ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಯೋಗೇಶ್ವರ ಬೃಹತ್ ಏತ ನೀರಾವರಿ ಯೋಜನೆ ಕಾಮಗಾರಿಯ ಡ್ರೋಣ್ ಸರ್ವೆà ಕಾರ್ಯಕ್ಕೆ ಸಕ್ಕರೆ ಮತ್ತು ಕೈಮಗ್ಗ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಶನಿವಾರ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಹಟ್ಟಿಯ 40 ಎಕರೆ, ತಿರ್ಲಾಪುರದ 34 ಎಕರೆ ಹಾಗೂ ತಲೆಮೊರಬದ 28 ಎಕರೆ ಪ್ರದೇಶದಲ್ಲಿರುವ ಒಟ್ಟು 102 ಎಕರೆ ಪ್ರದೇಶದ ಮೊರಂ ಕ್ವಾರಿಗಳಲ್ಲಿ ನೀರು ತುಂಬಿಸಿ, ಶ್ರೀ ಯೋಗೇಶ್ವರ ಏತನೀರಾವರಿ ಯೋಜನೆ ಮೂಲಕ 10 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.
ನವಲಗುಂದ ವಿಧಾನಸಭಾ ಕ್ಷೇತ್ರದ ರೈತರು ಬಹಳ ವರ್ಷಗಳಿಂದ ತುಪ್ಪರಿಹಳ್ಳ ಹಾಗೂ ಬೆಣ್ಣಿಹಳ್ಳ ಪ್ರವಾಹದಿಂದ ಶಾಶ್ವತ ಪರಿಹಾರ ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಯೋಗೇಶ್ವರ ಏತ ನೀರಾವರಿ ಯೋಜನೆ ರೂಪಿಸಲಾಗಿದೆ. ಈಗಾಗಲೇ ಈ ಯೋಜನೆಗೆ ಸರಕಾರ 318 ಕೋಟಿ ರೂ. ಬಿಡುಗಡೆ ಮಾಡಿದೆ. ಅದರಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಅಂತರ್ಜಲ ಮಟ್ಟ ಹೆಚ್ಚಳ, ಕುಡಿಯುವ ನೀರು ಪೂರೈಕೆ ಮತ್ತು 16 ಸಾವಿರ ಎಕರೆಗೆ ನೀರಾವರಿ ಕಲ್ಪಿಸಲಾಗುವುದು ಎಂದು ಹೇಳಿದರು.
ಪರಮಶಿವಯ್ಯ ವರದಿ ಆಧಾರದ ಮೇಲೆ ವ್ಯರ್ಥವಾಗಿ ಹರಿಯುವ ನೀರನ್ನು ಸರಕಾರದ ಜಾಗಗಳಲ್ಲಿ ತಡೆ ಹಿಡಿದು, ಸಾರ್ವಜನಿಕರಿಗೆ ಸದ್ಬಳಕೆ ಮಾಡಿಕೊಳ್ಳಲು ನೀಡಲಾಗುವುದು. ಸರ್ವೇ ಕಾರ್ಯಕ್ಕೆ 89 ಲಕ್ಷ ರೂ. ವೆಚ್ಚದಲ್ಲಿ ಎರಡು ಕಂಪನಿಗಳಿಗೆ ಟೆಂಡರ್ ನೀಡಲಾಗಿದ್ದು, ಒಂದು ವಾರದೊಳಗೆ ಸರ್ವೆà ಕಾರ್ಯ ಮುಗಿದ ತಕ್ಷಣ ಯೋಜನೆ ಕಾಮಗಾರಿ ಆರಂಭಿಸಲಾಗುತ್ತದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ನೀರಾವರಿ ಯೋಜನೆಗಳಲ್ಲಿ ಇದು ಮಾದರಿಯಾಗಲಿದೆ. ಅಲ್ಲದೇ ಈ ಪ್ರದೇಶಗಳನ್ನು ಮುಂದಿನ ದಿನಮಾನಗಳಲ್ಲಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದಾಗ ಬೆಣ್ಣಿಹಳ್ಳ, ತುಪ್ಪರಿಹಳ್ಳ ಹಾಗೂ ವಿಜಯಪುರದ ಡೋಣಿ ಹಳ್ಳವನ್ನು ಬೃಹತ್ ನೀರಾವರಿ ಇಲಾಖೆಗೆ ವಹಿಸಲಾಯಿತು. ಜಗದೀಶ ಶೆಟ್ಟರ ಅವರು ವಿಧಾನಸಭಾಧ್ಯಕ್ಷರು ಮತ್ತು ವೀರಣ್ಣ ಮತ್ತಿಕಟ್ಟಿ ಅವರು ವಿಧಾನ ಪರಿಷತ್ ಸಭಾಪತಿ ಆಗಿದ್ದ ಸಂದರ್ಭದಲ್ಲಿ ಈ ಯೋಜನೆ ಜಾರಿಗೆ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬ್ಯಾಹಟ್ಟಿ ಗ್ರಾಪಂ ಗ್ರಂಥಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಹುಬ್ಬಳ್ಳಿ ತಾಪಂ ಇಒ ಗಂಗಾಧರ ಕಂದಕೂರ, ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಎಂ. ಜಾಲಗಾರ, ಬ್ಯಾಹಟ್ಟಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಬಿ. ಮೋನಿ, ಪಮ್ಮು ಯಡ್ರಾವಿ, ಮಹದೇವಪ್ಪ ಮಾನ್ವಿ, ಸಿ.ಬಿ. ಹಿರೇಮಠ ಇನ್ನಿತರರಿದ್ದರು.
ಏನಿದು ಯೋಜನೆ?
ತುಪ್ಪರಿಹಳ್ಳ 118 ಕಿಮೀ ಹರಿಯುತ್ತಿದ್ದು, ಇದರ ಪ್ರವಾಹದಿಂದ ಬೆಣ್ಣಿಹಳ್ಳಕ್ಕೆ ಸೇರುವ ಸುಮಾರು 1 ಟಿಎಂಸಿ ಅಡಿ ನೀರನ್ನು ಸದ್ಬಳಕೆ ಮಾಡಿಕೊಂಡು ಯೋಗೇಶ್ವರ ಏತ ನೀರಾವರಿ ಯೋಜನೆ ಮೂಲಕ ಮೊರಬ, ಬ್ಯಾಹಟ್ಟಿ, ಸುಳ್ಳ ಹಾಗೂ ತಿರ್ಲಾಪುರ ಗ್ರಾಮಗಳ ಸುಮಾರು 10 ಸಾವಿರ ಹೆಕ್ಟೇರ್ ಭೂಮಿಗೆ ಹೊಸದಾಗಿ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ.