಾರ ನೀಡಲಾಗುತ್ತದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಟ್ಟಡದ ಮೌಲ್ಯ ಅಂದಾಜು ಮಾಡಿ ವರದಿ ನೀಡಿದ ನಂತರ ಪರಿಹಾರ ನೀಡಲಾಗುವುದು. ಅಲ್ಲದೆ ರಸ್ತೆ ವಿಸ್ತರಣೆಗೆ 45 ಕೋಟಿ ರೂ.ಗಳ ಅಗತ್ಯವಿದೆ. ಸದ್ಯ ಪಾಲಿಕೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಕಾಯ್ದಿರಿಸಿದ 14 ಕೋಟಿ ರೂ. ಹಣವಿದ್ದು, ಬಾಕಿ ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಅತ್ಯಂತ ಕಿರಿದಾದ ಇರ್ವಿನ್ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದು ಕಷ್ಟಕರವಾಗಿದೆ. ಹೀಗಾಗಿ ಈ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಪಾಲಿಕೆಯ ಈ ನಿರ್ಧಾರಕ್ಕೆ ಅನೇಕ ವರ್ತಕರು ಒಪ್ಪಿಗೆ ಸೂಚಿಸಿದ್ದಾರೆ.
-ಎಂ.ಜೆ.ರವಿಕುಮಾರ್, ಮೇಯರ್.