Advertisement

ರಾಜ್ಯದಲ್ಲಿ 20 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ:ನಿತಿನ್‌ ಗಡ್ಕರಿ

06:20 AM Mar 25, 2018 | Team Udayavani |

ಬೆಂಗಳೂರು: ಕರ್ನಾಟಕದ ರೈತರ ನೀರಿನ ಸಮಸ್ಯೆ ನಿವಾರಣೆಗೆ ನದಿಗಳ ಜೋಡಣೆ ಅಗತ್ಯವಾಗಿದ್ದು, ರಾಜ್ಯ ಸರ್ಕಾರದ ಸಹಯೋಗದಲ್ಲಿ  ಯೋಜನೆಗಳನ್ನು ಜಾರಿಗೊಳಿಸುವ ಮೂಲಕ 15ರಿಂದ 20 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಹೇಳಿದರು.

Advertisement

ನಗರದ ಕೆಂಗೇರಿ ಬಳಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಆವರಣದಲ್ಲಿ ಶನಿವಾರ ಬೆಂಗಳೂರು- ಮೈಸೂರು ಷಟ³ಥ ಹೆದ್ದಾರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಕಾರಂಜಾ, ರಾಮೇಶ್ವರ, ನಾರಾಯಣ ಎಡದಂಡೆ ನಾಲೆ, ತುಂಗಾ ಮೇಲ್ದಂಡೆ ಹಾಗೂ ಭೀಮಾ ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಸುಮಾರು 4000 ಕೋಟಿ ರೂ. ಮಂಜೂರು ಮಾಡಲಾಗಿದೆ. ಒಂದು ಯೋಜನೆ ಪೂರ್ಣಗೊಂಡಿದ್ದು, ಮೂರು ಯೋಜನೆಗಳು ಡಿಸೆಂಬರ್‌ಗೆ ಪೂರ್ಣಗೊಳ್ಳಲಿವೆ. ಮತ್ತೂಂದು ಯೋಜನೆ ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ಇದರಿಂದ ಬೀದರ್‌, ಕಲಬುರಗಿ, ಬೆಳಗಾವಿ, ಯಾದಗಿರಿ, ವಿಜಯಪುರ, ಹಾವೇರಿ ಜಿಲ್ಲೆಯ 1.25 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು.

ಕೃಷ್ಣಾದಿಂದ ಆಲಮಟ್ಟಿವರೆಗೆ ಮಹಾನದಿ, ಗೋದಾವರಿ, ಕೃಷ್ಣಾ, ಪೆನ್ನಾರ್‌, ಕಾವೇರಿ, ಮಹದಾಯಿ, ಗುಂಡೂರು ನದಿ ಜೋಡಣಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಕೈಗೊಳ್ಳಲು ಚಿಂತಿಸಲಾಗಿದ್ದು, ಪರಿಸರ ಇಲಾಖೆ ಅನುಮತಿ ನೀಡಿದರೆ ಕೈಗೆತ್ತಿಕೊಳ್ಳಲಾಗುವುದು. ಜತೆಗೆ ನೇತ್ರಾವತಿ- ಹೇಮಾವತಿ ನದಿ ಜೋಡಣೆಗೂ ಸಾಧ್ಯತಾ ವರದಿ ಸಿದ್ಧವಾಗಿದ್ದು, ಅನುಮೋದನೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರವು ನದಿಗಳ ಜೋಡಣೆಗೆ ಸಂಬಂಧಪಟ್ಟಂತೆ ಹಲವು ಪ್ರಸ್ತಾವ ಸಲ್ಲಿಸಿತ್ತು. ಅದರಲ್ಲಿ ಅಘನಾಶಿನಿ- ವರದಾ ನದಿ ಜೋಡಣೆ ಸಂಬಂಧ ಸಾಧ್ಯತಾ ವರದಿ ಸಿದ್ಧವಾಗಿದ್ದು, ನಾಲ್ಕು ಯೋಜನೆಗಳಿಗೆ ಅನುಮೋದನೆ ನೀಡಲಾಗುವುದು. ಈ ನಾಲ್ಕು ಯೋಜನೆಗಳಿಂದ ರಾಜ್ಯದಲ್ಲಿ ಸುಮಾರು ಆರು ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ವಿವರಿಸಿದರು.

ಪೋಲಾವರಂ, ಕೃಷ್ಣಾ, ಪೆನ್ನಾರ್‌, ಕಾವೇರಿ ನದಿಗಳನ್ನು ಜೋಡಿಸಿದರೆ 750 ಟಿಎಂಸಿ ನೀರು ಲಭ್ಯವಾಗಲಿದ್ದು, ಈ ಎಲ್ಲ ರಾಜ್ಯಗಳಿಗೆ ನೀರು ಸಿಗಲಿದೆ. ಒಂದು ಲಕ್ಷ ಕೋಟಿ ರೂ. ವೆಚ್ಚದ ಎರಡೂ ಯೋಜನೆಗೆ ಡಿಸೆಂಬರ್‌ನೊಳಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

Advertisement

ಬಂದರು ಮೇಲ್ದರ್ಜೆಗೇರಿಸಲು ಬದ್ಧ
ಬೇಲೆಕೇರಿಯಲ್ಲಿನ ಬಂದರನ್ನು ಸುಮಾರು 3000 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಈ ಸಂಬಂಧ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿದರೆ ಅನುಮೋದನೆ ನೀಡಲಾಗುವುದು. ಬೇಲೆಕೇರಿ ಬಂದರು ಮೇಲ್ದರ್ಜೆಗೇರಿಸುವುದರಿಂದ ವ್ಯಾಪಾರ- ವಹಿವಾಟು ವೃದ್ಧಿಗೆ ಅನುಕೂಲವಾಗುವ ಜತೆಗೆ ಕರಾವಳಿ ಭಾಗದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿವೆ ಎಂದು ಹೇಳಿದರು.

ನೆಲ- ಜಲ ಸಂಪರ್ಕ
*ಕರ್ನಾಟಕದಲ್ಲಿ ನೀರಾವರಿ ಯೋಜನೆಗಳಿಗೆ ಎರಡು ಲಕ್ಷ ಕೋಟಿ ರೂ. ಹಾಗೂ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿಗೆ ಎರಡು ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಇವು ಕರ್ನಾಟಕದ ಭವಿಷ್ಯ ಬದಲಾಯಿಸಲಿವೆ. ಯಾವುದೇ ರಾಜ್ಯದ ಅಭಿವೃದ್ಧಿಗೆ ರಸ್ತೆ, ವಿದ್ಯುತ್‌, ನೀರಿನ ಸಂಪರ್ಕ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕರ್ನಾಟಕ ಬೆಳವಣಿಗೆಯಾಗುತ್ತಿದ್ದು, ಸಮೃದ್ಧವಾಗಿ ಅಭಿವೃದ್ಧಿಯಾಗಲಿದೆ.
– ನಿತಿನ್‌ ಗಡ್ಕರಿ, ಕೇಂದ್ರ ಜಲಸಂಪನ್ಮೂಲ, ರಸ್ತೆ ಸಾರಿಗೆ, ಹೆದ್ದಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next