ಚಿಂಚೋಳಿ: ತಾಲೂಕಿನ ರೈತರ ಜೀವನಾಡಿ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಹೆಚ್ಚುವರಿ ನೀರು ಅನಾವಶ್ಯಕವಾಗಿ ಹರಿದು ಹೋಗುತ್ತಿದೆ. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ತಡೆದು ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಿ ಕೊಡುವುದಕ್ಕಾಗಿ ಗ್ರಾಮಸ್ಥರ ಬೇಡಿಕೆಯಂತೆ ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಿಸಿ ಕೊಡಲಾಗುತ್ತಿದೆ ಎಂದು ಶಾಸಕ ಡಾ|ಅವಿನಾಶ ಜಾಧವ್ ಹೇಳಿದರು.
ತಾಲೂಕಿನ ಕನಕಪುರ ಗ್ರಾಮದಲ್ಲಿ ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ 2021-22ನೇ ಸಾಲಿನ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆ ಅಡಿ ಗಾರಂಪಳ್ಳಿ-ಕನಕಪುರ ಗ್ರಾಮಗಳ ಮಧ್ಯೆ ಹರಿಯುವ ಮುಲ್ಲಾಮಾರಿ ನದಿಗೆ ಅಡ್ಡಲಾಗಿ 5 ಕೋಟಿ ರೂ.ಗಳಲ್ಲಿ ಬ್ರಿಡ್ಜ್-ಕಮ್-ಬ್ಯಾರೇಜ್ ನಿರ್ಮಾಣ ಕಾಮಗಾರಿ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಇಗಾಗಲೇ ಕೊಟಗಾ, ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಚಂದಾಪುರ, ಪೋಲಕಪಳ್ಳಿ, ಗರಗಪಳ್ಳಿ, ಜಟ್ಟೂರ ಗ್ರಾಮಗಳಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಿರುವುದರಿಂದ ರೈತರು ನೀರಿನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಕನಕಪುರ ಬ್ಯಾರೇಜ್ ನಿರ್ಮಾಣದಿಂದ ಒಟ್ಟು 375 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದರು.
ಕಂಚನಾಳ ಗ್ರಾಮದ ಹತ್ತಿರ ಹರಿಯುವ ನದಿಗೆ ಅಡ್ಡಲಾಗಿ 3.31 ಕೋಟಿ ರೂ.ಗಳಲ್ಲಿ ಬ್ರಿಡ್ಜ ಕಮ್ ಬ್ಯಾರೇಜ್ ಮಂಜೂರಿಗೊಳಿಸಲಾಗಿದೆ. ಕ್ಷೇತ್ರದ ಜನರ ಬೇಡಿಕೆಯಂತೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ನಾನು ರಾಜಕೀಯ ಮಾಡಲು ಬಂದಿಲ್ಲ. ಕೆಲಸ ಮಾಡಿ ತೋರಿಸಲಿಕ್ಕೆ ಬಂದಿದ್ದೇನೆ. 1998 ನನೆಗುದಿಗೆ ಬಿದ್ದಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆ ಪುನರಾಂಭಕ್ಕೆ ಸಾಕಷ್ಟು ಪ್ರಯತ್ನ ಮಾಡಿರುವುದರಿಂದ ಸಕ್ಕರೆ ಕಾರ್ಖಾನೆ ಕೆಲಸಗಳು ಪ್ರಾರಂಭವಾಗಿವೆ ಎಂದರು.
ಉಪ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ನಮ್ಮ ಸರಕಾರ ರೈತರ ಬೇಡಿಕೆ ಈಡೇರಿಸಿದೆ. ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸಕ್ಕರೆ ಕಾರ್ಖಾನೆಯನ್ನು 40ಕೋಟಿ ರೂ.ಗಳಲ್ಲಿ ಟೆಂಡರ್ ಪಡೆದುಕೊಂಡಿದ್ದಾರೆ. ಬರುವ ಅಕ್ಟೋಬರ್ ತಿಂಗಳಲ್ಲಿ ಇಥೆನಾಲ್ ಪ್ರಾರಂಭ ಆಗಲಿದೆ. ರೈತರು ಹೆಚ್ಚು ಕಬ್ಬು ಬೆಳೆಯಬೇಕು. ಚಿಂಚೋಳಿ ತಾಲೂಕಿನಲ್ಲಿ ಬಾಪೂರ- ಮಹೆಬೂಬನಗರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದೆ. ನಮ್ಮ ತಾಲೂಕಿನಲ್ಲಿ ಒಟ್ಟು 50 ಕಿ.ಮೀ ಇರುತ್ತದೆ. ಕೇಂದ್ರ ಭೂಸಾರಿಗೆ ಸಚಿವ ನಿತೀನ್ ಗಡ್ಕರಿ 703.68 ಕೋಟಿ ರೂ.ಅನುದಾನ ನೀಡಿರುವುದರಿಂದ ಕೇಂದ್ರ ಸರಕಾರ ತಾಲೂಕಿಗೆ ದೊಡ್ಡ ಕೊಡುಗೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕನಕಪುರ ತಾಪಂ ಮಾಜಿ ಸದಸ್ಯ ಬಸವಣ್ಣಪ್ಪ ಕುಡಹಳ್ಳಿ ಮಾತನಾಡಿ, ಗ್ರಾಮದ ಅನೇಕ ವರ್ಷಗಳ ಬೇಡಿಕೆ ಈಡೇರಿದೆ. ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗಾಗಿ ಹಾಸ್ಟೇಲ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಿಗೊಳಿಸಬೇಕು ಎಂದು ಶಾಸಕರಿಗೆ ಒತ್ತಾಯಿಸಿದರು. ಎಇಇ ಶಿವಶರಣಪ್ಪ ಕೇಶ್ವಾರ ಮಾತನಾಡಿ, ಬರುವ 6 ತಿಂಗಳಲ್ಲಿ ಬ್ಯಾರೇಜ್ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಇಒ ಅನಿಲಕುಮಾರ ರಾಠೊಡ, ಗ್ರಾಪಂ ಅಧ್ಯಕ್ಷೆ ಜಗದೇವಿ ಸಂಜೀವಕುಮಾರ ವಗ್ಗಿ, ಉಪಾಧ್ಯಕ್ಷ ಪ್ರಕಾಶರೆಡ್ಡಿ ಹುವಿನಬಾವಿ, ಮಹೇಶ ಯಲಕಪಳ್ಳಿ, ಸಂಗಪ್ಪ ಕನಕಪುರ, ನರಸಮ್ಮ ಆವಂಟಿ, ಜಗಮ್ಮ ಮೇತ್ರಿ, ತಿಪ್ಪಣ್ಣ ತಾಜಲಾಪುರ, ಶಾಮರಾವ್, ಶಾಮರಾವ್ ರುಸ್ತಂಪುರ, ನಾಗರೆಡ್ಡಿ ರುಸ್ತಂಪುರ, ಪ್ರಕಾಶರೆಡ್ಡಿ ಹೂವಿನಬಾವಿ, ಹನ್ನುಮಿಯ ಹೂವಿನಬಾವಿ, ಜಗನ್ನಾಥ ಹೂವಿನಬಾವಿ, ಹಣಮಂತ ಯಲಕಪಳ್ಳಿ, ಮಹಾಂತಗೌಡ, ಉಮೇಶ ನೀಲಪ್ಪ, ಗೌತಮ ಬೇನೂರ, ಹಣಮಂತರಾವ್ ದೇಸಾಯಿ ಇನ್ನಿತರಿದ್ದರು. ಲಕ್ಷ್ಮಣ ಆವಂಟಿ ಪ್ರಸ್ತಾವಿಕ ಮಾತನಾಡಿದರು. ರೇವಣಸಿದ್ದಯ್ಯ ಸ್ವಾಮಿ ಸ್ವಾಗತಿಸಿದರು. ಶ್ರೀಧರ ವಗ್ಗಿ ವಂದಿಸಿದರು.