ಗದಗ: ರೋಣ ತಾಲೂಕಿನ 16 ಗ್ರಾಮಗಳಿಗೆ ನಿಗದಿಯಂತೆ ಕೃಷ್ಣಾ ಏತ ನೀರಾವರಿಯ ಮೂರನೇ ಹಂತದ ಕಾಮಗಾರಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ನೆಲ್ಲೂರು ಗ್ರಾಮದ ರೈತ ಮುಖಂಡ ಕನಕಪ್ಪ ಮಡಿವಾಳರ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರೈತರ ಋಣ ತೀರಿಸುವ ಭರವಸೆ ನೀಡಿದ್ದ ರಾಜಕಾರಣಿಗಳು, ಮೊದಲು ರೋಣ ತಾಲೂಕಿನ ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರಗಳ ರೈತ ವಿರೋಧಿ ಆರ್ಥಿಕ ನೀತಿಗಳಿಂದ ಕೃಷಿ ರಂಗ ಅಧೋಗತಿಗೆ ತಲುಪಿದೆ.
ಈ ಬಿಕ್ಕಟ್ಟನ್ನು ಪರಿಹರಿಸದಿದ್ದರೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿವಲಯವನ್ನು ಸಶಕ್ತಗೊಳಿಸಲು ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಶೀಘ್ರ ಜಾರಿಗೆ ತರಬೇಕು. ನೀರಾವರಿ ಯೋಜನೆಗಳು ಅನುಷ್ಠಾನಕ್ಕೆ ಬಂದಿರುವ ಬಿಕ್ಕಟ್ಟುಗಳ ನಿವಾರಣೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ನೀತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.
ಕಲ್ಲಿಗನೂರು ಗ್ರಾಮದ ರೈತ ಮುಖಂಡರಾದ ಮಹಾಂತೇಶ ಬಂಡಿ ಮಾತನಾಡಿ, ರೋಣ ತಾಲೂಕು ಕಳೆದ ನಾಲ್ಕು ವರ್ಷಗಳಿಂದ ನಿರಂತರ ಬರಗಾಲ ಆವರಿಸಿದೆ. ಈ ಬಾರಿಯೂ ಬರ ತಲೆದೋರಿದ್ದು, ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಅಂತರ್ಜಲ ಕುಸಿತವಾಗಿದೆ. 1000 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ದೊರೆಯುತ್ತಿಲ್ಲ. ವಸ್ತುಸ್ಥಿತಿ ಈಗಿರುವ ಹಿನ್ನೆಲೆಯಲ್ಲಿ ಕೂಡಲೇ ಕೃಷ್ಣಾ ಮೂರನೇ ಹಂತದ ಕಾಮಗಾರಿಯನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ಕೂಡ್ಲೆಪ್ಪ ಗುಡಿಮನಿ, ಕಾರ್ಯದರ್ಶಿ ಎಂ.ಎಸ್. ಹಡಪದ ಪ್ರತಿಭಟನಾ ನೇತೃತ್ವ ವಹಿಸಿದ್ದರು. ಶಾಂತಪ್ಪ ಸಜ್ಜನರ, ಶರಣು ಪೂಜಾರ, ಆನಂದ ಕುಲಕರ್ಣಿ, ದೇವರಾಜ ದೇಸಾಯಿ, ಮೇಘರಾಜ ಬಾವಿ, ಬಾಲು ರಾಠೊಡ, ಮಹೇಶ ಹಿರೇಮಠ,ರಾಠೊಡ, ಬಸವರಾಜ ಹೊಸಮನಿ, ರಾಜು ಪಾಟೀಲ, ಪಿ.ಎಸ್. ದೇಸಾಯಿ, ಕಲ್ಲನಗೌಡ ಪಾಟೀಲ, ಕಲ್ಲೀರಪ್ಪ ಬೂದಿಹಾಳ, ರಾಜು ಬಡಿಗೇರ ಪಾಲ್ಗೊಂಡಿದ್ದರು.