ಬೈಲಹೊಂಗಲ: ಚಚಡಿ ಏತ ನೀರಾವರಿ ಯೋಜನೆಯ ಮುಖ್ಯ ಕಾಲುವೆ 6 ಕಿ.ಮೀ ರಿಂದ 39 ಕಿಮೀ ವರೆಗಿನ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಸಮಾರಂಭದ ಉದ್ಘಾಟನೆ ಜ.26ರಂದು 12 ಗಂಟೆಗೆ ವನ್ನೂರ ಗ್ರಾಮದ ಸರಕಾರಿ ಪಿಯುಸಿ ಕಾಲೇಜಿನ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಂದ ನೆರವೇರಲಿದೆ ಎಂದು ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಜ.26ರಂದು ನಡೆಯಲಿರುವ ಚಚಡಿ ಏತ ನೀರಾವರಿ ಯೋಜನೆಯ ಅಡಿಗಲ್ಲು, ನೇಸರಗಿ ಸರಕಾರಿ ಪದವಿ ಕಾಲೇಜಿನ ಹೆಚ್ಚುವರಿ ಕೊಠಡಿಗಳ ಉದ್ಘಾಟನೆ, ದೇಶನೂರ ನೂತನ ಪ್ರಾಥಮಿಕ ಕೇಂದ್ರ ಉದ್ಘಾಟನೆ ರವಿವಾರ ಕುರಿತು ನಡೆದ ಪೂರ್ವ ಸಭೆಯಲ್ಲಿ ಅವರು ಮಾತನಾಡಿದರು.
ಜಲ ಸಂಪನ್ಮೂಲ ಇಲಾಖೆ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ಈ ಭಾಗದ ರೈತಾಪಿ ವರ್ಗದ ಸಂಕಷ್ಟವನ್ನು ನಿವಾರಿಸುವ ಸಲುವಾಗಿ ಮಾರ್ಕಂಡೇಯ ಮುಖ್ಯ ಕಾಲುವೆಯಿಂದ ಚಚಡಿ ಏತನೀರಾವರಿ ಮೂಲಕ 2718 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಮಾಡಲು ಉದ್ದೇಶಿಸಲಾಗಿದೆ ಎಂದರು.
ಜ.26 ರಂದು ಬೆಳಗ್ಗೆ 11ಗಂಟೆಗೆ ತಾಲೂಕಿನ ದೇಶನೂರ ಗ್ರಾಮದಲ್ಲಿ 2.31ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹಾಗೂ ಅಂದು 12 ಗಂಟೆಗೆ ನೇಸರಗಿಯಲ್ಲಿ 95 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಾಣಗೊಂಡ ಸರಕಾರಿ ಪದವಿ ಕಾಲೇಜಿನ ಹೆಚ್ಚುವರಿ ಕೊಠಡಿ, ಗ್ರಂಥಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಸಂಸದರಾದ ಅನಂತಕುಮಾರ ಹೆಗಡೆ, ಮಂಗಳಾ ಅಂಗಡಿ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಜಿಲ್ಲೆಯ ಎಲ್ಲ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೇಸರಗಿ ನೂತನ ಪ್ರಥಮ ದರ್ಜೆ ಮಹಾವಿದ್ಯಾಲಯ, ದೇಶನೂರ ಪ್ರಾಥಮಿಕ ಆರೋಗ್ಯ ಕೇಂದ್ರ, ಚಚಡಿ ಏತ ನೀರಾವರಿ ಅಡಿಗಲ್ಲು ಉದ್ಘಾಟನೆ ನಡೆಯುವ ಸಮಾರಂಭದ ಸಿದ್ಧತೆ ಪರಿಶೀಲಿಸಿದರು.
ಸಭೆಯಲ್ಲಿ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ. ಎಪ್.ಕೊಳದೂರ, ಅಡಿವೆಪ್ಪ ಮಾಳಣ್ಣವರ, ಶಂಕರ ತಿಗಡಿ, ಎಸ್. ಎಂ. ಪಾಟೀಲ, ಮಲ್ಲೇಶ ಮಾಳಣ್ಣವರ, ತಾಪಂ ಕಾರ್ಯನಿರ್ವಾಹಕ ಅ ಧಿಕಾರಿ ಸುಭಾಷ ಸಂಪಗಾವಿ, ಪ್ರಾಚಾರ್ಯ ಎಂ.ವೈ. ಹಿತ್ತಾಲಗೌಡರ, ಗ್ರಾಪಂ ಅಧ್ಯಕ್ಷೆ ಸುಶೀಲಾ ತುಬಾಕಿ, ಪಿಎಸ್‌ಐ ವೈ.ಎಲ್. ಶೀಗಿಹಳ್ಳಿ, ದೇಶನೂರ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಚಡಿಚಾಳ, ಉಪಾಧ್ಯಕ್ಷೆ ಶೋಭಾ ಭಜಂತ್ರಿ, ಮಾಜಿ ತಾಪಂ ಸದಸ್ಯ ಶ್ರೀಶೈಲ ಕಮತಗಿ, ವನ್ನೂರ ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಮಿಂಡೊಳ್ಳಿ, ಸದಸ್ಯ ನಿಂಗಪ್ಪ ಪೋತಲಿ, ವಿಠಲ ಹಣ್ಣಿಕೇರಿ, ಎಸ್.ಎಫ್. ನಾಯಕ, ಪಿಡಿಒ ಬಿ.ವೈ. ನಾಯಕ, ಬಸವರಾಜ ಅಂಗಡಿ, ಬಾಬು ಶೇಬನ್ನವರ, ಸಿದ್ದಪ್ಪ ಆಡಿನ, ದೊಡ್ಡಪ್ಪ ಬಟ್ಟಂಗಿ ಇತರರಿದ್ದರು.